

ಆನೇಕಲ್: ತಾಲೂಕಿನಲ್ಲಿ ಖ್ಯಾತಿ ಪಡೆದಿರುವ ಚೌಡೇಶ್ವರಿ ಅಮ್ಮನವರ ದಸರಾ ಉತ್ಸವ ಸೋಮವಾರ ಸರಳವಾಗಿ ಜರುಗಿತು.
ಕರೊನಾ ಹಾವಳಿ ಹಿನ್ನೆಲೆಯಲ್ಲಿ ದೇವಿಗೆ ಹೆಲಿಕಾಪ್ಟರ್ ಮೂಲಕ ನಡೆಸುತ್ತಿದ್ದ ಪುಷ್ಪಾರ್ಚನೆ, ಅಂಬಾರಿ ಮೆರವಣಿಗೆ ಇರಲಿಲ್ಲ. ಹೀಗಾಗಿ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ವೀರಗಾಸೆ ಕುಣಿತ, ಚಂಡೆ ವಾದ್ಯಗಳ ಜತೆ ಮೆರವಣಿಗೆ ನಡೆಸಲಾಯಿತು.
ಉತ್ಸವದ ಅಂಗವಾಗಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕಲಾವಿದ ಆನಂದ ಹಾಗೂ ತಂಡದವರಿಂದ ಭಕ್ತಿ ಗೀತಾ ಆರಾಧನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಧ್ಯಾಹ್ನ 3 ಗಂಟೆಗೆ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು.
ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸಿದ ಭಕ್ತರು ಹೂವು ಚೆಲ್ಲಿ ಭಕ್ತಿ ಮೆರೆದರು. ಉತ್ಸವಕ್ಕೆ ನೆರವು ನೀಡುತ್ತಿದ್ದ ಸಮಾಜ ಸೇವಕ ಪ್ರಭಾಕರೆಡ್ಡಿ ಈ ಬಾರಿಯೂ ನೆರವು ನೀಡಿದ್ದರು. ಬೆಳಗ್ಗೆಯಿಂದ ಸ್ಥಳದಲ್ಲಿದ್ದು ಉತ್ಸವ ಯಶಸ್ವಿಯಾಗುವಂತೆ ನೋಡಿಕೊಂಡರು.
ಪಟ್ಟಣ ವಾಸಿಗಳ ಹೊರತಾಗಿ ಇತರ ಭಾಗಗಳಿಂದ ಆಗಮಿಸುತ್ತಿದ್ದ ಭಕ್ತರು ಈ ಬಾರಿ ಪಾಲ್ಗೊಳ್ಳಲಿಲ್ಲ. ಉತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಶಾಸಕ ಬಿ.ಶಿವಣ್ಣ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟಾಚಲಯ್ಯ, ಕಾರ್ಯದರ್ಶಿ ರಾಜು, ಖಜಾಂಚಿ ಬಾಲಕೃಷ್ಣ ಹಾಗೂ ತೊಗಟವೀರ ಜನಾಂಗ, ಚನ್ನಕೇಶವ ಯುವಕರ ಸಂಘದವರು ಭಾಗವಹಿಸಿದ್ದರು.