

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಬರಗಾಲ, ವಿದ್ಯುತ್ ಕ್ಷಾಮದ ನಡುವೆಯೂ 22 ದಿನಗಳ ಕಾಲ ಮಿನುಗಿದ ದಸರಾ ದೀಪಾಲಂಕಾರಕ್ಕೆ ಬರೋಬ್ಬರಿ 1.43 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದ್ದು, 6.05 ಕೋಟಿ ರೂ. ಖರ್ಚಾಗಿದೆ.
ಕಳೆದ ಬಾರಿ 1.50 ಲಕ್ಷ ಯೂನಿಟ್ ವಿದ್ಯುತ್ ವಿನಿಯೋಗವಾಗಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಈ ಸಲ ಕೊಂಚ ವಿದ್ಯುತ್ ಜತೆಗೆ, ವೆಚ್ಚದಲ್ಲೂ ಉಳಿತಾಯವಾಗಿದೆ. ಈ ಸಲ 6.15 ಕೋಟಿ ರೂ. ಬಜೆಟ್‌ನ ಕ್ರಿಯಾಯೋಜನೆ ರೂಪಿಸಲಾಗಿತ್ತು. ಪ್ರಾಯೋಜಕತ್ವದಿಂದಾಗಿ 10 ಲಕ್ಷ ರೂ. ವರೆಗೆ ಮಾತ್ರ ಆದಾಯ ಬಂದಿದ್ದು, ಇದನ್ನು ಕಳೆದು 6.05 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ಈ ಕುರಿತು ಲೆಕ್ಕ ಮಾಡಿದ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಸೆಸ್ಕ್ ಮೂಲಗಳು ತಿಳಿಸಿವೆ.
2008ರ ಬಳಿಕ ಹೆಚ್ಚು ವಿದ್ಯುತ್ ಬೇಡುವ ಸಾಂಪ್ರದಾಯಿಕ ಬಲ್ಬ್ ಬಳಕೆಯನ್ನು ಹಂತ ಹಂತವಾಗಿ ತಗ್ಗಿಸಲಾಯಿತು. ಆ ಸ್ಥಾನಕ್ಕೆ ಬಂದ ಎಲ್‌ಇಡಿ ಬಲ್ಬ್‌ಗಳ ಬಳಕೆಯನ್ನು ಹೆಚ್ಚು ಮಾಡಿದ್ದರಿಂದ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯ ಆಗುತ್ತಿದೆ. ವಿದ್ಯುತ್ ನಷ್ಟದ ಪ್ರಮಾಣವೂ ಕಡಿಮೆ ಆಗಿದೆ.
ಈ ಹಿಂದಿನ ಬುರುಡೆ ಬಲ್ಬ್ ಬಳಕೆಯಿಂದ ಅಂದಾಜು 1.75 ಕೋಟಿ ರೂ. ಮೊತ್ತದ ವಿದ್ಯುತ್ ಬಿಲ್ ಬಂದಿತ್ತು. 1,70,000 ಯೂನಿಟ್ ವಿದ್ಯುತ್ ಬಳಕೆ ಆಗುತ್ತಿತ್ತು. ಸಂಪೂರ್ಣವಾಗಿ ಎಲ್‌ಇಡಿ ಬಲ್ಬ್‌ಗಳ ಬಳಕೆಯಿಂದಾಗಿ ಈ ಸಲ 1.43 ಲಕ್ಷ ಯೂನಿಟ್ ವಿದ್ಯುತ್ ಖರ್ಚಾಗಿದೆ. ಅಂದಿಗೂ ಇಂದಿಗೂ ಅಂದಾಜು 27 ಸಾವಿರ ಯೂನಿಟ್ ವಿದ್ಯುತ್ ಉಳಿತಾಯವಾಗಿದೆ.
ಬುರುಡೆ ಬಲ್ಬ್ ಬಳಕೆ ಕೈಬಿಟ್ಟು ಎಲ್‌ಇಡಿ ಬಲ್ಬ್ ಪರ್ವ ಶುರುವಾಗಿನಿಂದಲೂ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಇದರ ಫಲವಾಗಿ 2019ರಲ್ಲಿ 1,07,550 ಯೂನಿಟ್ ಬಳಕೆಯಾಗಿದ್ದರೆ, 2020ರಲ್ಲಿ 88,605 ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. 2021ರಲ್ಲಿ 1,35,000 ಯೂನಿಟ್ ಬಳಕೆಯಾಗಿತ್ತು. 2022ರಲ್ಲಿ 1.50 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ದೀಪಾಲಂಕಾರದ ವ್ಯಾಪ್ತಿ ಪ್ರದೇಶ ವಿಸ್ತಾರವಾದರೂ ವಿದ್ಯುತ್ ಬಳಕೆ ಪ್ರಮಾಣ ಕಳೆದ ಸಲಕ್ಕಿಂತ ಕಡಿಮೆಯಾಗಿದೆ.
