ದಸರೆಯಲ್ಲಿ ಅಪ್ಪು ಚಿತ್ರೋತ್ಸವ..!

Puneeth
Published on
  • ಒಂದು ದಿನವಿಡೀ ಪುನೀತ್ ಚಿತ್ರಗಳ ಪ್ರರ್ದಶಕ್ಕೆ ಮೀಸಲು
  • ವಿಶ್ವದ ಅತ್ಯುತ್ತಮ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಅವಕಾಶ

ಸದೇಶ್ ಕಾರ್ಮಾಡ್ ಮೈಸೂರು
ಅತ್ಯುತ್ತಮ ಅಭಿನಯ ಹಾಗೂ ಮಾನವೀಯ ಗುಣಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಚಿತ್ರಗಳು ಈ ಬಾರಿಯ ದಸರಾ ಚಲನಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.

ಅಪ್ಪು ಅಗಲಿದ ನಂತರ ಅವರ ಕೊನೆಯ ಚಿತ್ರ ಜೇಮ್ಸ್ ತೆರೆ ಕಂಡಿತು. ಅದಾದ ನಂತರ ದೊಡ್ಡ ಪರದೆ ಮೇಲೆ ಅಪ್ಪು ಚಿತ್ರಗಳನ್ನು ನೋಡಿ ಸಂಭ್ರಮಿಸುವ ಸೌಭಾಗ್ಯ ಅವರ ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ದೊರೆಯಲಿಲ್ಲ. ಇದೀಗ ಅಂಥದೊಂದು ಅವಕಾಶವನ್ನು ದಸರಾ ಚಲನಚಿತ್ರೋತ್ಸವ ಸಮಿತಿ ಸೃಷ್ಟಿ ಮಾಡಿಕೊಡುತ್ತಿದೆ. ದಸರಾ ಚಲನಚಿತ್ರೋತ್ಸವದಲ್ಲಿ ಒಂದು ದಿನವಿಡೀ ಅಪ್ಪು ಅಭಿನಯದ ವಿವಿಧ ಚಿತ್ರಗಳು ನೋಡಿ ಸಂಭ್ರಮಿಸಬಹುದು. ‘ಅಪ್ಪು ದಿನ’ ಹೆಸರಿನಲ್ಲಿ ಪುನೀತ್ ರಾಜ್ ಕುಮಾರ್ ನಟಿಸಿದ ಬೆಟ್ಟದ ಹೂವು ಸೇರಿದಂತೆ ಹಲವು ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಅಪ್ಪು ಚಿತ್ರವನ್ನು ಮತ್ತೆ ದೊಡ್ಡ ಸ್ಕ್ರೀನ್‌ನಲ್ಲಿ ನೋಡಲು ಬಯಸುವವರ ಪಾಲಿಗೆ ಈ ಬಾರಿಯ ದಸರಾ ಚಲನಚಿತ್ರೋತ್ಸವ ಹಬ್ಬವಾಗಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ದಸರಾ ಸಂಭ್ರಮ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ಈ ಬಾರಿ ಕೋವಿಡ್ ಆತಂಕ ಸಂಪೂರ್ಣ ದೂರವಾಗಿ ಅದ್ಧೂರಿಯಾಗಿ ದಸರಾ ಉತ್ಸವ ಆಚರಿಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವವನ್ನು ಸೆ.26 ರಿಂದ 7 ದಿನಗಳ ಕಾಲ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳ ಲಾಗುತ್ತಿದೆ. ಸೆ.26 ರಂದು ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಸೆ.27 ರಂದು ‘ಅಪ್ಪು ದಿನ’ದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಅದಾದ ನಂತರ ಎಂದಿನಂತೆ ಸ್ಯಾಂಡಲ್‌ವುಡ್‌ನ ಅತ್ಯುತ್ತಮ ಚಿತ್ರಗಳು, ಪನೋರಮಾ ಚಿತ್ರಗಳು, ಅಂತಾರಾಷ್ಟ್ರೀಯ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ನಗರದ ಡಿಆರ್‌ಸಿ ಹಾಗೂ ಐನಾಕ್ಸ್ ಮಲ್ಟಿಫ್ಲೆಕ್ಸ್‌ನಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ದಿನಕ್ಕೆ ನಾಲ್ಕು ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಇದಕ್ಕೆ ಡಿಆರ್‌ಸಿ ಹಾಗೂ ಐನಾಕ್ಸ್‌ನ ತಲಾ 3 ಸ್ಕ್ರೀನ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿಯ ಚಲನಚಿತ್ರೋತ್ಸವಕ್ಕೆ ಡಿಆರ್‌ಸಿ ಸಿನಿಮಾನ್ಸ್ ಒಂದು ಸ್ಕ್ರೀನ್‌ಅನ್ನು ಸಂಪೂರ್ಣ ಉಚಿತವಾಗಿ ನೀಡಿರುವುದು ವಿಶೇಷ. ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳ ಮಾಹಿತಿ ಸದ್ಯದಲ್ಲಿಯೇ ಬಿಡುಗಡೆಗೊಳ್ಳಲಿದೆ. ಚಲನಚಿತ್ರ ವೀಕ್ಷಣೆಗೆ ಪಾಸ್‌ಗಳನ್ನು ನೀಡಲಾಗುವುದು. ಪಾಸ್‌ಗಳಿಗೆ ನಿರ್ದಿಷ್ಟ ಮೊತ್ತವನ್ನು ನಿಗದಿ ಪಡಿಸಲಾಗುವುದು.

