

ಗದಗ: ಕ್ರೀಡೆಯಲ್ಲಿನ ಸೋಲನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಂಡು ಕ್ರೀಡಾ ಸ್ಪೂರ್ತಿಯೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ ತಿಳಿಸಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರದಂದು 2023-24 ನೇ ಸಾಲಿನ ಗದಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಎಂಬುದು ಬರೀ ಕ್ರೀಡಾಕೂಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಯುವಜನತೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಬೇಕು. ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸಿದಂತಹ ಕ್ರೀಡಾಪಟುಗಳಿದ್ದು ಅವರಂತೆಯೇ ಜಿಲ್ಲೆಯ ಕ್ರೀಡಾಪಟುಗಳು ದಸರಾ ಕ್ರೀಡಾಕೂಟದಲ್ಲಿ ಸಹ ಜಿಲ್ಲೆಯ ಕೀರ್ತಿ ಪತಾಕಿ ಹಾರಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಅವರು ಕ್ರೀಡಾ ಧ್ವಜಾರೋಹಣವನ್ನು ನೇರವೇರಿಸಿದರು. ತಾಲ್ಲೂಕಾ ಕ್ರೀಡಾ ಅಧಿಕಾರಿ ಎಂ.ಎಸ್.ಕುಚಬಾಳ ಅವರು ಪ್ರತಿಜ್ಞೆ ವಿಧಿ ಬೋಧಿಸಿದರು.
ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಯೋಗ ನಿವೃತ್ತ ಶಿಕ್ಷಕ ಕೆ.ಎಸ್.ಪಲ್ಲೇದ, ಜಿಲ್ಲೆಯ ಏಳು ತಾಲ್ಲೂಕು ಕ್ರೀಡಾಪಟುಗಳು ಹಾಗೂ ದೈಹಿಕ ಶಿಕ್ಷಕರು ಭಾಗಿಯಾಗಿದ್ದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗೀತಾಂಜಲಿ ಗೌಡರ ಕಾರ್ಯಕ್ರಮ ನಿರೂಪಿಸಿದರು.ಮಹೇಶ ತಳಳ್ಳಿ ವಂದಿಸಿದರು.