

ಮಂಡ್ಯ: ಬಹುಮಾನದ ಬಗ್ಗೆ ಚಿಂತಿಸದೇ ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆಯು ಮುಖ್ಯವಾಗಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಸ್.ವಿಜಯ್ ಕುಮಾರ್ ಸಲಹೆ ನೀಡಿದರು.
ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.
ಮಳೆಯ ಕಾರಣದಿಂದ ದಸರಾ ಕ್ರೀಡಾ ಕೂಟವು ತಡವಾಗಿ ಆರಂಭವಾಗಿದೆ. ಆದರೂ ಸ್ಪರ್ಧಿಗಳು ಉತ್ಸುಕರಾಗಿಯೇ ಭಾಗವಹಿಸಿ ಗಮನ ಸೆಳೆದಿದ್ದಾರೆ. ಉತ್ತಮ ಪ್ರದರ್ಶನವನ್ನು ಕ್ರೀಡೆಯಲ್ಲಿ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಕ್ರೀಡಾ ಇಲಾಖೆಯ ನಿರ್ವಾಹಕ ನಾಗಭೂಷಣ, ಕುಮಾರಸ್ವಾಮಿ, ಶಿವಕುಮಾರ್, ರಾಮು ಸಂಜೀವಯ್ಯ, ಮಲ್ಲೇಶ್ ಇದ್ದರು.
ಸಾರ್ವಜನಿಕರ ಆಕ್ರೋಶ: ಕಳದೆ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ನಗರದ ಸರ್ ಎಂ.ವಿ. ಕ್ರೀಡಾಂಗಣ ಕೆರೆಯಂತಾಗಿದ್ದು, ಕ್ರೀಡಾಂಗಣದಲ್ಲಿ ನಿಂತ ನೀರಿನಲ್ಲೇ ಮಕ್ಕಳ ಕ್ರೀಡಾಕೂಟ ನಡೆಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.