ಸಿನಿಮಾ ತಯಾರಿಕೆ ಕಾರ್ಯಾಗಾರ:
ಇತ್ತೀಚೆಗೆ ಯುವ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಕ್ಷೇತ್ರ ಆಕರ್ಷಿಸುತ್ತಿದೆ. ಸಿನಿಮಾ ಪ್ರದರ್ಶನಕ್ಕೆ ಒಟಿಟಿ ವೇದಿಕೆಯೊದಗಿ ಸಲು ಪ್ರಾರಂಭವಾದ ನಂತರ ಕಡಿಮೆ ಬಜೆಟ್‌ನಲ್ಲಿ ಹಲವಾರು ಅತ್ಯುತ್ತಮ ಚಿತ್ರಗಳನ್ನು ಹೊಸ ನಿರ್ದೇಶಕರು, ಹೊಸ ನಿರ್ಮಾಪಕರ ನಿರ್ಮಾಣ ಮಾಡಿದ್ದಾರೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಕಡೆಗೆ ಆಕರ್ಷಿರಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಿನಿಮಾ ನಿರ್ಮಾಣದ ಕುರಿತು ತರಬೇತಿಯ ಅವಶ್ಯಕತೆ ಇರುವುದನ್ನು ಮನಗಂಡ ದಸರಾ ಚಲನಚಿತ್ರೋತ್ಸವ ಸಮಿತಿಯು ಸಿನಿಮಾ ಪ್ರಿ ಪೊಡಕ್ಷನ್ ನಿರ್ಮಾಣದ ಕುರಿತು ಕಾರ್ಯಾಗಾರ ಆಯೋಜಿಸಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಕಾರ್ಯಾಗಾರ ವನ್ನು ನಡೆಸಿಕೊಡಲಿದ್ದಾರೆ. ಈ ಬಾರಿಯ ಚಲನಚಿತ್ರೋತ್ಸವ ಒಂದಷ್ಟು ಉತ್ತಮ ಚಿತ್ರ ನಿರ್ದೇಶಕರನ್ನು ಹುಟ್ಟು ಹಾಕುವ ಭರವಸೆ ಮೂಡಿಸುತ್ತಿದೆ.

