ಮೈಸೂರು ದಸರಾ ಪ್ರಧಾನ ಕವಿಗೋಷ್ಠಿ: ಹೂರಣ- ತೋರಣ

kavi
Published on

ಮೈಸೂರು: ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಶ್ರೀಮತಿ ಧರಣಿದೇವಿ ಮಾಲಗತ್ತಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ದಸರ ಪ್ರಧಾನ ಕವಿಗೋಷ್ಠಿಯಲ್ಲಿ 20 ಜನ ಕವಿಗಳು ತಮ್ಮ ಸ್ವ ರಚಿತ ಕವನಗಳನ್ನು ವಾಚಿಸಿದರು.

ಪ್ರಧಾನ ಕವಿಗೋಷ್ಠಿಯಲ್ಲಿಯೂ ಹಲವರ ಕವನಗಳಿಗೆ ಕೊರೋನಾದ ಸೋಂಕು ಹೆಚ್ಚಾಗಿ ತಗುಲಿದಂತೆ ಕಂಡಿತು. ಸಾಮಾನ್ಯ ಮತ್ತು ವಾಚ್ಯರೂಪದ ಕವನಗಳು ಕೇಳುಗರ ಮನಸೆಳೆಯುವಲ್ಲಿ ವಿಫಲವಾದವು. ಆದರೆ ಬೆರಳೆಣಿಕೆಯಷ್ಟು ಸಹೃದಯಿಗಳ ಮನಸೆಳೆದ ಕವನಗಳೂ ಇದ್ದವು.

ಇತ್ತೀಚೆಗೆ ಅಮೇರಿಕಾದಲ್ಲಿ ಪೋಲೀಸರ ದೌರ್ಜನ್ಯದಿಂದ ಸತ್ತ ಜಾರ್ಜ್ ಫ್ಲಾಯ್ಡ್‌ ನ ದಾರುಣ ಹತ್ಯೆಯ ಕುರಿತು ಡಾ.ಕನಕ ಮಾಲಿನಿ ವಾಚಿಸಿದ "ಕಾಲನೆತ್ತಿ ನಮ್ಮ ಕುತ್ತಿಗೆಯಿಂದ" ಕವನವು ಸಭಿಕರನ್ನು ಕರುಣಾಭಾವದಲ್ಲಿ ಮೀಯುವಂತೆ ಮಾಡಿತು. ಡಾ. ಮಾದು ಪ್ರಸಾದ್ ರವರ " ಮುಖವಾಡವೇಕೆ ಈಗ ಮುಖ ಸಿಕ್ಕಿದೆ" ಕವನವು ನಮ್ಮ ಸಮಾಜದ ಎದುರು ಇರುವ ಸರಿ-ತಪ್ಪುಗಳ ನಡುವಿನ ಆಯ್ಕೆಯ ಗೊಂದಲಗಳನ್ನು ಎಳೆಎಳೆಯಾಗಿ ತೆರೆದಿಟ್ಟಿತು.

ಕವನದ ರಚನೆಯ ಹಿನ್ನಲೆ, ಸ್ಫೂರ್ತಿ ಇತ್ಯಾದಿಗಳನ್ನು ಕವಿಗೋಷ್ಠಿಯಲ್ಲಿ ಕವಿ ಹೇಳುವ ಅಗತ್ಯವಿರುವುದಿಲ್ಲ. ಕೇವಲ ಕವನ ಓದಿದರೆ ಸಾಕು. ಸಶಕ್ತ ಕವನ ಸಹೃದಯಿಗಳನ್ನು ಆ ಆಶಯದ ಜೊತೆಗೆ ಇನ್ನೂ ಹಲವು ಭಾವ ಆಲೋಚನೆಗೆ ದಾರಿ ಮಾಡುತ್ತದೆ. ಹಲವು ಕವಿಗಳು ತಮ್ಮ ಕವನದ ರಚನೆಯ ಹಿನ್ನಲೆ ಹೇಳಿ ವಾಚಿಸಿದರು. ಅವೆಲ್ಲವುಗಳಲ್ಲಿ ಶ್ರೀಮತಿ ಉಷಾ ನರಸಿಂಹನ್ ವಾಚಿಸಿದ ಕವನ "ರೇಪ್ ಒಂದು ವ್ಯಂಗೋಕ್ತಿ" ಕವನ ಮಾತ್ರ ಅವರು ಹೇಳಿದ ಎಲ್ಲಾ ಹಿನ್ನಲೆಯನ್ನು  ಸಮರ್ಥವಾಗಿ ಬಿಂಬಿಸಿತು.

ರೋಷನ್ ಚೋಪ್ರರವರ " ವೇಶ್ಯೆಯರ ಮನದಾಳದ ಮಾತುಗಳು" ಸ್ತ್ರೀ ಸಂವೇದನೆಯನ್ನು ಸಮರ್ಥವಾಗಿ ಬಿಂಬಿಸಿತು. ಕವಿಗೋಷ್ಠಿಯ ಕೊನೆಯಲ್ಲಿ ವಾಚಿಸಿದ ಕುಮಾರ್ ಹೊನ್ನೇನಹಳ್ಳಿ ಯವರ ಕವನ "ನಗರವೆಂಬ ಮಕರಂದ" ಕವಿಗೋಷ್ಠಿಯ ಗಂಭೀರತೆಯನ್ನು ಹೆಚ್ಚಿಸಿತು. ಮನಶಾಸ್ತ್ರೀಯ ಹಿನ್ನಲೆಯನ್ನು ಹೊಂದಿದ ಈ ಕವನ ಕೇವಲ ಸುಖದ ನೆಪಕ್ಕಾಗಿ ನಗರ ಜೀವನಕ್ಕಾಗಿ ಹಪಹಪಿಸುವ ಮನುಷ್ಯನ ಮನಸ್ಥಿತಿ ಗಳನ್ನು, ನಗರ ಜೀವನದ ಉಪಾಧಿಗಳನ್ನು ಹಲವು ರೂಪಕ ಮತ್ತು ಪ್ರತಿಮೆಗಳ ಮೂಲಕ ಸೊಗಸಾಗಿ ವಾಚಿಸಿದರು.  ಒಟ್ಟಾರೆ ಪ್ರಧಾನ ಕವಿಗೋಷ್ಠಿಯಲ್ಲಿ ಭಾವಕೋಶವನ್ನು ಒಡೆಯುವ ಉದ್ದೀಪನಗಳಂತೆ ಕೆಲವು ಕವನಗಳು ಕಂಡುಬಂದರೆ, ಉಳಿದವರ ಕವನಗಳು ಗದ್ಯದ ತುಣುಕುಗಳಾಗಿ,ಕೇವಲ ಹೇಳಿಕೆಗಳಾಗಿ,ಸಲಹೆಗಳಾಗಿ ಉಳಿದುಕೊಂಡವು. ಇಂತಹ ಕರೋನಾ ಸಂಕಷ್ಟದ ಮಧ್ಯೆಯೂ ಕವಿಗಳು ಮತ್ತು  ಸಹೃದಯಿಗಳು ಶಿಸ್ತಿನಿಂದ ಸಾಮಾಜಿಕ ಅಂತರವನ್ನು ಪಾಲಿಸುತ್ತ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net