

ರಬಕವಿ/ಬನಹಟ್ಟಿ: ಕಾಯಕ, ದಾಸೋಹ ಎರಡೂ ಸನಾತನ ಪರಂಪರೆಗಳಾಗಿದ್ದು, 12ನೇ ಶತಮಾನದ ಶರಣರು ತಮ್ಮ ಜೀವನದುದ್ದಕ್ಕೂ ಕಾಯಕ ಮತ್ತು ದಾಸೋಹಕ್ಕೆ ಅಗ್ರ ಸ್ಥಾನ ನೀಡಿದ್ದರು ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ನುಡಿದರು.
ಭೀಮನ ಅಮಾವಾಸ್ಯೆ ಪ್ರಯುಕ್ತ ರಬಕವಿಯ ದಾನಮ್ಮದೇವಿ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ೌಂಡೇಷನ್ ನಿಂದ ಸೋಮವಾರ ಆಯೋಜಿಸಿದ್ದ ದಾಸೋಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಂಗಮರು, ಪರಸ್ಥಳದ ಯಾತ್ರಿಕರು ಹಾಗೂ ಬಡವರಿಗೆ ಅನ್ನ ನೀಡುವುದನ್ನು ಪರಂಪರೆಯಂತೆ ಪಾಲಿಸಿಕೊಂಡಿದ್ದ ನಮ್ಮ ಪೂರ್ವಜರು ಪ್ರತಿ ಜೀವಿಗೂ ಜೀವಿಸುವ ಹಕ್ಕಿರುವ ಕಾರಣ ಅನ್ನ ಪರಬ್ರಹ್ಮ ಎಂದು ಕರೆದು ದಾಸೋಹ ಕಾರ್ಯಕ್ಕೆ ಮನ್ನಣೆ ನೀಡಿದ್ದರು. ಬಸವಾದಿ ಶರಣರ ದಾಸೋಹ ತತ್ವವನ್ನೇ ರಾಜ್ಯದ ಎಲ್ಲ ಮಠಾಧೀಶರು ಅಳವಡಿಸಿಕೊಂಡ ಕಾರಣ ದರ್ಶನಾರ್ಥಿಗಳಾಗಿ ಬಂದ ಭಕ್ತರು, ವಿದ್ಯಾರ್ಥಿಗಳಿಗೆ ಅನ್ನದಾಸೋಹ ನಿರಂತರವಾಗಿ ಇಂದಿಗೂ ಸಾಗುತ್ತಿದೆ. ಜೀವಕ್ಕೆ ಬಲ ತುಂಬಲು ಕಾಯಕಕ್ಕೆ ನೆರವಾಗಲು ಅನ್ನದ ಅಗತ್ಯತೆ ಅವಶ್ಯವಾಗಿದೆ. ನಾವು ದಿನನಿತ್ಯ ಪ್ರಸಾದ ಸೇವಿಸುವ ಮುನ್ನ ಜಂಗಮರಿಗೆ ಇಲ್ಲವೇ ಯಾವುದೇ ಅತಿಥಿಗೆ ದಾಸೋಹ ನಡೆಸುವ ಪರಂಪರೆ ನಮ್ಮಲ್ಲಿ ಈಗಲೂ ಜೀವಂತವಾಗಿದೆ. ದಾನಮ್ಮದೇವಿ ಪೂರ್ವದಲ್ಲಿ ಲಿಂಗಮ್ಮ ಹೆಸರಿನವಳಾಗಿದ್ದರೂ ತನ್ನ ದಾನಶೂರತೆಯ ಕಾರಣಕ್ಕೆ ಅಣ್ಣ ಬಸವಣ್ಣನಿಂದ ದಾನಸೂರೆ ದಾನಮ್ಮ ಎಂದು ಬಿರುದಾಂಕಿತಳಾದಳು. ಕಲ್ಯಾಣದಲ್ಲಿ ಅಡುಗೆಮನೆಯ ಮುಖ್ಯಸ್ಥಳಾಗಿದ್ದಳು. ಇಂಥ ಹಿನ್ನೆಲೆಯ ಶ್ರೀದೇವಿಯ ದೇವಸ್ಥಾನದಲ್ಲಿ ಅನ್ನ ದಾಸೋಹ ಆರಂಭಿಸುವ ಮೂಲಕ ಕೊಟ್ರಶೆಟ್ಟಿ ೌಂಡೇಶನ್ ಹಾಗೂ ದೇವಸ್ಥಾನ ಟ್ರಸ್ಟ್ ಸಮಿತಿ ಸಾರ್ಥಕ ಕೆಲಸ ಮಾಡುತ್ತಿದೆ ಎಂದರು.
ಶಿವಜಾತ ಉಮದಿ, ಸೋಮಶೇಖರ ಕೊಟ್ರಶೆಟ್ಟಿ, ಬಸವರಾಜ ದಲಾಲ, ನಾರಾಯಣ ಬೋರಗಿನಾಯಕ, ಮಲ್ಲಿಕಾರ್ಜುನ ಗಡೆಣ್ಣವರ, ಮುರುಗೇಶ ಮಿರ್ಜಿ ಇದ್ದರು.