

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಯುವ ಜನತೆ ಬದುಕಿನಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಶಿಕ್ಷಣದ ಜತೆಗೆ ಕ್ರೀಡೆಯು ಮುಖ್ಯವಾಗಲಿದೆ ಎಂದು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ದೊಡ್ಡಬಳ್ಳಾಪುರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ಎಂಬುದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ ಮನುಷ್ಯನ ಮಾನಸಿಕ ಹಾಗೂ ಸಾಂಸ್ಕೃತಿಕ ಬೆಳೆವಣಿಗೆಗೂ ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು. ಸರ್ಕಾರ ಕ್ರೀಡಾ ಯೋಜನೆಗಳನ್ನು ರೂಪಿಸಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಕ್ರೀಡೆಗೆ ಸಂಬಂಧಪಟ್ಟ ಸಲಕರಣೆಯನ್ನು ಕ್ರೀಡಾ ಅಧಿಕಾರಿಗಳು ಕೇಳಿ ಪಡೆಯಬೇಕು ಜತೆಗೆ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಸಲಹೆ ನೀಡಿದರು. ಸೋಲು ಗೆಲುವು ಎಂಬುದರ ಬಗ್ಗೆ ಯೋಚಿಸದೇ ಆಸಕ್ತಿ ಯಿಂದ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಹಾಗಾಗಿ ಕ್ರೀಡಾ ಮನೋಭಾವನೆಯಿಂದ ಆಟವಾಡಬೇಕು ಎಂದು ಹೇಳಿದರು. ಪ್ರತಿಭಾವಂತ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ನಡೆಯುವ ದಸರಾ ಕ್ರೀಡಾಕೂಟದಲ್ಲಿ ಗೆದ್ದು ಜಿಲ್ಲೆಗೆ ಕೀರ್ತಿ ತರಬೇಕು. ಕ್ರೀಡೆಗಳು ವಿದ್ಯಾಭ್ಯಾಸದ ಅವಿಭಾಜ್ಯ ಅಂಗ. ದೈಹಿಕ ಮತ್ತು ಮಾನಸಿಕ ದೃಢತೆಯ ಜತೆಗೆ ಮನಸ್ಸಿನ ಏಕಾಗ್ರತೆ ಮೂಡಿಸುತ್ತದೆ ಮತ್ತು ಶರೀರ ಆರೋಗ್ಯಕರವಾಗಿರುತ್ತದೆ ಎಂದರು.
ಜಿಲ್ಲೆಗೆ ಕೀರ್ತಿ ತರಬೇಕು: ಶಾಸಕ ಧೀರಜ್ ಮುನಿರಾಜು ಮಾತಾನಾಡಿ, ಮಕ್ಕಳ ಪ್ರತಿಭೆ ಗುರುತಿಸಲು ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದು ಹೇಳಿದರು. ಕ್ರೀಡಾಕೂಟದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ವಿಜೇತರಾದವರು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೂ ಗೆದ್ದು ಜಿಲ್ಲೆಗೆ ಕೀರ್ತಿ ತರಬೇಕು ಎಂದರು. ಆದಿನಾರಾಯಣ ಹೊಸಹಳ್ಳಿಯಲ್ಲಿರುವ 20 ಎಕರೆ ಜಾಗದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಹಣ ಬಿಡುಗಡೆಯಾಗಿದ್ದು ಕೂಡಲೆ ಕ್ರೀಡಾಂಗಣದ ಗುದ್ದಲಿ ಪೂಜೆ ನೆರವೇರಲಿದೆ ಎಂದರು ತಾಲೂಕಿನ ಹೃದಯ ಭಾಗದಲ್ಲಿರು ಭಗತ್‌ಸಿಂಗ್ ಕ್ರೀಡಾಂಗಣದ ಮತ್ತಷ್ಟು ಅಭಿವೃದ್ಢಿ ಪಡಿಸುವಂತೆ ಸಚಿವರಿಗೆ ಶಾಸಕರು ಇದೇ ವೇಳೆ ಮನವಿ ಸಲ್ಲಿಸಿದರು.
ವಿಜೇತರಿಗೆ ಬಹುಮಾನ ವಿತರಣೆ:
ಕ್ರೀಡಾಕೂಟದಲ್ಲಿ ಜಿಲ್ಲೆಯ ನಾಲ್ಕು ತಾಲೂಕಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ ಖೋ-ಖೋ, ಕಬ್ಬಡಿ, ವಾಲಿಬಾಲ್, ಥ್ರೋಬಾಲ್, ಭರ್ಜಿ ಎಸೆತ, ಗುಂಡು ಎಸೆತ, ಚಕ್ರ ಎಸೆತ, 100, 200, 800 ಓಟದ ಸ್ಪರ್ಧೆ ಸೇರಿ ವಿವಿಧ ಸ್ಪರ್ಧೆ ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಸಚಿವರಿಂದ ಮತ್ತು ಗಣ್ಯರಿಂದ ಬಹುಮಾನ ವಿತರಿಸಲಾಯಿತು.