

ಮಡಿಕೇರಿ:
ಸರ್ಕಾರ ಮಡಿಕೇರಿ ದಸರಾಕ್ಕೆ 1.5 ಕೋಟಿ ರೂ. ಮತ್ತು ಗೋಣಿಕೊಪ್ಪಲು ದಸರಾಕ್ಕೆ 75 ಲಕ್ಷ ರೂ. ಕೊಡಲು ನಿರ್ಧರಿಸಿದ್ದು, ದಸರಾ ಸಂದರ್ಭ ಕೊಡಗಿನ ಇತಿಹಾಸ ಉಳಿಸುವ ಹಾಗೆ ಕಾರ್ಯಕ್ರಮ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸಲಹೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಡಿಕೇರಿ ಮತ್ತು ಗೋಣಿಕೊಪ್ಪಲು ನಗರಗಳ ದಸರಾಕ್ಕೆ ಸಂಬAಧಿಸಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಸರಾ ಸಂದರ್ಭದಲ್ಲಿ ಸುರಕ್ಷತೆಗೆ ಪ್ರಥಮ ಆದ್ಯತೆ ಕೊಡಬೇಕು. ದಸರಾ ಶೋಭಾಯಾತ್ರೆಯನ್ನು ಜವಾಬ್ದಾರಿಯುತವಾಗಿ ಮಾಡಬೇಕು. ಉತ್ಸವದ ವೇಳೆ ರಾಜ್ಯದ ವಿವಿಧೆಡೆ ನಡೆದಿರುವ ಘಟನೆಗಳು ಇಲ್ಲಿ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಡಿ.ಜೆ. ವಿರುದ್ಧ ಈಗಾಗಲೇ ಒಬ್ಬರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವುದು ಗಮನದಲ್ಲಿ ಇರಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಸಮಿತಿಯ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
ಈಗ ಇರುವ ಸ್ವಾತಂತ್ರ್ಯ ಮುಂದೆಯೂ ಇರಬೇಕು ಎಂದರೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಏನಾದರೂ ಹೆಚ್ಚು, ಕಡಿಮೆಯಾದರೆ ಅನುದಾನವೇ ನಿಲ್ಲುತ್ತವೆ ಎನ್ನುವುದನ್ನು ಮರೆಯಬಾರದು. ಮಂಟಪದ ಸುತ್ತ ಕನಿಷ್ಠ 5ರಿಂದ 10 ಮೀಟರ್ ಅಂತರದಲ್ಲಿ ಸಾರ್ವಜನಿಕರು ಬಾರದಂತೆ ನಿಗಾ ಇರಿಸಲು ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು ಎಂದು ಹೇಳಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಡಿ.ಜೆ. ಯಿಂದ ಈ ವರ್ಷವೂ ರಾಜ್ಯದಲ್ಲಿ ಸಾವುಗಳಾಗಿವೆ. ಹೈಕೋರ್ಟ್ನಲ್ಲಿ ಡಿ.ಜೆ ವಿರುದ್ಧ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದಿಂದ ಆದೇಶ ಬಂದರೆ ಪ್ರಕರಣ ದಾಖಲಾಗುವುದು ನಿಶ್ಚಿತ. ಗಾಂಧಿ ಮೈದಾನದ ಸುತ್ತೆಲ್ಲಾ ಧ್ವನಿವರ್ಧಕ ಹಾಕಿದರೆ ಸುತ್ತಮುತ್ತಲ ಮನೆಯವರು ಮಲಗುವುದು ಬೇಡವೇ ? ಯಾರಿಗೂ ಏನೂ ಆಗಬಾರದು ಎಂಬುದೇ ನಮ್ಮ ಉದ್ದೇಶ. ಸುರಕ್ಷತೆಗೆ ಮೊದಲ ಆದ್ಯತೆ ಎಂಬುದರಲ್ಲಿ ಯಾವುದೇ ರಾಜಿ ಇಲ್ಲ. ಅನಾಹುತ ಆದ ಮೇಲೆ ಇಷ್ಟು ಸ್ವಾತಂತ್ರ್ಯ ಯಾರಿಗೂ ಇರುವುದಿಲ್ಲ. ಈಗ ದೊಡ್ಡ ದೊಡ್ಡ ಮಂಟಪಗಳ ರಚನೆ ಬೇಡ ಎಂದು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ದಸರೆಯಲ್ಲಿ ಹಣಕಾಸಿನ ಶಿಸ್ತನ್ನು ನಿರ್ವಹಿಸಬೇಕು. ಕೊಟ್ಟಿರುವ ಅನುದಾನದ ಒಳಗೆ ಕೆಲಸ ಮಾಡಬೇಕು. ಜಿಎಸ್ಟಿ ಇರುವ ಬಿಲ್ಗಳನ್ನು ಆದಷ್ಟು ಬೇಗ ಕೊಡಬೇಕು ಎಂದು ಸೂಚಿಸಿದರು.
