

ಮೈಸೂರು: ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಮಲ್ಟಿಫ್ಲೆಕ್ಸ್‌ನಲ್ಲಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಕಿರುಚಿತ್ರಗಳ ಪೈಕಿ ಅತ್ಯುತ್ತಮ ಕಿರುಚಿತ್ರಗಳಿಗೆ ಗುರುವಾರ ಬಹುಮಾನ ನೀಡಲಾಯಿತು.
ಸುತನ್ ನಿರ್ದೇಶನದ ಲಕುಮಿ ಕಿರುಚಿತ್ರಕ್ಕೆ ಪ್ರಥಮ ಬಹುಮಾನ ಹಾಗೂ 20 ಸಾವಿರ ರೂ.ಗಳ ಗೌರವಧನ, ಮಣಿಕಂಠ ನಿರ್ದೇಶನದ ಹಿಂಬಾಲಿಸು ಚಿತ್ರಕ್ಕೆ ಎರಡನೇ ಬಹುಮಾನ ಹಾಗೂ 15 ಸಾವಿರ ರೂ.ಗಳ ಗೌರವಧನ ಮತ್ತು ಡಿ.ಎಸ್. ಶಶಿಕುಮಾರ್ ನಿರ್ದೇಶನದ ಹಬ್ಬದ ಹಸಿವು ಚಿತ್ರಕ್ಕೆ ಮೂರನೇ ಬಹುಮಾನ ಹಾಗೂ 10 ಸಾವಿರ ರೂ.ಗಳ ಗೌರವಧನ ನೀಡಲಾಯಿತು.
ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಲಕುಮಿ ಹಾಗೂ ಅತ್ಯುತ್ತಮ ಸಂಕಲನಕಗಾರ ವಿಭಾಗದಲ್ಲಿ ಹಿಂಬಾಲಿಸು ಕಿರುಚಿತ್ರಕ್ಕೆ ಪ್ರಶಸ್ತಿ ದೊರೆಯಿತು.
ಕಿರುತೆರೆ ನಟಿ ದೀಪಾ ರವಿಶಂಕರ್ ಮಾತನಾಡಿ, ಪ್ರಶಸ್ತಿ ಸಿಗದವರು ಬೇಸರಗೊಳ್ಳಬೇಡಿ, ಕಡಿಮೆ ಸಮಯದಲ್ಲಿ ಒಂದು ಸಂದೇಶ ಸಾರುವ ಕಿರುಚಿತ್ರ ಮಾಡುವುದು ಕಮರ್ಷಿಯಲ್ ಸಿನಿಮಾಗಿಂತ ಕಷ್ಟಕರ ಹಾಗೂ ಇದಕ್ಕೆ ಶ್ರದ್ದೆ ಬಹಳ ಮುಖ್ಯವಾಗಿರುತ್ತದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಿರುಚಿತ್ರಗಳನ್ನು ಮತ್ತಷ್ಟು ಹೊರ ಬರಲಿ ಎಂದರು.
ಕಿರುತೆರೆ ನಟ ಅಶ್ವಿನ್ ಕುಮಾರ್, ಹಿರಿಯ ಛಾಯಾಗ್ರಾಹಕ ಅಶ್ವತ್ ನಾರಾಯಣ, ಚಲನಚಿತ್ರ ಉಪ ಸಮಿತಿ ಉಪಾಧ್ಯಕ್ಷ ಸಿದ್ಧರಾಜು, ವಿಶೇಷಾಧಿಕಾರಿ ವಿಜಯ್ ಕುಮಾರ್, ತೀರ್ಪುಗಾರರಾದ ಕಾವಾ ಕಾಲೇಜಿನ ಪ್ರಾಧ್ಯಾಪಕಿ ಚರಿತಾ, ಇಎಂಎಂಆರ್‌ಸಿ ತಂತ್ರಜ್ಞರಾದ ಗೋಪಿನಾಥ್ ಹಾಗೂ ಇತರರು ಇದ್ದರು.