ದಸರಾ ಕನ್ನಡದ ಹಬ್ಬ, ಕನ್ನಡಿಗರ ಉತ್ಸವ: ನಾಡೋಜ ಹಂ.ಪ.ನಾಗರಾಜಯ್ಯ ಬಣ್ಣನೆ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

‘ದಸರಾ’ ಕನ್ನಡದ ಹಬ್ಬ, ಕನ್ನಡಿಗರ ಉತ್ಸವ. ಇದರಲ್ಲಿ ದೇಸೀಯತೆ ಸೊಗಡು, ಪರಿಮಳ, ಘಾಟು ಹೊರಸೂಸುತ್ತದೆ..!

ಹೀಗೆಂದವರು ನಾಡೋಜ ಹಂ.ಪ.ನಾಗರಾಜಯ್ಯ.

‘ಹಂಪನಾ’ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶೇಷ ಹೆಸರು. ಈ ಕಾವ್ಯನಾಮದಿಂದ ಹೆಸರಾಗಿರುವ ನಾಡೋಜ ಹಂ.ಪ. ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ. ಕಾದಂಬರಿ, ಕಾವ್ಯ, ಇತಿಹಾಸ, ಭಾಷಾಶಾಸ್ತ್ರ, ಜೈನ ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ 65ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ಸಂಶೋಧಕರೆಂದೇ ಪ್ರಸಿದ್ಧರು.

ಇಂತಹ ಹಿರಿಮೆ-ಗರಿಮೆ ಹೊಂದಿರುವ ಹಂಪನಾ 2024ನೇ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರು. ಅ.3ರಂದು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿದೇವಿ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ‘ವಿಜಯವಾಣಿ’ಯೊಂದಿಗೆ ಹಂಪನಾ ವಾಗ್ಝರಿಯ ಸಾರಾಂಶ ಇಲ್ಲಿದೆ.

ಸುವರ್ಣ ಕೊಂಡಿಯೇ ದಸರಾ:

‘ದಸರಾ ಒಂದು ಜಾತಿ, ಧರ್ಮಕ್ಕೆ ಸೇರಿಲ್ಲ. ಇದು ಎಲ್ಲರ ಹಬ್ಬ. ಕರ್ನಾಟಕದಲ್ಲಿ ಮಾತ್ರ ದಸರಾಕ್ಕೆ ವಿಶೇಷ ಸ್ಥಾನಮಾನ ಇದೆ. ಕೋಲ್ಕತ್ತ, ಗುಜರಾತ್‌ನಲ್ಲೂ ಆಚರಣೆ ಮಾಡುತ್ತಾರೆ. ಆದರೆ, ನಮ್ಮ ದಸರಾಕ್ಕೆ ತನ್ನದೇ ಆದ ಪ್ರಭಾವಳಿ, ಮೆರುಗು, ಹಿನ್ನೆಲೆ ಇದೆ. ಇದರ ಕೀರ್ತಿ ಎಲ್ಲೆಡೆ ಪಸರಿಸಿದೆ. ಇದನ್ನು ನೋಡಲು ದೇಶ-ವಿದೇಶಗಳಿಂದ ಸಹಸ್ರಾರು ಜನರು ಬರುತ್ತಾರೆ.

ಮೈಸೂರಿಗೂ ಒಂದು ಕಾಂತಿ, ವೈಶಿಷ್ಟೃತೆಯೂ ಇದೆ. ಅಲ್ಲಿಯ ಅರಮನೆಗಳು, ಉದ್ಯಾನಗಳು, ರಸ್ತೆಗಳು, ಕಲಾ ಪರಂಪರೆ, ಕರ್ನಾಟಕ ಸಂಗೀತ…ಹೀಗೆ ಮೈಸೂರಿನಲ್ಲಿ ಎಲ್ಲವೂ ಹರಡಿಕೊಂಡಿದೆ. ಈ ಎಲ್ಲವುಗಳಿಗೂ ಸುವರ್ಣ ಕೊಂಡಿಯೇ ದಸರಾ ಎಂದು ವಿಶ್ಲೇಷಿಸಿದರು.

