

ಮಂಗಳೂರು: ದ.ಕ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಾಯಂಕಾಲ ವೇಳೆ ಗಡುಗು-ಮಿಂಚು ಸಹಿತ ಭಾರಿ ಗಾಳಿ ಮಳೆ ಸುರಿದಿದೆ.
ಸಾಯಂಕಾಲವಾಗುತ್ತಿದ್ದಂತೆ ದಟ್ಟವಾಗಿ ಮೋಡ ಕವಿದು ಮಳೆ ಸುರಿದ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ದು ಅಪಾರ ಹಾನಿ ಸಂಭವಿಸಿವೆ. ವಿದ್ಯುತ್ ಕೈಕೊಟ್ಟಿದ್ದು, ದುರಸ್ತಿಯಾಗದ ಪರಿಣಾಮ ರಾತ್ರಿಯಾದರೂ ವಾಪಾಸಾಗಿಲ್ಲ. ಸುಳ್ಯ ತಾಲೂಕಿನ ಪಂಜ, ಕರಿಕಳ, ಗುತ್ತಿಗಾರು, ಬಳ್ಪ, ಪಂಜಿಕಲ್ಲು, ಕಲ್ಮಡ್ಕ, ಬೆಳ್ಳಾರೆಯಲ್ಲಿ ಭಾರಿ ಮಳೆಯಾಗಿದೆ. ಪುತ್ತೂರು ತಾಲೂಕಿನಾದ್ಯಂತ ಅಬ್ಬರದ ಗಾಳಿ ಮಳೆ ಸುರಿದಿದೆ.
ಕೆಮ್ಮಿಂಜೆಯಲ್ಲಿ 36 ಅಡಕೆ ಮರ ಧರೆಗುರುಳಿವೆ. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ, ಗುರುವಾಯನಕೆರೆ ಸಹಿತ ವಿವಿಧೆಡೆ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಾಯಂಕಾಲ ತುಂತುರು ಮಳೆಯಾಗಿದೆ. ಕರಾವಳಿಯಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಉಡುಪಿಯಲ್ಲಿ ಮಳೆಯಾಗಿಲ್ಲ
ಸುಂಟರಗಾಳಿಗೆ ಬೆಚ್ಚಿದ ಪುತ್ತೂರು!
ಪುತ್ತೂರು: ಮಂಗಳವಾರ ಸಾಯಂಕಾಲ ಪುತ್ತೂರಿನಾದ್ಯಂತ ಮಳೆ ಸಹಿತ ಸುಂಟರಗಾಳಿಗೆ ಪುತ್ತೂರು ಸವಣೂರು, ಚಾರ್ವಕ, ಬೆಳಂದೂರು, ಕಾಣಿಯೂರು ಸೇರಿದಂತೆ ಹಲವೆಡೆ ಅಪಾರ ಹಾನಿಯಾಗಿದೆ.
