

ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚಿನ ದಿನಗಳಲ್ಲಿ ಮಹಾನ್ ವ್ಯಕ್ತಿಗಳನ್ನು ಕೆಲವರು ತಮ್ಮ ಜಾತಿಗೆ ಮಾತ್ರ ಸೀಮಿತ ಮಾಡಿಕೊಂಡಿದ್ದಾರೆ. ಕನಕದಾಸರು ಕೇವಲ ಕುರುಬ ಸಮಾಜಕ್ಕೆ ಸೀಮಿತರಲ್ಲ. ಕನಕದಾಸರಂಥ ಮಹಾನ್ ಪವಾಡ ಪುರುಷ ಕನ್ನಡ ನಾಡಿನವರಾಗಿದ್ದು ನಮ್ಮ ಅದೃಷ್ಟ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಆಯೋಜಿಸಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮರ ಜಯಂತಿಯ ದಿನಗಳಂದು ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಬಾರದು. ಜಯಂತಿ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸದಿದ್ದರೆ ಮಹಾತ್ಮರ ಸಂದೇಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಆಗುವುದಿಲ್ಲ ಎಂದರು.
ಕೇ0ದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಸುಮಾರು 316 ಕೀರ್ತನೆಗಳನ್ನು ರಚಿಸಿರುವ ಅವರು, ಅಂದಿನ ಕಾಲದಲ್ಲಿ ಜಾತಿ ರಹಿತವಾಗಿ ಬದುಕಿದವರು ಎಂದರು.
ಜೆಎಸ್‌ಎಸ್ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಗೋವಿಂದರಾಜ ತಲಕೋಡ ಕನಕದಾಸರ ಜೀವನ, ಸಾಧನೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮನಸೂರು ಶ್ರೀ ರೇವಣಸಿದ್ಧೇಶ್ವರ ಮಹಾಮಠದ ಡಾ. ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಎನ್.ಎಚ್. ಕೋನರಡ್ಡಿ, ಹುಡಾ ಅಧ್ಯಕ್ಷ ಶಾಕಿರ ಸನದಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪ್ರದೇಶ ಕುರುಬರ ಸಂಘದ ಅಧ್ಯಕ್ಷೆ ಯಲ್ಲಮ್ಮ ಡಿ. ನಾಯ್ಕರ, ಸಂಘದ ನಿರ್ದೇಶಕರಾದ ದೇವರಾಜ ಕಂಬಳಿ, ಈಶ್ವರ ಕಾಳಪ್ಪನವರ, ಸಂಘದ ಉಸ್ತುವಾರಿ ನಿರ್ದೇಶಕ ಬಸವರಾಜ ಮಲಕಾರಿ, ಇತರರಿದ್ದರು.