ದಸರೆಯನ್ನು ಯುವ ಜನರಿಗೆ ದಾಟಿಸಿ:

ದಸರಾ ಪರಂಪರೆಯನ್ನು ಕಾಪಾಡಿಕೊಳ್ಳಬೇಕಿದೆ. ಅದು ನಿಂತ ನೀರಾಗಬಾರದು. ಅದನ್ನು ಮುಂದಿನ ತಲೆಮಾರಿಗೂ ತಲುಪಿಸುವ ಮೂಲಕ ಹರಿಯುವ ನೀರಾಗಿ ಪರಿವರ್ತಿಸಬೇಕು. ಇದು ನಮ್ಮೆಲ್ಲರ ಜವಾಬ್ದಾರಿ. ಅದನ್ನು ಅರಿತು ನಾವುಗಳೆಲ್ಲ ದಸರಾದಲ್ಲಿ ಪಾಲ್ಗೊಳ್ಳುವ ಜತೆಗೆ, ಯುವಜನರಿಗೆ ದಾಟಿಸಬೇಕು ಎಂದು ಸಲಹೆ ನೀಡಿದರು.

ಮಣ್ಣಿನ ಮಕ್ಕಳ ಪ್ರದರ್ಶಕ ಕಲೆಗಳಿಗೆ ವೇದಿಕೆ:

ನಮ್ಮ ಜನರು ನೂರಾರು ವರ್ಷ ಹಾಡಿಕೊಂಡ ಬಂದಿರುವ ಕೋಲಾಟ, ಗೊಂಬೆ, ಬಣ್ಣ ಬಣ್ಣದ ವೇಷ, ಅದರಲ್ಲೂ ಹುಲಿವೇಷ ದಸರಾದಲ್ಲಿ ಕಾಣಬಹುದು. ಅಲ್ಲಿ ತೋರಿಸುವ ಸ್ತಬ್ಧಚಿತ್ರಗಳೂ ಆಕರ್ಷಣೆಯೇ. ಇವುಗಳೆಲ್ಲ ಗ್ರಾಮೀಣ ಪ್ರದೇಶದ ಕಲೆಗಳು. ಅದರಲ್ಲೂ ನಮ್ಮ ಮಣ್ಣಿನ ಮಕ್ಕಳ ಪ್ರದರ್ಶಕ ಕಲೆಗಳು. ಸಮಸ್ತ ಕನ್ನಡಿಗರು ಒಂದೆಡೆ ಸೇರಿಕೊಂಡು ಇವುಗಳೆಲ್ಲ ತೋಡಿಕೊಳ್ಳುತ್ತಾರೆ. ಈ ವಿಶಿಷ್ಟತೆಯನ್ನು ಬೇರೆ ಏಲ್ಲಿ ನೋಡಲು ಸಿಗುತ್ತದೆ ನಮಗೆ ಎಂದು ಹಂಪನಾ ಹೇಳಿದರು.

ಭವ್ಯ ಪರಂಪರೆ ಒಣಗಲು ಬಿಡಬಾರದು:

ಅದ್ದೂರಿ ದಸರಾದಲ್ಲಿ ಸಾಂಪ್ರದಾಯಿಕತೆ ಕಡಿಮೆಯಾಗುತ್ತಿರುವುದು ಅಕ್ಷರಶಃ ನಿಜ. ಪರಂಪರೆಯೂ ದೂರವಾಗುತ್ತಿದೆ. ಬೇರುಗಳೂ ಸಡಿಲವಾಗಿ ಒಣಗುತ್ತಿವೆ. ಇಂತಹ ಭವ್ಯ ಪರಂಪರೆ ಒಣಗಲು ಬಿಡಬಾರದು. ನಮ್ಮತನ, ಕನ್ನಡತನ, ನಮ್ಮ ಪರಂಪರೆಯ ಸಮಸ್ತವನ್ನೂ ಬಿಂಬಿಸುವ ಏಕಮೇವಾದ್ವಿತೀಯ ಹಬ್ಬ ದಸರಾ. ಇದನ್ನು ಜಗತ್ತಿನ ಮುಂದೆ ಪ್ರತಿ ವರ್ಷ ತೆರೆದಿಡಬೇಕು ಎಂದು ಆಶಿಸಿದರು.

