

ಬೆಂಗಳೂರು : ಲಾಕ್‌ಡೌನ್ ಹಿನ್ನೆಲೆಯಲ್ಲಿ ತೊಂದರೆಗೆ ಸಿಲುಕಿರುವ ವಲಸೆ ಹಾಗೂ ಬಡ ಕಾರ್ಮಿಕರ ಹಸಿದ ಹೊಟ್ಟೆಗಳನ್ನು ‘ದಾಸೋಹ’ ಸಹಾಯವಾಣಿ ತುಂಬುತ್ತಿದೆ. ಕರೊನಾ ತಡೆಗಟ್ಟಲು ಕೈಗೊಂಡಿರುವ ಬಿಗಿಕ್ರಮಗಳಿಂದಾಗಿ ಕಷ್ಟಕ್ಕೆ ಸಿಲುಕಿದವರಿಗೆ ಆತ್ಮಸ್ಥೈರ್ಯ ತುಂಬಲು ಆಸರೆಯಾಗಿದೆ.
ರಾಜ್ಯ ಸರ್ಕಾರ ಆರಂಭಿಸಿರುವ ಈ ದಾಸೋಹ ಸಹಾಯವಾಣಿ (155214) ಪ್ರತಿದಿನ 2 ಲಕ್ಷ ಆಹಾರ ಪೊಟ್ಟಣಗಳನ್ನು ವಿತರಿಸಿ ಹಸಿವು ನೀಗಿಸುತ್ತಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಸಹಾಯವಾಣಿ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ಸ್ಪಂದಿಸಲು 100 ಸಿಬ್ಬಂದಿ ಇದ್ದಾರೆ. ಕರೆ ಬಂದ ತಕ್ಷಣ ವಿವರ ಪಡೆದು ಆಹಾರ ಪೊಟ್ಟಣ ತಲುಪಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಹಾರದ ಅವಶ್ಯಕತೆ ಇರುವ ವಲಸೆ ಹಾಗೂ ಬಡ ಕಾರ್ಮಿಕರು 155214 ಸಂಖ್ಯೆಯನ್ನು ಸಂಪರ್ಕಿಸಬಹುದು. ಕರೆ ಮಾಡಿದವರು ಯಾವ ಸ್ಥಳದಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ಅಲ್ಲಿಗೆ ಆಹಾರ ತಲುಪಿಸಲು ಈ ಸಹಾಯವಾಣಿ ನೆರವು ನೀಡಲಿದೆ.