ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ 'ದಶಮಿ' ಲೋಕಾರ್ಪಣೆ

dashami
Published on

ಮಡಿಕೇರಿ:

ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಆಚರಣೆಗಳೂ ಆಧುನೀಕರಣಕ್ಕೆ ಒಳಗಾಗುತ್ತಿವೆ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ 'ದಶಮಿ' ಲೋಕಾರ್ಪಣೆ ಸಂದರ್ಭ ಪಾಲ್ಗೊಂಡು ಮಾತನಾಡಿದರು.

ಆಚರಣೆಗಳಲ್ಲಿ ಯಾವುದೇ ವಿಧವಾದ ಆಧುನೀಕರಣ ಆದರೂ ಆಚರಣೆಯ ಮೂಲಸ್ವರೂಪಕ್ಕೆ ಧಕ್ಕೆ ಉಂಟು ಮಾಡದಂತೆ ಇರಬೇಕು ಎಂದರು. ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯದ ಸಂಚಾಲಕ ಮಂಗಳೂರಿನ ಮೌಲಾನ ಯು. ಅಬ್ದುಲ್ ಸಲಾಮ್ ಮಾತನಾಡಿ ಮನುಷ್ಯ ಮತ್ತು ಮನುಷ್ಯನ ನಡುವಿನ ಅಂತರ ಹೆಚ್ಚಾಗುತ್ತಿರುವುದು ಆತಂಕದ ವಿಷಯ. ಇಂದು ಜಗತ್ತೇ ಗ್ರಾಮವಾಗಿದ್ದು, ದೇಶ, ದೇಶಗಳ ನಡುವೆ, ಸಮುದ್ರಗಳ ನಡುವೆ ಅಷ್ಟೇ ಏಕೆ ಭೂಮಿ ಮತ್ತು ಆಕಾಶದ ಮಧ್ಯೆ ಅಂತರ ಕಡಿಮೆಯಾಗುತ್ತಿದೆ. ಆದರೆ, ಮನುಷ್ಯ ಮನುಷ್ಯನ ನಡುವಿನ ಅಂತರ ಮಾತ್ರ ಹೆಚ್ಚಾಗುತ್ತಿದೆ. ಇಂಥ ಹೊತ್ತಿನಲ್ಲಿ ಈ ರೀತಿಯ ಸೌಹಾರ್ದದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರಲ್ಲದೆ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸೌಹಾರ್ದದ ರಾಯಭಾರಿ ಎಂದು ಶ್ಲಾಘಿಸಿದರು.

ಮಡಿಕೇರಿ ಸಂತ ಮೈಕಲರ ಚರ್ಚ್ ಧರ್ಮಾಧಿಕಾರಿ ಜಾರ್ಜ್ ದೀಪಕ್ ಎ. ಮಾತನಾಡಿ ಲೌಕಿಕ ಜ್ಞಾನಕ್ಕಿಂತ ದೈವ ಜ್ಞಾನ ಮುಖ್ಯ. ಆದರೆ, ಇಂದು ಯುವ ಸಮೂಹ ಲೌಕಿಕ ಜ್ಞಾನದ ಕಡೆಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದು, ದೈವಜ್ಞಾನದ ಕಡೆಗೆ ನಿರ್ಲಕ್ಷ್ಯ ತೋರಿದೆ. ಮನುಷ್ಯ ಮನುಷ್ಯನ ಮಾತ್ರವಲ್ಲ ಮನುಷ್ಯ ಮತ್ತು ದೇವರ ನಡುವಿನ ಅಂತರವೂ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಪ್ರಕೃತಿಯನ್ನು ಪಾವಿತ್ರ‍್ಯತೆಯಿಂದ ನೋಡಬೇಕು. ಅಂಥ ಪ್ರಕೃತಿಯನ್ನು ಉಳಿಸಿಕೊಳ್ಳಬೇಕು ಎಂದರು.

ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಸುನಿಲ್ ಸುಬ್ರಹ್ಮಣಿ ಮಾತನಾಡಿ, ತಾವು ಚೌಟಿ ಮಾರಿಯಮ್ಮ ದೇವತೆಯ ಭಕ್ತರಾದ ಪ್ರಸಂಗವನ್ನು ನೆನಪು ಮಾಡಿಕೊಂಡರು. ಹಿಂದೆ ಸಾಕಷ್ಟು ಮಂದಿ ಬಂದು ದೇಗುಲಕ್ಕೆ ಬರುವಂತೆ ಆಹ್ವಾನ ನೀಡಿದರೂ ನಾನು ಅದನ್ನು ನಿರ್ಲಕ್ಷಿಸಿದ್ದೆ. ಆದರೆ, ಒಮ್ಮೆ ಅಪಘಾತವಾಗಿ ಉಳಿಯುವುದೇ ಕಷ್ಟಕರವಾಗಿದ್ದಾಗ ಇದೇ ದೇವತೆ ನನ್ನನ್ನು ಕಾಪಾಡಿತು. ಇಂದು ನಡೆಯುತ್ತಿರುವ ಜಾತಿಯ ಸಂಘರ್ಷವನ್ನು ಹಿರಿಯರು ತಿದ್ದಬೇಕು. ಇಂದಿನ ಘಟನೆ ನಾಳೆ ಇತಿಹಾಸ ಆಗುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಸ್ಮರಣ ಸಂಚಿಕೆ ಸಂಪಾದಕ ಟಿ.ಪಿ. ರಮೇಶ್ ಮಾತನಾಡಿ ಇದು ಸರ್ವ ಧರ್ಮೀಯರೂ ಒಟ್ಟಾಗಿ ಕೆಲಸ ಮಾಡುವ ದೇವಾಲಯವಾಗಿದೆ. ಸ್ಮರಣ ಸಂಚಿಕೆ ರಚಿಸುವಾಗ ದಾಖಲೆಗಳ ಕೊರತೆ ಎದುರಾಯಿತು. ಆದರೂ ಮೌಖಿಕ ಪರಂಪರೆ ಸೇರಿದಂತೆ ಸಾಕಷ್ಟು ಕ್ಷೇತ್ರ ಕಾರ್ಯ ಮಾಡಿ ಈ ಪುಸ್ತಕ ರಚಿಸಲಾಗಿದೆ. ಇದರಲ್ಲಿ ದೇವಸ್ಥಾನದ ದಸರಾ ಉತ್ಸವ ಸಮಿತಿಯಲ್ಲಿ ಕಳೆದ 50 ವರ್ಷದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ 24 ಜನರ ಮಾಹಿತಿ ಇದೆ. ದೇಗುಲಕ್ಕಿರುವ 300 ವರ್ಷಗಳ ಇತಿಹಾಸ ಸೇರಿದಂತೆ ಹಲವು ಕೌತುಕಮಯ ವಿಚಾರಗಳು ಸ್ಮರಣ ಸಂಚಿಕೆಯಲ್ಲಿವೆ ಎಂದು ಮಾಹಿತಿ ನೀಡಿದರು.

ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಮಾತನಾಡಿ ಈ ದೇಗುಲದಲ್ಲಿ ಧನಾತ್ಮಕ ಶಕ್ತಿ ಇದೆ. ಬೆಳಗ್ಗೆ ಎದ್ದಾಗ ಇಲ್ಲಿಗೆ ಬಂದರೆ ಧನಾತ್ಮಕವಾದ ಶಕ್ತಿ ಬರುತ್ತದೆ. ಚರ್ಚ್ ಮಸೀದಿಗಳಲ್ಲೂ ಇಂಥ ಧನಾತ್ಮಕ ಶಕ್ತಿಯ ಅನುಭವ ಆಗುತ್ತದೆ. ಹೆಸರು ಬೇರೆ ಬೇರೆ ಇರಬಹುದು. ಎಲ್ಲರೂ ಆ ಶಕ್ತಿಗೆ ಅಹಂಕಾರ ಬಿಟ್ಟು ವಂದಿಸಬೇಕು ಎಂದು ಹೇಳಿದರು.

ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷರು, ನಿಧನರಾದ ಅಧ್ಯಕ್ಷರ ಕುಟುಂಬಸ್ಥರು, ಹಿರಿಯ ಪದಾಧಿಕಾರಿಗಳು ಸೇರಿದಂತೆ 31 ಜನರಿಗೆ ಇದೇ ವೇಳೆ ಸನ್ಮಾನ ಮಾಡಲಾಯಿತು. ಮಂಟಪ ಸಮಿತಿಯ 110 ಜನರಿಗೆ ಸ್ಮರಣಿಕೆ ನೀಡಲಾಯಿತು.

ಸಮಿತಿಯ ಅಧ್ಯಕ್ಷ ರವಿ ಕರ್ಕೆರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸಂಚಾಲಕ ಮಂಜುನಾಥ, ಸ್ಮರಣ ಸಂಚಿಕೆಯ ಪೋಷಕ ಸಂಪಾದಕ ಡಾ. ಎಚ್.ವಿ. ದೇವದಾಸ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net