

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ವಿವಿಧ ಕ್ಷೇತ್ರಗಳ ಆದಾಯ ಮೂಲವಾಗಿ ಪರಿಣಮಿಸಿದ್ದು, ಕೆಎಸ್‌ಆರ್‌ಟಿಸಿಗೂ ಹೆಚ್ಚಿನ ಆದಾಯವನ್ನು ತಂದುಕೊಟ್ಟಿದೆ.
ದಸರಾ ಸಂದರ್ಭದಲ್ಲಿ ಪ್ರಯಾಣ ದರದಿಂದ ಕಳೆದ ವರ್ಷ 2.70 ಕೋಟಿ ರೂ. ಆದಾಯ ಹರಿದು ಬಂದಿತ್ತು. ಈ ಸಲ 4 ಕೋಟಿ ರೂ. ಆದಾಯ ಬಂದಿದೆ. ಕಳೆದ ಸಲಕ್ಕಿಂತ ಈ ಬಾರಿ 1.30 ಕೋಟಿ ರೂ. ಹೆಚ್ಚಿನ ಆದಾಯ ದೊರೆತಿದೆ. ಇದು ಶಕ್ತಿ ಯೋಜನೆ ಎಫೆಕ್ಟ್.
ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದ ಈ ಸಲ ನಿರೀಕ್ಷೆಗೂ ಮೀರಿ ಜನಸಾಗರ ದಸರಾ ನೋಡಲು ಮೈಸೂರಿಗೆ ಹರಿದು ಬಂದಿತ್ತು. ಈ ಪೈಕಿ ಬಹುತೇಕರು ಮಹಿಳೆಯರು ಕುಟುಂಬ ಸಹಿತ ಕೆಂಪು ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ.
ಜತೆಗೆ, ಶಾಲಾ-ಕಾಲೇಜುಗಳಿಗೆ ದಸರಾ ರಜೆ, ಉದ್ಯೋಗದಾತರಿಗೆ ಸಾಲು ಸಾಲು ಸರ್ಕಾರಿ ರಜೆಯಿಂದಾಗಿ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೌಡಾಯಿಸಿದ್ದರು.
ದಸರಾ ಸಂದರ್ಭದಲ್ಲಿ ಬಳಕೆಯಾದ ವಾಹನಗಳಲ್ಲಿ ಶೇ.64ರಷ್ಟು ಮಹಿಳೆಯರು ಹಾಗೂ ಶೇ.37ರಷ್ಟು ಪುರುಷರು ಕೆಎಸ್‌ಆರ್‌ಟಿಸಿ ಬಸ್ ಸೇವೆ ಉಪಯೋಗ ಮಾಡಿಕೊಂಡಿದ್ದಾರೆ. ಮೈಸೂರು ಸುತ್ತಲಿನ ಜಿಲ್ಲೆಗಳ ಜನರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಿಂದಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಸರಾವನ್ನು ಕಣ್ತುಂಬಿಕೊಂಡಿದ್ದಾರೆ.
ವಾರಾಂತ್ಯ ರಜೆ ದಿನವಾದ ಅ.21, 22, 23ರಂದು ಆಯುಧ ಪೂಜೆ, 24ರಂದು ವಿಜಯದಶಮಿ ರಜೆ ದಿನದಂದು ಜನಪ್ರವಾಹವೇ ಹರಿದು ಬಂದಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ನಿತ್ಯವೂ 4.90 ಲಕ್ಷ ಜನರು ಪ್ರಯಾಣಿಸುತ್ತಾರೆ.
