

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭಗೊಂಡಿದೆ. ವಿಜೃಂಭಣೆಯ ದಸರಾ ಮಹೋತ್ಸವದ ನಿರೀಕ್ಷೆಯಲ್ಲಿ ಜನರಿದ್ದಾರೆ. ಆದರೆ ನಗರಸಭೆ ಮಾತ್ರ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳದೆ ನಿದ್ರಾವಸ್ಥೆಯಲ್ಲಿದೆ ಎಂದು ಕೊಡಗು ರಕ್ಷಣಾ ವೇದಿಕೆಯ ಮಡಿಕೇರಿ ನಗರಾಧ್ಯಕ್ಷ ಚೊಟ್ಟೆಯಂಡ ಶರತ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಮಂಜಿನ ನಗರಿ ಮಡಿಕೇರಿಯ ಐತಿಹಾಸಿಕ ದಸರಾ ಉತ್ಸವ ಕರಗೋತ್ಸವದ ಮೂಲಕ ಆರಂಭಗೊಳ್ಳುತ್ತಿದೆ. ಐದು ದಿನಗಳು ಮಾತ್ರ ಬಾಕಿ ಉಳಿದಿದ್ದು, ಹಬ್ಬದ ವಾತಾವರಣವನ್ನು ಸೃಷ್ಟಿಸಬೇಕಾದ ನಗರಸಭೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಸೆ೨೬ ರಿಂದ ನಗರ ಸಂಚಾರ ಆರಂಭಿಸುತ್ತಿವೆ. ಆದರೆ ರಸ್ತೆಗಳೆಲ್ಲವೂ ಹದಗೆಟ್ಟಿದ್ದು, ಹೊಂಡ, ಗುಂಡಿಗಳಾಗಿವೆ. ವಾಹನಗಳು ಮಾತ್ರವಲ್ಲ ಪಾದಾಚಾರಿಗಳು ಕೂಡ ನಡೆದಾಡಲು ಸಾಧ್ಯವಾಗದ ಸ್ಥಿತಿ ಇದೆ ಎಂದು ದೂರಿದ್ದಾರೆ.
ದುರಸ್ತಿ ಕಾಣದ ರಸ್ತೆಗಳು, ಶುಚಿತ್ವವಿಲ್ಲದ ಚರಂಡಿಗಳು, ಕಾಡು ತುಂಬಿರುವ ಬಡಾವಣೆಗಳು, ಬೀದಿ ದೀಪಗಳಿಲ್ಲದ ವಿದ್ಯುತ್ ಕಂಬಗಳು, ಬೀದಿ ನಾಯಿಗಳ ಹಾವಳಿ, ಈ ಎಲ್ಲಾ ಅವ್ಯವಸ್ಥೆಗಳ ನಡುವೆ ಕರಗಗಳ ಸಂಚಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು, ನಗರಸಭೆಯ ಆಡಳಿತ ವ್ಯವಸ್ಥೆಗೆ ನಗರದ ಅಭಿವೃದ್ಧಿಯ ಬಗ್ಗೆ ನೈಜ ಕಾಳಜಿ ಇಲ್ಲವೆಂದು ಟೀಕಿಸಿದ್ದಾರೆ.
ಜನರಲ್ಲಿ ದಸರಾ ಹಬ್ಬದ ಸಂಭ್ರಮವಿದ್ದರೂ ನಗರದಲ್ಲಿ ಜನೋತ್ಸವದ ಮೆರಗನ್ನು ತುಂಬುವಲ್ಲಿ ನಗರಸಭೆ ವಿಫಲವಾಗಿದೆ. ಐತಿಹಾಸಿಕ ಕಟ್ಟಡಗಳು ಮತ್ತು ಪಾರ್ಕ್‌ಗಳಿಗೆ ಸುಣ್ಣ, ಬಣ್ಣ ಬಳಿಯುವ ಕನಿಷ್ಠ ಕಾರ್ಯವನ್ನು ಕೂಡ ಮಾಡಿಲ್ಲ. ದಸರಾ ಉತ್ಸವಕ್ಕೆ ೨ ರಿಂದ ೩ ಲಕ್ಷ ಜನ ಮಡಿಕೇರಿಗೆ ಬರುವ ನಿರೀಕ್ಷೆ ದಸರಾ ಸಮಿತಿಯಲ್ಲಿದೆ. ಆದರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಗರಸಭೆ ಯಾವುದೇ ತಯಾರಿಗಳನ್ನು ಮಾಡಿಕೊಂಡಂತೆ ಕಂಡು ಬರುತ್ತಿಲ್ಲ ಎಂದು ಹೇಳಿದ್ದಾರೆ.
ತಕ್ಷಣ ಎಲ್ಲಾ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳ ಕಾಮಗಾರಿಗಳನ್ನು ಆರಂಭಿಸದಿದ್ದಲ್ಲಿ ಆಡಳಿತ ವ್ಯವಸ್ಥೆಯ ರಾಜಿನಾಮೆಗೆ ಒತ್ತಾಯಿಸಿ ನಗರಸಭೆಯ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.