ಮಡಿಕೇರಿ ಶಾಸಕ ಡಾ. ಮಂತರ್ಗೌಡ ಮಾತನಾಡಿ, ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಆದಷ್ಟು ಬೇಗ ಆರಂಭಿಸಬೇಕು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೇಗ ಆರಂಭಿಸಿ, ಬೇಗನೇ ಮುಗಿಸಬೇಕು. ಒಬ್ಬ ಅತಿಥಿಗೆ ಒಂದೇ ಸ್ಮರಣಿಕೆ ನೀಡಿ ಹಣ ಉಳಿಸುವ ಕಡೆಗೆ ಗಮನ ಕೊಡಬೇಕು. ವೇದಿಕೆಯಲ್ಲಿ ಭಾಷಣಕ್ಕಿಂತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಮಯ ಕೊಡಬೇಕು. ಪ್ರತಿ ಮಂಟಪದ ಜತೆಗೂ 3ರಿಂದ 4 ಮಂದಿ ಸ್ಥಳೀಯ ಲೈನ್ಮೆನ್ಗಳನ್ನು ನಿಯೋಜಿಸಬೇಕು. ಮಂಟಪಗಳ ಸಮಿತಿಗೆ ವಿಶ್ವಾಸ ಹೊಂದಿದವರನ್ನು ಮಾತ್ರ ಸೇರಿಸಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಸರ್ಕಾರದ ಅನುದಾನವನ್ನು ಪಾರದರ್ಶಕವಾಗಿ ವೆಚ್ಚ ಮಾಡಬೇಕು. ಬಂದಿರುವ ಹಣದಲ್ಲಿ ಶಿಸ್ತುಬದ್ಧವಾಗಿ ಕಾರ್ಯಕ್ರಮ ಮಾಡಬೇಕು. ಗೋಣಿಕೊಪ್ಪಲು ದಸರೆಗೆ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಮಡಿಕೇರಿ ದಸರಾ ಸಮಿತಿ ಕಾರ್ಯಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ತುಂಬಾ ಕಟ್ಟುನಿಟ್ಟಿನ ನಿಯಮಗಳನ್ನು ಹೇರಬೇಡಿ ಎಂದು ಮನವಿ ಮಾಡಿದರು. ಮಡಿಕೇರಿ ದಸರಾ ಸಮಿತಿ ಸದಸ್ಯ ಮುದ್ದುರಾಜ್, ಮಂಟಪಗಳಿಗೆ ತಲಾ 5 ಲಕ್ಷ ರೂ. ಮತ್ತು ಕರಗಗಳಿಗೆ ತಲಾ 3 ಲಕ್ಷ ರೂ. ಅನುದಾನ ನೀಡಬೇಕು ಎಂದರು. ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಮಾತನಾಡಿ, ಜನರು ಓಡಾಡಲು ಸಾಧ್ಯವಾಗದಷ್ಟು ರಸ್ತೆಗಳು ಹಾಳಾಗಿವೆ. ಕೂಡಲೇ ಸರಿಪಡಿಸಬೇಕು. ದಶಮಂಟಪಗಳ ಶೋಭಾಯಾತ್ರೆ ಮುಗಿದ ಬಳಿಕ ಡಿ.ಜೆ ನಿಲ್ಲಿಸಬಾರದು ಎಂದು ಕೋರಿದರು. ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಸ್ಥಳೀಯ ಮತ್ತು ಹೊರಗಿನ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಮಡಿಕೇರಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಇನ್ನು ದಸರಾಕ್ಕೆ ಇನ್ನು 7 ದಿನ ಮಾತ್ರ ಇದೆ. ದೀಪಾಲಂಕಾರವನ್ನು ತ್ವರಿತವಾಗಿ ಮಾಡಿಸಬೇಕು ಎಂದರು. ಮಡಿಕೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ದಸರಾ ಕಾರ್ಯಕ್ರಮಗಳ ವೇಳಾ ಪಟ್ಟಿ ಮಂಡಿಸಿದರು.
ಗೋಣಿಕೊಪ್ಪಲು ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಮಾತನಾಡಿ, 47ನೇ ವರ್ಷದ ದಸರೆಯನ್ನು ಗೋಣಿಕೊಪ್ಪಲಿನಲ್ಲಿ ನಡೆಸಲಾಗುತ್ತಿದೆ. 11 ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸರ್ಕಾರ ಈಗ ನೀಡಿರುವ ಹಣ ಏನೇನೂ ಸಾಲದಾಗಿದೆ. ಹೆಚ್ಚುವರಿ ಹಣ ನೀಡಬೇಕು ಎಂದು ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಸಮಿತಿಯ ಸರ್ವ ಸದಸ್ಯರು ಒತ್ತಾಯಿಸಿದರು. ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ಗೋಣಿಕೊಪ್ಪಲು ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ಕುಮಾರ್ ಸೇರಿದಂತೆ ಸಬೆಯಲ್ಲಿ ಮಾತನಾಡಿದ ಬಹುತೇಕ ಎಲ್ಲ ಸದಸ್ಯರೂ ಹೆಚ್ಚಿನ ಅನುದಾನಕ್ಕಾಗಿ ಸಭೆಯಲ್ಲಿ ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ಪ್ರಕಾಶ್ ಮೀನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸಭೆಯಲ್ಲಿ ಇದ್ದರು.