ದಸರಾ ಗಜಪಯಣಕ್ಕೆ ಸಂಭ್ರಮದ ಚಾಲನೆ

Gajapayana
Published on

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ಹೊಂದಿರುವ ವೀರನಹೊಸಳ್ಳಿಯಿಂದ ಈ ಬಾರಿಯ ನಾಡಹಬ್ಬ ದಸರಾ ಉತ್ಸವದ ಗಜಪಯಣಕ್ಕೆ ಸಂಭ್ರಮದ ಚಾಲನೆ ದೊರೆಯಿತು. ಜಂಬೂಸವಾರಿ ಮೆರವಣಿಗೆಯನ್ನು ನೆನಪಿಸುವ ರೀತಿಯಲ್ಲಿ ಗಜಪಯಣ ಅದ್ಧೂರಿಯಾಗಿ ನೆರವೇರಿತು.

ವೀರನಹೊಸಳ್ಳಿಯಿಂದ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಆನೆಗಳು ಮೈಸೂರಿನತ್ತ ಆಗಮಿಸಿದವು. ಅಭಿಮನ್ಯು(ಮತ್ತಿಗೋಡು ಶಿಬಿರ)ವಿನೊಂದಿಗೆ ಮತ್ತಿಗೋಡು ಶಿಬಿರದ ಏಕಲವ್ಯ ಮತ್ತು ಭೀಮ, ರಾಮಪುರದ ಲಕ್ಷ್ಮೀ, ಭೀಮನಕಟ್ಟೆಯ ವರಲಕ್ಷ್ಮೀ, ರಾಮಪುರದ ರೋಹಿತ್, ದುಬಾರೆ ಶಿಬಿರದ ಕಂಜನ್, ಧನಂಜಯ ಹಾಗೂ ಗೋಪಿ ಆನೆಗಳು ಅರಮನೆ ನಗರಿ ಮೈಸೂರಿನತ್ತ ಪಯಣ ಬೆಳೆಸಿದವು. ಒಟ್ಟು 7 ಗಂಡಾನೆ ಹಾಗೂ 2 ಹೆಣ್ಣಾನೆಗಳು ತಂಡದಲ್ಲಿ ಇದೆ.

ಗಜಪಡೆಯ ಸಂಭ್ರಮದ ಕ್ಷಣ ಹೀಗಿತ್ತು: ಗಜಪಡೆಗೆ ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಆನೆಗಳ ಪಾದಗಳನ್ನು ತೊಳೆದು ಅರಿಶಿಣ, ಕುಂಕುಮ ಹಚ್ಚಿ ಪುಷ್ಪಗಳನ್ನು ಇಟ್ಟು ವಿಘ್ನ ನಿವಾರಕ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ಆ ನಂತರ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಬೆಳಗ್ಗೆ 10.40ಕ್ಕೆ ತುಲಾ ಲಗ್ನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆನೆಗಳಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಆನೆಗಳಿಗೆ ಪ್ರಿಯವಾದ ಕಡುಬು, ಮೋದಕ, ಚಕ್ಕುಲಿ, ಕೋಡುಬಾಳೆ, ಸಜ್ಜಪ್ಪ, ಕಬ್ಬು, ಬೆಲ್ಲ, ವಿವಿಧ ಹಣ್ಣು ಹಂಪಲುಗಳನ್ನು ನೀಡಲಾಯಿತು. ಗಜಪಯಣಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಆನೆಗಳು ಸೊಂಡಿಲು ಎತ್ತಿ ನಮಸ್ಕರಿಸಿದವು. ಈ ಸಂದರ್ಭ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಜನರು ಶಿಳ್ಳೆ, ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಈ ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಂಡರು.

ಕಣ್ಮನ ಸೆಳೆದ ಮೆರವಣಿಗೆ: ಪ್ರಕೃತಿಯ ಸುಂದರ ತಾಣ ವೀರನಹೊಸಳ್ಳಿ ತಪಾಸಣಾ ಗೇಟ್‌ನಿಂದ ಆರಂಭಗೊಂಡ ಗಜಪಯಣ ಸಭಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೀರನಹೊಸಳ್ಳಿ ಮೈದಾನಕ್ಕೆ 11.20ಕ್ಕೆ ಆಗಮಿಸಿತು. 1 ಕಿ.ಮೀ.ವರೆಗೆ ನಡೆದ ಗಜಪಯಣ ದಸರಾ ಜಂಬೂಸವಾರಿಯನ್ನು ನೆನಪಿಸುವ ರೀತಿಯಲ್ಲಿ ಇತ್ತು. ಗಜಪಯಣಕ್ಕೆ ನಾದಸ್ವರ, ಪಟದ ಕುಣಿತ, ಪೂಜಾ ಕುಣಿತ, ಕಂಸಾಳೆ, ಡೊಳ್ಳು, ತಮಟೆ, ಚಂಡೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರಗು ನೀಡಿತು.

ವೀರನಹೊಸಳ್ಳಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಆನೆಗಳು ಲಾರಿಗಳ ಮೂಲಕ ಮೈಸೂರಿನತ್ತ ಪ್ರಯಣಿಸಿ ಸಂಜೆ ನಗರದ ಅರಣ್ಯ ಭವನದ ಆವರಣಕ್ಕೆ ಆಗಮಿಸಿತು. ಆನೆಗಳು ಆ.22 ರಂದು ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆದ ನಂತರ ಆ.23 ರಂದು ಬೆಳಗ್ಗೆ 10ಕ್ಕೆ ತುಲಾ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣವನ್ನು ಪ್ರವೇಶಿಸಲಿದೆ.

ಗಜಪಯಣ ಸಂದರ್ಭ ಅರಣ್ಯ ಸಚಿವ ಈಶ್ವರ ಖಂಡ್ರೆ, ಚಾಮರಾಜನಗರ ಸಂಸದ ಸುನಿಲ್ ಬೋಸ್, ಶಾಸಕರಾದ ಜಿ.ಡಿ.ಹರೀಶ್ ಗೌಡ, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮರಿಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಡಿಸಿಎಫ್‌ಗಳಾದ ಐ.ಬಿ.ಪ್ರಭುಗೌಡ, ಕೆ.ಎನ್. ಬಸವರಾಜು, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ದೊಡ್ಡ ಹೆಜ್ಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಬಿಕಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net