

ಮೈಸೂರು: ಚುಟುಕು ಮನುಕುಲದ ಆದ್ಯ ಕಾವ್ಯ, ನಂತರ ಖಂಡಕಾವ್ಯ, ಮಹಾಕಾವ್ಯಗಳು ಸೃಷ್ಟಿಯಾಯಿತು. ಚುಟುಕು ಸಣ್ಣದಾಗಿದ್ದರೂ ಅದರ ಸತ್ವವೇನು ಕಡಿಮೆ ಇಲ್ಲ ಎಂದು ಮಹಾಕವಯತ್ರಿ ಡಾ.ಲತಾ ರಾಜಶೇಖರ್ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಸರಾ ಚುಟುಕು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ವಿಶ್ವದ 7 ಅದ್ಭುತಗಳಲ್ಲಿ ನಮ್ಮ ದೇಶದ ತಾಜ್‌ಮಹಲ್ ಕೂಡ ಒಂದಾಗಿದ್ದು, ಅದು ಅತ್ಯಂತ ಸುಂದರವಾಗಿದೆ. ತಾಜ್‌ಮಹಲ್‌ನ ಪುಟ್ಟ ರಚಿಸಿದರೆ ಅದು ಮತ್ತಷ್ಟು ಸುಂದರ ವಾಗಿ ಗೋಚರವಾಗುವ ಜತೆಗೆ ಮನಸ್ಸಿಗೆ ಸಂತಸ ನೀಡುತ್ತದೆ. ಅದೇ ರೀತಿ ಚುಟುಕು ಸಾಹಿತ್ಯ ಸುಂದರವಾಗಿರುವುದರ ಜತೆಗೆ ಎಲ್ಲರ ಮನಸ್ಸಿಗೂ ಸಂತಸ ನೀಡುವ ಶಕ್ತಿ ಹೊಂದಿದೆ ಎಂದರು.
ಚುಟುಕು ಸಾಹಿತ್ಯಕ್ಕೆ ಸುದೀರ್ಘವಾದ ಇತಿಹಾಸವಿದ್ದು, ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಚುಟುಕುಗಳನ್ನು ಭಿನ್ನವಾದ ಹೆಸರುಗಳಿಂದ ಕರೆಯುತ್ತಾರೆ. ನಮ್ಮಲ್ಲಿ ಚುಟುಕು ಹಾಗೂ ಹನಿಗವನ ಹೆಸರಿನಿಂದ ಕರೆಯುತ್ತೇವೆ. ನಾಲ್ಕು ಸಾಲು ಬರೆದರೆ ಅದು ಚುಟುಕು ಕಾವ್ಯ ಆಗುವುದಿಲ್ಲ, ಅದಕ್ಕೆ ಕಾವ್ಯದ ಗುಣ ಇರಬೇಕು ಎಂದು ಹೇಳಿದರು.
ಚುಟುಕು ಸಾಹಿತ್ಯಕ್ಕೆ ಅಂಗೈನಲ್ಲಿ ಆಕಾಶ ದರ್ಶನ ಮಾಡುವ ಶಕ್ತಿ ಇದೆ. ಆಗಸದಲ್ಲಿ ನಕ್ಷತ್ರಗಳು ನಮ್ಮ ಕಣ್ಣಿಗೆ ಸಣ್ಣದಾಗಿ ಗೋಚರಿ ಸಿದರೂ ಅದು ಬಹಳ ದೊಡ್ಡದಾಗಿರುತ್ತದೆ. ಅದೇ ರೀತಿ ಚುಟುಕು ಸಾಹಿತ್ಯ ಕೂಡ ಸಣ್ಣದಾಗಿದ್ದರೂ ಅದರಲ್ಲಿ ಅಡಕವಾಗಿರುವ ವಿಷಯ ತುಂಬಾ ದೊಡ್ಡದಾಗಿರುತ್ತದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ರತ್ನಾ ಹಾಲಪ್ಪಗೌಡ, ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ.ಎಂ.ಜಿ.ಆರ್. ಅರಸ್, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಧರ್ಮದರ್ಶಿ ಆಂದಲೆ ವೀರಭದ್ರೇಗೌಡ ಇದ್ದರು.