ವಿದ್ಯುತ್ ಉಳಿತಾಯವಾಗುತ್ತಿದ್ದರೂ ದೀಪಾಲಂಕಾರದ ಖರ್ಚು ಮಾತ್ರ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲೇ ಇದೆ. 2019ರಲ್ಲಿ ಲೈಟಿಂಗ್‌ಗಾಗಿ 4.35 ಕೋಟಿ ರೂ. ಖರ್ಚಾಗಿತ್ತು. ಬಳಿಕ ಕೋವಿಡ್ ಸಂಕ್ರಮಣ ಕಾಲದಲ್ಲಿ ಸರಳವಾಗಿ ನಡೆದ ದಸರಾದಲ್ಲೂ ಇದಕ್ಕೆ 3.36 ಕೋಟಿ ರೂ. ವಿನಿಯೋಗಿಸಲಾಗಿತ್ತು. ನಂತರ 2021ರಲ್ಲೂ ಸರಳ ದಸರಾದಲ್ಲಿ ಅದ್ದೂರಿಯಾಗಿದ್ದ ದೀಪಾಲಂಕಾರಕ್ಕಾಗಿ 4.37 ಕೋಟಿ ರೂ. ಖರ್ಚು ಮಾಡಲಾಗಿತ್ತು. 2022ರಲ್ಲಿ ಅದ್ದೂರಿಯಾಗಿ ನಡೆದ ನಾಡಹಬ್ಬದಲ್ಲಿ ಇದಕ್ಕೆ 4.81 ಕೋಟಿ ರೂ. ವ್ಯಯ ಮಾಡಲಾಗಿತ್ತು. ಕಳೆದ ವರ್ಷಕ್ಕಿಂತ ಈ ಸಲ 1.24 ಕೋಟಿ ರೂ. ಹೆಚ್ಚು ಖರ್ಚು ಮಾಡಲಾಗಿದೆ. ಪ್ರಸಕ್ತ ಸಾಲಿನ ದೀಪಾಲಂಕಾರಕ್ಕಾಗಿ 6.05 ಕೋಟಿ ರೂ.ಗಳನ್ನು ನೀರಿನಂತೆ ಖರ್ಚು ಮಾಡಲಾಗಿದೆ.
ಈ ಬಾರಿಯೂ ದಸರೆ ಉದ್ಘಾಟನೆ ದಿನವಾದ ಅ.15ರಂದು ಸಾಂಸ್ಕೃತಿಕ ನಗರಿ ದೀಪಗಳ ಅಲಂಕಾರದಿಂದ ಬೆಳಗಲು ಪ್ರಾರಂಭಿಸಿತ್ತು. ಅ.24ರಂದು ವಿಜಯದಶಮಿ ಮೆರವಣಿಗೆಯೊಂದಿಗೆ ದಸರಾ ಸಂಪನ್ನಗೊಂಡಿತು. ದಸರಾ ಮುಗಿದ ಬಳಿಕವೂ ದೀಪಾಲಂಕಾರ ಮುಂದುವರಿಯಿತು. ಹೀಗಾಗಿ, ದೀಪಾಲಂಕಾರ ಕಣ್ತುಂಬಿಕೊಳ್ಳಲು ವಿವಿಧ ಊರುಗಳಿಂದ ಸಹಸ್ರಾರು ಜನರು ಮೈಸೂರಿಗೆ ಬಂದು ಹೋಗಿದ್ದಾರೆ. ಅಷ್ಟರ ಮಟ್ಟಿಗೆ ದಸರಾ ಲೈಟಿಂಗ್ ಜನಸಮೂಹವನ್ನು ಆಕರ್ಷಿಸಿದೆ.
