

ಕೊಪ್ಪಳ:ನವರಾತ್ರಿ ಅಂಗವಾಗಿ ನಾಡಿನ ಶಕ್ತಿ ದೇವತೆಯಲ್ಲಿ ಒಂದಾದ ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಾನದಲ್ಲಿ ಸಂಭ್ರಮ ಮನೆ ಮಾಡಿದೆ. ಅ.15ರಿಂದಲೇ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿವೆ.
ಅ.18ರಂದು ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಬೆಳ್ಳಿ ಮಂಟಪದಲ್ಲಿ ದೇವಿಗೆ ಶಾರ್ದೂಲ ಪೂಜೆ ಇರಲಿದೆ. ಅ.19ರಂದು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ಗೋಷ್ಠಿ, ದೇವಿಗೆ ಬೆಳ್ಳಿ ಮಂಟಪದಲ್ಲಿ ಸಿಂಹ ವಾಹನ ಪೂಜೆ,
ಅ.20ರಂದು ಸಾಂಸ್ಕೃತಿಕ ಕಾರ್ಯಕ್ರಮ, ಬೆಂಗಳೂರಿನ ಭೂಮ್ತಾಯಿ ಬಳಗದಿಂದ ಜಾನಪದ ಜಾತ್ರೆ, ಉಧೋ ಉಧೋ ಹುಲಿಗೆಮ್ಮ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಅ.23ರಂದು ವಿಜಯ ದಶಮಿ ಅಂಗವಾಗಿ ಮಧ್ಯಾಹ್ನ 3 ಗಂಟೆಗೆ ದೇವಿ ದಶಮಿ ದಿಂಡಿನ ಉತ್ಸವ ನಡೆಯಲಿದೆ. ಶಮಿ ವೃಕ್ಷಕ್ಕೆ ತೆರಳಿ, ಪೂಜೆ ಸಲ್ಲಿಸಲಾಗುವುದು.
ನಂತರ ದೇವಸ್ಥಾನದಲ್ಲಿ ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರ ಪುಷ್ಪದೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ.
ಹುಲಿಗಿಯ ಹಳೇ ತುಂಗಭದ್ರಾ ಪ್ರೌಢ ಶಾಲೆಯಲ್ಲಿ ಪುರುಷರ ಹಾಗೂ ಮಹಿಳೆಯರ ರಾಜ್ಯಮಟ್ಟದ ಮುಕ್ತ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ.