

ಕೊಪ್ಪಳ: ನಗರ ಸೇರಿ ಜಿಲ್ಲಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಶರನ್ನವರಾತ್ರಿ ಅಂಗವಾಗಿ ಕಳೆದ ಒಂಭತ್ತು ದಿನಗಳಿಂದ ದೇವಿಗೆ ವಿವಿಧ ಪೂಜೆ ಸಲ್ಲಿಸಿರುವ ಭಕ್ತರು ಇಂದು ಆಯುಧ ಪೂಜೆ ನೆರವೇರಿಸಲಿದ್ದಾರೆ.
ನಿತ್ಯ ಜನರು ಬನ್ನಿ ಮರ ಸೇರಿ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ, ವಿಶೇಷ ಹರಕೆ ಸಲ್ಲಿಸುತ್ತಿದ್ದಾರೆ. ಕೊಪ್ಪಳದ ಕನ್ನಿಕಾ ಪರಮೇಶ್ವರಿ ದೇವಾಲಯ, ಭಾಗ್ಯನಗರದ ಅಂಬಾ ಭವಾನಿ ದೇವಾಲಯ, ನಾಡಿನ ಶಕ್ತಿ ದೇವತೆಗಳಲ್ಲಿ ಒಂದಾದ ಹುಲಿಗಿಯ ಹುಲಿಗೆಮ್ಮ ದೇವಾಲಯ ಸೇರಿ ನಗರದ ವಿವಿಧ ಬಡಾವಣೆಗಳು, ಗ್ರಾಮೀಣ ಭಾಗದಲ್ಲಿ ದಸರಾ ಸಂಭ್ರಮ ಜರುಗುತ್ತಿದೆ. ಕಳೆದ ವರ್ಷ ಬರದಿಂದ ಸಪ್ಪೆ ಎನಿಸಿದ್ದ ಹಬ್ಬಾಚರಣೆ ಈ ಬಾರಿ ಅದ್ದೂರಿಯಾಗಿ ನಡೆಯುತ್ತಿದೆ. ಗಡಿಯಾಕ ಕಂಬ ವೃತ್ತ, ರೈತ ಸಂಪರ್ಕ ಕೇಂದ್ರ ಆವರಣ ಸೇರಿ ವಿವಿಧೆಡೆ ದೇವಿ ಮೂರ್ತಿ ಪ್ರತಿಫಿ್ಠಾಪನೆಗೊಂಡಿದ್ದು, ನಿತ್ಯವೂ ಧಾರ್ಮಿಕ, ಸಾಂಸ್ಕತಿಕ ಕಾರ್ಯಕ್ರಮಗಳು ವೈಭವದಿಂದ ಜರುಗಿವೆ.
ಆಯುಧ ಪೂಜೆ ಹಿನ್ನೆಲೆಯಲ್ಲಿ ಗುರುವಾರ ಹಬ್ಬದ ಖರೀದಿ ಜೋರಾಗಿ ಕಂಡು ಬಂತು. ಮಾರುಕಟ್ಟೆಯಲ್ಲಿ ತರಹೇವಾರಿ ಹೂಗಳು, ಹಣ್ಣು, ಬಾಳೆದಿಂಡು ಮತ್ತು ಪುಜಾ ಸಾಮಗ್ರಿ ಖರೀದಿಯಲ್ಲಿ ಜನರು ತೊಡಗಿದರು. ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಾರ್ವಜನಿಕ ಮೈದಾನದಲ್ಲಿ ಪೂಜಾ ಸಾಮಗ್ರಿ ಖರೀದಿಗೆ ನಗರಸಭೆಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ವರ್ತಕರು ಸಾರ್ವಜನಿಕ ಮೈದಾನದಲ್ಲಿ ಮಾರಾಟ ಮಾಡಿದರು. ಜವಾಹರ ರಸ್ತೆ, ಮಾರುಕಟ್ಟೆ ಪ್ರದೇಶ ಹಾಗೂ ಬಸ್ ನಿಲ್ದಾಣ ಮುಂಭಾಗದಲ್ಲಿಯೂ ಗ್ರಾಮೀಣ ಭಾಗದ ರೈತರು ಹೂ, ಹಣ್ಣು, ಬಾಳೆದಿಂಡು ಮಾರಾಟ ಮಾಡಿದ್ದು ಕಂಡುಬಂತು.
ಬೆಲೆ ಏರಿಕೆ ಬಿಸಿ : ಸಂಭ್ರಮದ ನಡುವೆ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಿದೆ. ಅಧಿಕ ಮಳೆ ಕಾರಣ ಬೆಳೆ ಸರಿಯಾಗಿ ಬಾರದೆ ಬೇಡಿಕೆ ಹೆಚ್ಚಿದೆ. ಪೂಜಾ ಸಾಮಗ್ರಿ, ದಿನಸಿ, ಬಟ್ಟೆ ಬೆಲೆ ದುಪ್ಪಟ್ಟಾಗಿದೆ. ಡಜನ್ ಬಾಳೆ ಹಣ್ಣಿಗೆ 80ರೂ., ಸೇಬು ಕೆಜಿಗೆ 200ರೂ., ಚಿಕ್ಕು, ಕಿತ್ತಳೆ 120ರೂ., ಪೇರಲ -80ರೂ., ಮಲ್ಲಿಗೆ ಮಾರು 200ರೂ., ಕನಕಾಂಬರ 300ರೂ. ಚಿಟ್ಟಿ ಗುಲಾಬಿ ಕೆ.ಜಿ.ಗೆ 600 ರೂ., ಸೇವಂತಿ 400&500 ರೂ. ಕೆಜಿಗೆ, ಚೆಂಡು ಹೂ ಕೆಜಿಗೆ 150ರೂ., ಜೋಡಿ ಬಾಳೆ ದಿಂಡು 50ರೂ., ಅಡಕೆ ಹೂ 20ರೂ., ನಿಂಬೆಹಣ್ಣು 20ರೂ.ಗೆ 3 ಹಾಗೂ ಕುಂಬಳಕಾಯಿ ಚಿಕ್ಕದು 80 ರಿಂದ 100, ದೊಡ್ಡದು 100&150ರೂ.ಗಿಂತೆ ಮೇಲ್ಪಟ್ಟು ಮಾರಾಟ ಮಾಡಲಾಗುತ್ತಿದೆ.