ದಸರೆ ಪ್ರಜಾಪ್ರಭುತ್ವ ಹಬ್ಬ:

ಅರಮನೆಗೆ ಸೀಮಿತವಾಗಿದ್ದ ದಸರಾ ಇದೀಗ ನಗರದಾಚೆಯೂ ವಿಸ್ತಾರಗೊಂಡು ಮಸುಕಾಗುತ್ತಿದೆ ಎಂಬ ಕಳವಳವೂ ಸಹಜವೇ. ಹಿಂದೆಯೂ ಅರಮನೆಯಲ್ಲಿ ಪ್ರಾರಂಭವಾದ ದಸರಾದಲ್ಲಿ ತೊಡಗುತ್ತಿದ್ದವರು ಪ್ರಜೆಗಳೇ. ಅದು ಸಮಾಜಮುಖಿ, ಜನಮುಖಿಯಾಗಿ ಹೊರಟು ಇದೀಗ ಪ್ರಜಾಪ್ರಭುತ್ವ ಹಬ್ಬವಾಗಿ ಪರಿವರ್ತನೆಗೊಂಡಿದೆ.

ಹಿಂದೆ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಆನೆ ಮೇಲೆ ರಾಜರು ಕುಳಿತುಕೊಳ್ಳುತ್ತಿದ್ದರು. ಈಗ ಅದೇ ಜಾಗದಲ್ಲಿ ಲೋಕವೇ ಆರಾಧಿಸುವ ನಾಡದೇವಿ ಚಾಮುಂಡೇಶ್ವರಿ ತಾಯಿ ವಿರಾಜಮಾನರಾಗಿರುತ್ತಾಳೆ. ಇದು ಅರ್ಥಪೂರ್ಣ ಬದಲಾವಣೆ ಅಲ್ವೇ? ಎಂದೂ ಪ್ರಶ್ನಿಸಿದರು.

ಬದಲಾವಣೆ ನಡುವೆಯೂ ದಸರಾ ಇನ್ನೂ ಜೀವಂತ

ಗ್ರಾಮೀಣರೂ ದಸರೆಯ ಭಾಗವಾಗಿದ್ದರೂ ಅವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಅನಿಸುತ್ತಿದೆ. ಆದರೆ, ನಾಗರಿಕತೆಯ ಪ್ರಭಾವ ಬೇರೆ ದಿಕ್ಕಿನಿಂದಲೂ ಸಂಬಂಧಿಸಿದೆ. 60 ವರ್ಷಗಳ ಹಿಂದಿನ ಹಳ್ಳಿ, ನಗರ, ದಸರಾಕ್ಕೂ ಈಗಿನ ಹಳ್ಳಿ, ನಗರ, ದಸರಾಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಈ ನಡುವೆ ತುಂಬ ನೀರು ಹರಿದಿದೆ, ಪರಿವರ್ತನೆಗಳು ಸಾಕಷ್ಟು ಸಂಭವಿಸಿವೆ.

ನೂರು ವರ್ಷ ಆಗಬಹುದಾದ ವ್ಯತ್ಯಾಸವು ಇದೀಗ ಒಂದು ದಿನ, ಅರ್ಧ ದಿನದಲ್ಲೇ ನಡೆದುಬಿಡುತ್ತದೆ. ಇಂತಹ ವ್ಯತ್ಯಾಸ, ಪ್ರಭಾವಳಿಯ ನಡುವೆ ದಸರಾ ಜೀವಂತವಾಗಿ ಉಳಿದುಕೊಂಡಿದೆ. ಅದು ಸಾಧ್ಯವಾಗಿದ್ದು ಅದರ ಅಂತರ ಶಕ್ತಿ ಮತ್ತು ಅಂತರಸತ್ವದಿಂದ ಎಂದು ಹೆಮ್ಮೆಯಿಂದ ಹೇಳಿದರು.

