ದಸರಾ ಗಜಪಯಣಕ್ಕೆ ಆ.21 ರಂದು ಚಾಲನೆ

mysore dasara gajapayana
Published on

ಮೈಸೂರು: ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ 10.20 ರಿಂದ 10.45ರ ಅವಧಿಯಲ್ಲಿ ಸಲ್ಲುವ ತುಲಾ ಲಗ್ನದಲ್ಲಿ ನಾಡಹಬ್ಬ ದಸರಾ ಉತ್ಸವದ ‘ಗಜಪಯಣ’ಕ್ಕೆ ಚಾಲನೆ ದೊರೆಯಲಿದೆ.

ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿದೆ. ಅಂಬಾರಿ ಆನೆಯೊಂದಿಗೆ ಧನಂಜಯ, ಭೀಮ, ಗೋಪಿ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮೀ ಮತ್ತು ಲಕ್ಷ್ಮೀ ಆನೆಗಳನ್ನು ಬರಲಿವೆ. ಉಳಿದ 5 ಆನೆಗಳನ್ನು 10 ದಿನಗಳ ಬಳಿಕ 2ನೇ ತಂಡದಲ್ಲಿ ಕರೆತರಲು ಸಿದ್ಧತೆ ಕೈಗೊಳ್ಳಲಾಗಿದೆ. ವೀರನಹೊಸಳ್ಳಿಯಿಂದ ಲಾರಿಗಳ ಮೂಲಕ ನಗರಕ್ಕೆ ಆಗಮಿಸುವ ಗಜಪಡೆ ಅರಣ್ಯ ಭವನದಲ್ಲಿ ಬೀಡು ಬಿಡಲಿದ್ದು, ಆ ನಂತರ ಆ.23 ರಂದು ಅರಮನೆ ಪ್ರವೇಶಿಸಲಿದೆ.

ಸಭಾ ಕಾರ್ಯಕ್ರಮ: ಆನೆಗಳಿಗೆ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಿದ ನಂತರ ಬೆಳಗ್ಗೆ 11.20ಕ್ಕೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗಜಪಯಣಕ್ಕೆ ಚಾಲನೆ ನೀಡುವರು. ಆನೆಗಳ ಕಿರು ಪುಸ್ತಕವನ್ನು ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಬಿಡುಗಡೆ ಮಾಡುವರು. ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಚಿವ ಕೆ.ವೆಂಕಟೇಶ್, ಶಿವರಾಜ್ ಸಂಗಪ್ಪ ತಂಗಡಗಿ, ಶಾಸಕರಾದ ಅನಿಲ್ ಚಿಕ್ಕಮಾದು, ರಮೇಶ್ ಬಂಡಿಸಿದ್ದೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net