

ಮೈಸೂರು: ಬುದ್ಧ ವಿಷ್ಣುವಿನ ದಶಾವತಾರ ಎಂಬುದು ಸುಳ್ಳು ಎಂದು ಮೈಸೂರು ವಿವಿ ಇತಿಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಗುರುಸಿದ್ದಯ್ಯ ಹೇಳಿದರು.
68ನೇ ಧಮ್ಮ ಸ್ವೀಕಾರ ದಿನಾಚರಣೆ ಅಂಗವಾಗಿ ಬುದ್ಧ ಬಳಗ ವತಿಯಿಂದ ಮಾನಸಗಂಗೋತ್ರಿಯ ಬುದ್ಧ ಪ್ರತಿಮೆ ಬಳಿ ಸೋಮವಾರ ಆಯೋಜಿಸಿದ್ದ ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
6 ಮತ್ತು 7ನೇ ಶತಮಾನದ ನಂತರ ಬೌದ್ಧ ಧರ್ಮಕ್ಕೆ ದೊಡ್ಡ ಪೆಟ್ಟು ಬೀಳಲು ಶುರುವಾಯಿತು. ಭಾರತದಿಂದ ಮಧ್ಯ ಏಷ್ಯಾದವರೆಗೂ ಬೌದ್ಧ ಧರ್ಮ ಬೆಳೆದಿತ್ತು. ಚಕ್ರವರ್ತಿ ಅಶೋಕನ ಕಾಲದಲ್ಲಿ ಬೌದ್ಧ ಧರ್ಮ ಎಲ್ಲಕಡೆ ಮೊಳಗಿತು. ಪಾಶ್ಚಾತ್ಯದಿಂದ ಭಾರತಕ್ಕೆ ವಲಸೆ ಬಂದ ಜನರಿಂದ ಬೌದ್ಧ ಧರ್ಮ ನಿಧಾನಕ್ಕೆ ಅವನತಿ ಕಂಡಿತು ಎಂದು ಹೇಳಿದರು.
ಬೌದ್ಧ ಬಿಕ್ಕುಗಳನ್ನು ಹತ್ಯೆಗೈದು, ಅಶೋಕ ನಿರ್ಮಿಸಿದ್ದ ಬುದ್ಧ ವಿಹಾರಗಳನ್ನೂ ನಾಶ ಮಾಡಿ, ಬೌದ್ಧ ಧರ್ಮವನ್ನು ನಾಶ ಮಾಡುವ ಮೂಲಕ ವಲಸೆ ಬಂದ ಜನರು ತಮ್ಮ ನೆಲೆಯನ್ನು ಭದ್ರ ಮಾಡಿಕೊಂಡರು. ಬಿ.ಆರ್.ಅಂಬೇಡ್ಕರ್ ಅವರಿಂದ ನಮಗೆ ಮತ್ತೆ ಬೌದ್ಧಧರ್ಮ ದೊರಕಿತು. ಬೌದ್ಧ ಧರ್ಮವನ್ನು ಟೊಂಕ ಕಟ್ಟಿ ಜನರಿಗೆ ತಲುಪಿಸಬೇಕು ಎಂದರು.
ಬೌದ್ಧ ಧರ್ಮ ಹೊರತುಪಡಿಸಿ ಭಾರತದಲ್ಲಿರುವ ಎಲ್ಲ ಧರ್ಮಗಳಲ್ಲೂ ಪುರೋಹಿತ ಚಿಂತನೆಗಳಿದ್ದು, ಗುಲಾಮಗಿರಿಗೆ ತಳ್ಳುತ್ತಿವೆ ಎಂದು ಅಂಬೇಡ್ಕರ್ ಹೇಳುತ್ತಾರೆ. ಬುದ್ಧನ ಧರ್ಮದಲ್ಲಿ ಇರುವಷ್ಟು ಸ್ವಾತಂತ್ರ್ಯ ಬೇರೆ ಧರ್ಮಗಳಲ್ಲಿ ಕಾಣುವುದು ಕಷ್ಟ. ಹೀಗಾಗಿ ಅಂಬೇಡ್ಕರ್ ಅವರ ದಾರಿಯಲ್ಲಿ ಬುದ್ಧನ ಜ್ಞಾನವನ್ನು ಮನೆಮನೆಗೆ ಪ್ರಚುರಪಡಿಸುವ ಕೆಲಸ ಹೆಚ್ಚು ಆಗಬೇಕು ಎಂದರು.
ಬುದ್ಧ ಬಳಗದ ಜಗದೀಶ್ ಮಹದೇವಯ್ಯ, ಸಂಶೋಧನಾ ವಿದ್ಯಾರ್ಥಿಗಳಾದ ಕೆ.ಆರ್.ರಂಗಸ್ವಾಮಿ, ಕಲ್ಲಹಳ್ಳಿ ಕುಮಾರ್, ವರಹಳ್ಳಿ ಆನಂದ, ಕುಶಾಲ್, ನಾಗೇಶ್ ಮಲ್ಲೇಶ್, ಗಣೇಶ್, ಲೋಕೇಶ್, ಸಿದ್ದಪ್ಪಾಜಿ, ಗೌತಮ್, ಪರಂಜ್ಯೋತಿ, ಪ್ರಜ್ವಲ್ ಇತರರು ಹಾಜರಿದ್ದರು. ಕೆ.ಎಂ. ಶೇಷಣ್ಣಸ್ವಾಮಿ ಮತ್ತು ತಂಡದವರು ಬುದ್ಧ ಮತ್ತು ಭೀಮಗೀತೆಗಳನ್ನು ಹಾಡಿದರು.