ಕನ್ನಡ ಸಾಹಿತ್ಯ ಛಾಯೆ ದಸರಾದಲ್ಲಿ ಅಂತರ್ಗತ:

ಕನ್ನಡ ಸಾಹಿತ್ಯವನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸಲು ದಸರೆ ನೀರೆರೆಯುತ್ತಿದೆ. ಕನ್ನಡ ಸಾಹಿತ್ಯ ಛಾಯೆ ದಸರಾದಲ್ಲಿ ಅಂತರ್ಗತವೂ ಆಗಿದೆ. ಏಕೆಂದರೆ, ಕವಿಗೋಷ್ಠಿ, ನಾಟಕ, ನೃತ್ಯ, ಸಂಗೀತ, ಸಾಂಸ್ಕೃತಿಕ ಕಲೆ…ಹೀಗೆ ಇವುಗಳೆಲ್ಲ ಸಾಹಿತ್ಯ ಪ್ರಭೇದಗಳು. ದಸರಾ ಕಲೆಗಳ ತಾಯಿ. ಇವುಗಳಿಗೆಲ್ಲ ಅದು ಆಶ್ರಯ ಕಲ್ಪಿಸಿಕೊಟ್ಟಿದೆ.

ಅನಂತ ವಿಷಯಗಳು, ಜ್ಞಾನ ಶಾಖೆಗಳಿಗೂ ಅದು ಹರಡಿಕೊಂಡಿದೆ. ಹಿಂದಿನ ಗರಡಿ ಕುಸ್ತಿ ಅರಮನೆ ದೇಸಿ ಆಟವಾಗಿತ್ತು. ಈಗ ಒಲಿಂಪಿಕ್ ಕ್ರೀಡಾಕೂಟದಲ್ಲೂ ಕುಸ್ತಿ ಖದರ್ ಮಿಂಚುತ್ತಿದೆ. ಇಲ್ಲಿಯ ಅರಮನೆ-ಗುರು ಮನೆಯಿಂದ ಕುಸ್ತಿಗೆ ಉತ್ತೇಜನ ನೀಡಿ ಆಶ್ರಯ ಕೊಡಲಾಗಿದೆ. ಹೀಗೆ ಶಿಷ್ಟಕಲೆ ಮತ್ತು ಗ್ರಾಮೀಣ ಕಲೆಗಳೆರಡಕ್ಕೂ ದಸರಾ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ನುಡಿದರು.

ಮೊದಲ ಬಾರಿಗೆ ದಸರಾ ನೋಡಿದಾಗ ನನಗೆ 8 ವರ್ಷ:

ನನ್ನ ಜೀವನದಲ್ಲಿ ದಸರಾಕ್ಕೆ ವಿಶೇಷ ಸ್ಥಾನ ಇದೆ. ನಾನು ಗೌರಿಬಿದನೂರು ತಾಲೂಕಿನ ಹಂಪಸಂದ್ರದವನು. ಮೊದಲಿನಿಂದಲೂ ದಸರಾ ನನಗೆ ಆಕರ್ಷಣೆಯೇ. ಮೊದಲ ಬಾರಿಗೆ ದಸರಾ ನೋಡಿದಾಗ ನನಗೆ 8 ವರ್ಷ. ಮೈಸೂರಿನ ನೆಂಟರ ಮನೆಗೆ ತಂದೆ-ತಾಯಿಯೊಂದಿಗೆ ಮೈಸೂರಿಗೆ ಬಂದಿದ್ದೆ. ಐದಾರು ದಿನ ಸಾಂಸ್ಕೃತಿಕ ನಗರಿಯಲ್ಲಿ ಉಳಿದುಕೊಂಡು ದಸರಾವನ್ನು ಕಣ್ತುಂಬಿಕೊಂಡಿದ್ದೆ.

ಬಳಿಕ ಉನ್ನತ ವ್ಯಾಸಂಗಕ್ಕಾಗಿ ಮೈಸೂರಿಗೇ ಬಂದೆ. ಮಹಾರಾಜ ಕಾಲೇಜಿನಲ್ಲಿ ಬಿ.ಎ., ಎಂ.ಎ ಪದವಿ ಓದಿದೆ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲೇ ಅಧ್ಯಾಪಕರಾಗಿ ವೃತ್ತಿ ಜೀವನವನ್ನೂ ಶುರು ಮಾಡಿದ್ದೆ. ಹೀಗಾಗಿ, ಸಾಕಷ್ಟು ಸಲ ದಸರಾವನ್ನು ವೀಕ್ಷಿಸಲು ಅವಕಾಶ ದೊರೆಯಿತು. ಹೀಗಾಗಿ, ದಸರಾ ಕುರಿತು ವಿಶೇಷ ಒಲವು, ಪ್ರೀತಿ, ಗೌರವ ಇದೆ ಎಂದು ಖುಷಿಯಿಂದ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net