

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೀರ್ತನ ಕೇಸರಿ ಪಂ. ಗುರುರಾಜಆಚಾರ್ಯ ಗುಡಿ ಸ್ಮರಣಾರ್ಥ ಕಿರಾಣಾ ಸಂಗೀತ ಅಕಾಡೆಮಿ, ಸ್ವರಮಹಾ ಯಾಗ ಟ್ರಸ್ಟ್, ಪದ್ಮಶ್ರೀ ಪ್ರತಿಷ್ಠಾನ ವತಿಯಿಂದ ಸೆ. 29ರಂದು ಇಲ್ಲಿನ ಹೊಸಯಲ್ಲಾಪುರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪಂ. ಭೀಮಸೇನ ಜೋಶಿ ಹಾಗೂ ಪಂ. ಮಾಧವ ಗುಡಿ ದಾಸವಾಣಿ ಹಾಡಿನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಆಯೋಜಕಿ ಭಾರ್ಗವಿ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ರಿಂದ ಸಂಜೆವರೆಗೆ ಸ್ಪರ್ಧೆ ನಡೆಯಲಿದ್ದು, ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸ್ಪರ್ಧೆ ವಿಜೇತರಿಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ, ಸಮಾಧಾನಕರ ನಗದು ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದರು.
ಸ್ಪರ್ಧೆಯಲ್ಲಿ 5 ವರ್ಷದಿಂದ 51 ವರ್ಷವರೆಗಿನವರು ಪಾಲ್ಗೊಳ್ಳಬಹುದು. ಪ್ರತಿಯೊಬ್ಬರು 3 ಹಾಡುಗಳನ್ನು ಪ್ರಸ್ತುತಪಡಿಸಲು ಅವಕಾಶವಿದೆ. ಆಸಕ್ತರು ಹೆಸರು ಸಲ್ಲಿಸಬೇಕು. ಮುಂದಿನ ದಿನಗಳಲ್ಲಿ ಆಯೋಜಿಸುವ ಸಂಗೀತ ಸಮ್ಮೇಳನದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಅವಕಾಶ ನೀಡಲಾಗುವುದು ಎಂದರು.
ಪ್ರಸನ್ನ ಗುಡಿ ಇದ್ದರು.