

ಚನ್ನಗಿರಿ: ಮಾನವಕುಲಕ್ಕೆ ವಚನಗಳ ಮೂಲಕ ಸನ್ಮಾರ್ಗವನ್ನು ತೋರಿಸಿದ ಆದ್ಯ ವಚನಗಾರ ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದು ತಹಸೀಲ್ದಾರ್ ಎನ್.ಜೆ. ನಾಗರಾಜ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ವಚನಗಳನ್ನು ಕೇಳುವುದರಿಂದ ಜೀವನದಲ್ಲಿ ಸ್ಪೂರ್ತಿ ಹೆಚ್ಚಾಗಲಿದೆ. ಜತೆಗೆ ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕತೆ ಮಾಡಿಕೊಳ್ಳಲು 12ನೇ ಶತಮಾನದ ಶರಣರ ವಚನಗಳು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ಸರ್ಕಾರ ದಾರ್ಶನಿಕರ, ಶರಣರ ಹಾಗೂ ಸಾಧಕರ ಜಯಂತ್ಯುತ್ಸವಗಳಿಗೆ ರಜಾದಿನವನ್ನು ನೀಡಿದರೂ ಆಚರಿಸಲು ಜನರಿರುವುದಿಲ್ಲ. ಜಯಂತ್ಯುತ್ಸವಗಳನ್ನು ಒಂದು ಧರ್ಮ, ಜಾತಿಗೆ ಸೀಮಿತಗೊಳಿಸದೆ ಎಲ್ಲರೂ ಭಾಗವಹಿಸಬೇಕು ಎಂದು ತಿಳಿಸಿದರು.
ನೇಕಾರ ಸಮಾಜದ ಅಧ್ಯಕ್ಷ ಉಮಾಪತಿ ದೇವರಹಳ್ಳಿ, ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಶಿರಸ್ತೇದಾರ್ ಮೋಹನ್, ಅರುಣ್, ಪ್ರದೀಪ್ ಹಾಗೂ ರುದ್ರಮುನಿ ಇದ್ದರು.