

ಹಳೇಬೀಡು: ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಹೋಬಳಿಯ ನಾಗರಾಜಪುರ ಗ್ರಾಮದಲ್ಲಿ ಮನೆಯೊಂದು ಕುಸಿದಿದ್ದು, ಹಳೇಬೀಡಿನಲ್ಲಿ ಬೆಣ್ಣೆಗುಡ್ಡ ಆಂಜನೇಯ ದೇಗುಲದ ದಾಸೋಹ ಕಟ್ಟಡವು ಧರೆಗುರುಳಿದೆ.
ಹೋಬಳಿಯಾದ್ಯಂತ ಅವಿರತವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಸಮೀಪದ ನಾಗರಾಜಪುರ ಗ್ರಾಮದ ರಾಮ ಎಂಬುವರ ವಾಸದ ಮನೆಯ ಮುಖ್ಯ ಗೋಡೆಯು ಮಂಗಳವಾರ ರಾತ್ರಿ ಕುಸಿದಿದೆ. ಪರಿಣಾಮ ಮನೆಯ ಛಾವಣಿಯು ಮುರಿದಿದ್ದು ದಿನಬಳಕೆ ಅಗತ್ಯ ವಸ್ತುಗಳಿಗೆ ಹಾನಿಯಾಗಿದೆ. ಹಳೆಯ ಮನೆಯನ್ನು ನವೀಕರಣ ಮಾಡುವ ಉದ್ದೇಶದಿಂದ ಈಚೆಗೆ ಗ್ರಾಮ ಪಂಚಾಯಿತಿಗೆ ಅನುದಾನ ಕೋರಿ ಅರ್ಜಿ ಸಲ್ಲಿಸಿದ್ದರು. ಅದಕ್ಕೂ ಮುನ್ನವೇ ಮನೆಯ ಒಂದು ಪಾರ್ಶ್ವ ಕುಸಿದಿದ್ದು, ಅಂದಾಜು 1.50 ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಗ್ರಾಮ ಲೆಕ್ಕಾಧಿಕಾರಿ ಗಣೇಶ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ದಾಸೋಹ ಕಟ್ಟಡ ಧರೆಗೆ: ಸಮೀಪದ ಬಸ್ತಿಹಳ್ಳಿ ಗ್ರಾಮದ ಬೆಣ್ಣೆಗುಡ್ಡ ಆಂಜನೇಯ ದೇಗುಲಕ್ಕೆ ಸೇರಿದ ದಾಸೋಹ ಕಟ್ಟಡದ ಗೋಡೆಯು ಸತತ ಮಳೆಗೆ ಉರುಳಿದ ಪರಿಣಾಮ ನೆಲ ಹಾಗೂ ಇನ್ನಿತರ ಭಾಗಗಳಿಗೆ ತೀವ್ರ ಹಾನಿಯಾಗಿದೆ. ದೇಗುಲದಲ್ಲಿ ಪ್ರತಿ ಹುಣ್ಣಿಮೆ ಮತ್ತು ಹಬ್ಬದ ದಿನಗಳಲ್ಲಿ ವಿಶೇಷ ಪೂಜೆಯೊಂದಿಗೆ ದಾಸೋಹವನ್ನು ಏರ್ಪಡಿಸಲಾಗುತ್ತದೆ. ಕಾರ್ಯಕ್ರಮದ ಅಡುಗೆ ತಯಾರಿಕೆಯು ಸದ್ಯ ಕುಸಿದಿರುವ ಕಟ್ಟಡದಲ್ಲೇ ನಡೆಯುತ್ತಿತ್ತು. ಪಾತ್ರೆ ಹಾಗೂ ದಿನಸಿ ಪದಾರ್ಥಗಳನ್ನೂ ಇಲ್ಲೇ ದಾಸ್ತಾನು ಇರಿಸಲಾಗುತ್ತಿತ್ತು. ಪ್ರಸ್ತುತ ಇವೆಲ್ಲಕ್ಕೂ ತೀವ್ರ ಅಡಚಣೆಯಾಗಿದ್ದು, ಅಗತ್ಯ ವಸ್ತುಗಳನ್ನು ದೇಗುಲದ ಗರ್ಭಗುಡಿಯಲ್ಲೇ ಇಡುವಂತಾಗಿದೆ.
ಬೆಣ್ಣೆಗುಡ್ಡ ಆಂಜನೇಯ ದೇಗುಲಕ್ಕೆ ನೂರಾರು ಭಕ್ತರಿದ್ದು, ಪ್ರಸಾದ ತಯಾರಿಕೆ ಹಾಗೂ ದಾಸೋಹ ವ್ಯವಸ್ಥೆಗೆ ಕಟ್ಟಡವು ಉಪಯೋಗವಾಗುತ್ತಿತ್ತು. ಈಗ ಗೋಡೆ ಬಿದ್ದ ಪರಿಣಾಮ ಇಡೀ ಕಟ್ಟಡಕ್ಕೇ ಹಾನಿಯಾಗಿದೆ. ಶೀಘ್ರ ದುರಸ್ತಿ ಮಾಡಬೇಕಾಗಿದ್ದು, ಅಂದಾಜು 2 ಲಕ್ಷ ರೂ. ತತ್ಕಾಲಕ್ಕೆ ಅಗತ್ಯವಿದೆ. ಶಾಸಕರು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ದೇಗುಲದ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಆಂಜನೇಯ ದೇಗುಲದ ನಿರ್ವಾಹಕ ಹಾಗೂ ಬಸ್ತಿಹಳ್ಳಿ ಗ್ರಾಮದ ನಿವಾಸಿ ಮಲ್ಲೇಶಪ್ಪ.