

ಮಡಿಕೇರಿ:
ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ದೇವರ ದಾಸಿಮಯ್ಯ ಅವರು ೧೧ ನೇ ಶತಮಾನದಲ್ಲಿ ಸಾಕಷ್ಟು ಬದಲಾವಣೆ ತಂದರು ಎಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹೇಳಿದರು. ಇಲ್ಲಿನ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟಗಳ ಸಹಯೋಗದಲ್ಲಿ ಸೋಮವಾರ ನಡೆದ ’ವಿಶ್ವಮಾನ್ಯ ಆದ್ಯ ವಚನಕಾರ ದೇವರ ದಾಸಿಮಯ್ಯ’ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ದೇವರ ದಾಸಿಮಯ್ಯ ಅವರಿಂದ ವಚನ ಸಾಹಿತ್ಯ ಪ್ರಾರಂಭಗೊಂಡು ೧೯ ನೇ ಶತಮಾನದವರೆಗೂ ಬೆಳೆದು ಬಂದಿರುವುದನ್ನು ಕಾಣುತ್ತೇವೆ ಎಂದರು.
ಹಲವು ಸಾಧು ಸಂತರು, ಶರಣ, ಶರಣೇಯರ ಕ್ಷೇತ್ರ ಕಲ್ಬುರ್ಗಿ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲೂ ಹಲವು ಪ್ರಥಮಗಳನ್ನು ಸ್ಥಾಪಿಸಿದ್ದು, ದೇವರ ದಾಸಿಮಯ್ಯ ಅವರು ಈಗಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಜನಿಸಿ, ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಉಪನ್ಯಾಸ ನೀಡಿದ ಬಿ.ಸಿ. ಶಂಕರಯ್ಯ ಮಾತನಾಡಿ ದೇವರ ದಾಸಿಮಯ್ಯ ಅವರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯಕ್ಕೆ ಆದ್ಯತೆ ನೀಡಿದ್ದರು ಎಂದರು.
ಪತ್ರಕರ್ತ ನಾಗರಾಜ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಹೊಸದಾಗಿ ಕುಶಾಲನಗರ ಮತ್ತು ಪೊನ್ನಂಪೇಟೆ ಎರಡು ತಾಲ್ಲೂಕುಗಳು ರಚಿಸಲ್ಪಟ್ಟಿವೆ. ಆ ನಿಟ್ಟಿನಲ್ಲಿ ಜಿಲ್ಲೆಯ ಯಾವುದಾದರೂ ಪ್ರಮುಖ ವೃತ್ತಕ್ಕೆ ’ದೇವರ ದಾಸಿಮಯ್ಯ’ ಹೆಸರು ಇಡಬೇಕು ಎಂದು ಮನವಿ ಮಾಡಿದರು.’
ಕೊಡಗು ಜಿಲ್ಲಾ ನೇಕಾರ ಸುಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಟಿ.ಕೆ.ಪಾಂಡುರಂಗ, ನಿವೃತ್ತ ದೈಹಿಕ ಶಿಕ್ಷಕ ಗಣೇಶ್ ಮಾತನಾಡಿದರು. ಸಮಾಜದ ಪ್ರಮುಖರಾದ ಭಾರತಿ ರಮೇಶ್, ಗಜಾನನ, ಪ್ರೇಮ ಕುಮಾರ, ರಮೇಶ್, ರಾಜೇಶ್, ಜಗದೀಶ್, ಬಾಲಣ್ಣ, ಪ್ರಕಾಶ್, ಸುಲೋಚನಾ, ಮಣಜೂರು ಮಂಜುನಾಥ್, ಚಿನ್ನಸ್ವಾಮಿ ಇತರರು ಇದ್ದರು.