ಸುಂಟರಗಾಳಿಗೆ ಪುತ್ತೂರು ಮರಿಲ್‌ನಿಂದ ಪುರುಷರಕಟ್ಟೆವರೆಗಿನ ಹೆದ್ದಾರಿ ಇಕ್ಕೆಲಗಳಲ್ಲಿ 60 ವಿದ್ಯುತ್ ಕಂಬ ಧರೆಗುರುಳಿದೆ. ಗಾಳಿಯ ರಭಸಕ್ಕೆ ಪುತ್ತೂರು ನಗರದೊಳಗೆ ಅಳವಡಿಸಿದ್ದ ಬ್ಯಾರಿಕೇಡ್‌ಗಳು ಚದುರಿ ಹೋಗಿವೆ. ಪುತ್ತೂರು ನಗರದ ಬಹುತೇಕ ಅಂಗಡಿ, ಮನೆ, ವಾಣಿಜ್ಯಕಟ್ಟಡಗಳಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್‌ಗಳು ಹಾರಿ ಹೋಗಿವೆ. ಬೆದ್ರಾಳ ಸಮೀಪ ಸಂಚರಿಸುತ್ತಿದ್ದ ಅಡುಗೆ ಅನಿಲ ಸಾಗಾಟ ವಾಹನದ ಮೇಲೆ ಬೃಹತ್ ಮರ ಉರುಳಿ ವಾಹನ ಜಖಂಗೊಂಡಿದೆ. ಪುತ್ತೂರು ಸಂಪರ್ಕಿಸುವ ಬಹುತೇಕ ಹೆದ್ದಾರಿಗಳಲ್ಲಿ ಬೃಹತ್ ಮರಗಳು ಉರುಳಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಗಾಳಿಯ ತೀವ್ರತೆಗೆ ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯುದ್ದಕ್ಕೂ ಬೃಹತ್ ಮರಗಳು ಧರೆಗುರುಳಿವೆ. ಜತೆಗೆ ಹಲವೆಡೆ ವಿದ್ಯತ್ ತಂತಿ, ಕಂಬಗಳಿಗೆ ಹಾನಿಯಾಗಿದ್ದು, ಪುತ್ತೂರಿನ ಹಲವು ಭಾಗಗಳಿಗೆ ವಿದ್ಯುತ್ ಸಂಚಾರ ಕಡಿತಗೊಂಡಿದೆ.
ಸುಂಟರಗಾಳಿಯಿಂದ ಅರಂತೋಡು, ಮರಿಲ್, ಬೆದ್ರಾಳ, ಮುಂಡೂರು, ಚಾರ್ವಕ, ಸವಣೂರು ಭಾಗದ ಬಹುತೇಕ ಅಡಕೆ ತೋಟಗಳಲ್ಲಿ 500ಕ್ಕೂ ಅಧಿಕ ಅಡಕೆ ಮರಗಳಿಗೆ ಹಾನಿಯಾಗಿದೆ. ಚಾರ್ವಕ ಬಳಿ ಮನೆ ಹಾಗೂ ಸರ್ಕಾರಿ ಕಟ್ಟಡಕ್ಕೆ ಮರ ಬಿದ್ದು ಹಾನಿಯಾಗಿದೆ. ಗಾಳಿಯಿಂದಾಗಿ ಪುತ್ತೂರು, ಮರಿಲ್, ಪುರುಷರಕಟ್ಟೆ, ಕಣಿಯೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೂ ಹಾನಿಯಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ವಾಹನ ಸಂಚರಿಸಲಾಗದೆ ರಸ್ತೆಯಲ್ಲೇ ಬಾಕಿಯಾಗಿದೆ.
ಭಾರಿ ಗಾಳಿ ಮಳೆಗೆ ಅಪಾರ ಹಾನಿ
ಕಡಬ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆ ಬಳಿಯ ಮಾವಿನಕಟ್ಟೆಯ ಹಳೇ ಮಾವಿನ ಮರ ಬುಡದಿಂದಲೇ ಮುರಿದುಬಿದ್ದಿದೆ. ನೂಜಿಬಾಳ್ತಿಲ ಉ.ಹಿ.ಪ್ರಾ.ಶಾಲೆಯ ಹೆಂಚುಗಳು, ಸಿಮೆಂಟ್ ಶೀಟ್ ಗಾಳಿಗೆ ಹಾರಿ ಹೋಗಿ ಹಾನಿಯುಂಟಾಗಿದೆ. ಗ್ರಾಮದ ರಸ್ತೆ ಬದಿಯ ಹಲವು ಮರಗಳು ಮುರಿದು ಬಿದ್ದು ರಸ್ತೆ ಸಂಚಾರಲ್ಲೂ ತಡೆಯುಂಟಾಯಿತು. ಸ್ಥಳೀಯರ ಸಹಕಾರದಿಂದ ಮರಗಳ ತೆರವು ಕಾರ್ಯಾಚರಣೆ ನಡೆಯಿತು. ಭಾರಿ ಗಾಳಿಗೆ ಹಲವು ಮನೆ, ಕೃಷಿಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.