ಆದರೆ, ವಿಜಯದಶಮಿ ಹಿಂದಿನ ಒಂದು ವಾರ ಹಾಗೂ ನಂತರದ ಮೂರ್ನಾಲ್ಕು ದಿನ ನಿತ್ಯ ಅಂದಾಜು 30,000 ಜನ ಹೆಚ್ಚುವರಿಯಾಗಿ ಸೇವೆ ಬಳಕೆ ಮಾಡಿದ್ದಾರೆ. 11 ದಿನ ಹೆಚ್ಚುವರಿಯಾಗಿ 3.5 ಲಕ್ಷ ಜನರು ಬಸ್‌ನಲ್ಲಿ ಸಂಚಾರ ಮಾಡಿದ್ದಾರೆ.
ದಸರಾ ಅಂಗವಾಗಿ ಹೆಚ್ಚುವರಿಯಾಗಿ 350 ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಬೆಂಗಳೂರು-ಮೈಸೂರು ಮಾರ್ಗಕ್ಕೆ ನಿತ್ಯವೂ 250 ಬಸ್‌ಗಳನ್ನು ಉಪಯೋಗಿಸಿಕೊಳ್ಳಲಾಗಿತ್ತು. ಚಾಮರಾಜನಗರ, ಕೊಳ್ಳೇಗಾಲ, ಮಡಿಕೇರಿ, ಕುಶಾಲನಗರ, ಹಾಸನ, ಚೆನ್ನರಾಯಪಟ್ಟಣ, ಮಂಡ್ಯ, ಮಳವಳ್ಳಿ, ಪಾಂಡವಪುರ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಿಂದೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್ ತಿಳಿಸಿದ್ದಾರೆ.
ದಸರಾ ಮಹೋತ್ಸವದ 10 ದಿನಗಳ ಅವಧಿಯಲ್ಲಿ ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ದಾಖಲೆ ಪ್ರಮಾಣದಲ್ಲಿ ಸಾರ್ವಜನಿಕರು ಭೇಟಿ ನೀಡಿದ್ದಾರೆ.
2022ರಲ್ಲಿ 1,55,588 ಜನರು ಮಾತ್ರ ಮೃಗಾಲಯಕ್ಕೆ ಭೇಟಿ ನೀಡಿದ್ದರು. 2023ರಲ್ಲಿ 1,65,003 ಜನರು ಭೇಟಿ ನೀಡಿದ್ದು, ಇದರಿಂದ ಆದಾಯದಲ್ಲೂ ಹೆಚ್ಚಳವಾಗಿದೆ.
ಈ ಅವಧಿಯಲ್ಲಿ ಅರಮನೆಗೂ ದಾಖಲೆ ಪ್ರಮಾಣದಲ್ಲಿ ಸಾರ್ವಜನಿಕರು ಭೇಟಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ದಸರಾ ಸಮಯದಲ್ಲಿ ಈ ಬಾರಿ 18 ಸಾವಿರ ಹೆಚ್ಚುವರಿ ಜನರು ಅರಮನೆ ವೀಕ್ಷಣೆ ಮಾಡಿದ್ದಾರೆ. ಪ್ರವೇಶ ಟಿಕೆಟ್ ದರದಿಂದ ಅರಮನೆ ಆಡಳಿತ ಮಂಡಳಿ ಹೆಚ್ಚಿನ ಆದಾಯ ಹರಿದು ಬಂದಿದೆ.
2022ರಲ್ಲಿ 98,142 ಜನರು ಭೇಟಿ ನೀಡಿದ್ದರು. 2023ರಲ್ಲಿ 1,16,749 ಜನರು ಭೇಟಿ ನೀಡಿದ್ದಾರೆ. ಇದು ಪ್ರವೇಶ ಟಿಕೆಟ್ ಪಡೆದು ಅರಮನೆ ವೀಕ್ಷಣೆ ಮಾಡಿದವರ ಲೆಕ್ಕವಾಗಿದೆ. ಸಂಜೆ ಹೊತ್ತಿನಲ್ಲಿ ಅರಮನೆ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಬಂದ ಜನರನ್ನು ಈ ಲೆಕ್ಕದಲ್ಲಿ ಸೇರಿಸಿಲ್ಲ.