ಪ್ರವಾಸಿಗರು ದೀಪಾಲಂಕಾರವನ್ನು ಸಂಪೂರ್ಣವಾಗಿ ವೀಕ್ಷಿಸಿ ಆನಂದಿಸಲು ಹೆಚ್ಚುವರಿ ಸಮಯದ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಈ ದಿನಗಳಲ್ಲಿ ನಿತ್ಯ ಸಂಜೆ 7ರಿಂದ ರಾತ್ರಿ 10ರವರೆಗೆ ಸತತ ಮೂರು ಗಂಟೆ ಕಾಲ ವೈವಿಧ್ಯಮಯವಾದ ಲಕ್ಷಾಂತರ ದೀಪಗಳು ಪ್ರಜ್ವಲಿಸಿದ್ದವು. ಇಂಧನ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವತಿಯಿಂದ ನಗರದಲ್ಲಿ 120 ಕಿ.ಮೀ. ಉದ್ದದವರೆಗೆ ರಸ್ತೆ, 98 ವೃತ್ತಗಳು, 59 ವಿವಿಧ ಪ್ರತಿಕೃತಿಗಳು, ಇತರ 27 ಕಡೆ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು.
ಬರಗಾಲದ ಸಂದರ್ಭದಲ್ಲೂ ದೀಪಾಲಂಕಾರಕ್ಕೆ ಯಾವುದೇ ಕೊರತೆ ಇರಲಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊರತೆ ಉಂಟಾಗಿದ್ದರೂ ದೀಪಾಲಂಕಾರಕ್ಕೆ ಯಾವುದೇ ರೀತಿಯ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಯಿತು. ‘ಬರ, ರೈತರ ಸಂಕಷ್ಟದ ಸಂದರ್ಭದಲ್ಲಿ ಇಷ್ಟು ಅದ್ದೂರಿ ದೀಪಾಲಂಕಾರ ಬೇಕೇ?’ ಎಂಬ ಪ್ರಶ್ನೆಗಳು ಆರಂಭದಲ್ಲಿ ವ್ಯಕ್ತವಾಗಿದ್ದವು. ಬಳಿಕ ದೀಪಾಲಂಕಾರದ ಜನಪ್ರಿಯತೆ ನಡುವೆ, ಈ ಆಕ್ಷೇಪವೂ ಮಂಜಿನ ಗಡ್ಡೆಯಂತೆ ಕರಗಿಹೋಯಿತು.
ದೀಪಾಲಂಕಾರ ನೋಡಲು ಜನರು ಸಂಜೆ ಹೊತ್ತಿನಲ್ಲಿ ಮುಗಿಬೀಳುತ್ತಿದ್ದರು. ದಸರಾ ಜಂಬೂಸವಾರಿ ಮುಂಗಿದ ಬಳಿಕವೂ ಬೆಂಗಳೂರು, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು, ರಾಮನಗರ ಸೇರಿದಂತೆ ವಿವಿಧ ಭಾಗಗಳಿಂದ ಜನರು ನಗರಕ್ಕೆ ಆಗಮಿಸಿ ದೀಪಾಲಂಕಾರ ಕಣ್ತುಂಬಿಕೊಂಡರು. ವಾಹನ-ಜನದಟ್ಟಣೆ ಉಂಟಾದರೂ ವೀಕ್ಷಕರು ಜಗ್ಗಲಿಲ್ಲ. ಅಷ್ಟರ ಮಟ್ಟಿಗೆ ದೀಪಗಳ ಸಿಂಗಾರ ಪ್ರವಾಸಿಗರು, ಜನರನ್ನು ಸೆಳೆಯಿತು. ಇದೀಗ ಈ ಬೆಳಕಿನ ಕಾಂತಿ ಭಾನುವಾರ ರಾತ್ರಿ 10ಕ್ಕೆ ಸ್ತಬ್ಧಗೊಂಡಿತು.
ದಸರಾ ದೀಪಾಲಂಕಾರ ಭಾನುವಾರ ರಾತ್ರಿಗೆ ಕೊನೆಗೊಂಡಿದೆ. ಲಕ್ಷಾಂತರ ಜನರು ನೋಡಿ ಖುಷಿಪಟ್ಟಿದ್ದಾರೆ. ಪ್ರಾಯೋಜಕತ್ವದಿಂದ ಅಂದಾಜು ವೆಚ್ಚಕ್ಕಿಂತ ಕಡಿಮೆ ಹಣ ಖರ್ಚಾಗಿದೆ. 1.43 ಲಕ್ಷ ಯೂನಿಟ್ ವಿದ್ಯುತ್ ಈ ಸಲ ಬಳಕೆಯಾಗಿದೆ.
ಸುನಿಲ್, ಅಧೀಕ್ಷಕ ಇಂಜಿನಿಯರ್, ಸೆಸ್ಕ್