ಚಲನಚಿತ್ರೋತ್ಸವ ಕಿರುಚಿತ್ರ ಸ್ಪರ್ಧೆ
ದಸರಾ ಚಲನಚಿತ್ರೋತ್ಸವ ಪ್ರಯುಕ್ತ ಕಿರುಚಿತ್ರ ಸ್ಫರ್ಧೆ ಹಮ್ಮಿಕೊಳ್ಳಲಾಗಿದೆ. ಕಿರುಚಿತ್ರದ ಒಟ್ಟು ಅವಧಿಯು (ಶೀರ್ಷಿಕೆಯೂ ಸೇರಿದಂತೆ) 5 ನಿಮಿಷಗಳ ಒಳಗೆ ಇರಬೇಕು. ಒಬ್ಬರು ಎಷ್ಟು ಬೇಕಾದರೂ ಕಿರುಚಿತ್ರಗಳನ್ನು ಸಲ್ಲಿಸಬಹುದು. ಕಿರುಚಿತ್ರದಲ್ಲಿ ಯಾವುದೇ ಡೌನ್‌ಲೋಡ್ ಮಾಡಿದ ಸ್ಥಿರಚಿತ್ರ, ದೃಶ್ಯ, ಹಾಡು ಅಥವಾ ಹಿನ್ನೆಲೆ ಸಂಗೀತ ಉಪಯೋಗಿಸಿದ್ದಲ್ಲಿ, ಕೃತಿಚೌರ್ಯ ಅಥವಾ ಕೃತಿಸ್ವಾಮ್ಯ ಸಮಸ್ಯೆಗೆ ಒಳಪಡುವಂತಿದ್ದರೆ ಅಂತಹ ಕಿರುಚಿತ್ರಗಳನ್ನು ತಿರಸ್ಕರಿಸಲಾಗುವುದು.
ಕನ್ನಡೇತರ ಭಾಷಾ ಕಿರುಚಿತ್ರಗಳು ಕಡ್ಡಾಯವಾಗಿ ಸಬ್ ಟೈಟಲ್ ಹೊಂದಿರಬೇಕು. ಈ ಲಿಂಕ್ https://bit.ly/3QYKoKW ಕ್ಲಿಕ್ಕಿಸಿದಾಗ ಕಂಡುಬರುವ ಗೂಗಲ್ ಅರ್ಜಿ ನಮೂನೆಯಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಿ ಅಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ 100 ರೂ. ಶುಲ್ಕ ಪಾವತಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕಿರುಚಿತ್ರವನ್ನು ಎಂಪಿ4 ಮಾದರಿಯಲ್ಲಿ ಗೂಗಲ್ ಡ್ರೈವ್ ಅಥವಾ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿ ಅದರ ಲಿಂಕ್‌ಅನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕು. ಅತ್ಯುತ್ತಮ 5 ಕಿರುಚಿತ್ರಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಉಳಿದ ಉಳಿದ ಕಿರುಚಿತ್ರಗಳಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರ ನೀಡಲಾಗುವುದು. ಕಿರುಚಿತ್ರಗಳನ್ನು ಸಲ್ಲಿಸಲು ಸೆ.12 ಕಡೆಯ ದಿನ.


ಈ ಬಾರಿಯ ದಸರಾ ಉತ್ಸವದಲ್ಲಿ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ವಿಶ್ವದ ಅತ್ಯುತ್ತಮ ಸಿನಿಮಾಗಳನ್ನು ನೋಡಿ ಸಂಭ್ರಮಿ ಸುವ ಅವಕಾಶ ಮೈಸೂರಿಗರಿಗೆ ದೊರೆಯಲಿದೆ. ಚಲನಚಿತ್ರೋತ್ಸದಲ್ಲಿ ಒಂದು ದಿನವನ್ನು ಅಪ್ಪು ಚಿತ್ರಗಳ ಪ್ರದರ್ಶನಕೋಸ್ಕರ ಮೀಸಲಿಡ ಲಾಗಿದೆ. ಯಾವೆಲ್ಲ ಸಿನಿಮಾಗಳು ಪ್ರದರ್ಶನ ಕಾಣಲಿದೆ ಎಂಬ ಮಾಹಿತಿಯನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು. ಅದೇ ರೀತಿ ಚಲನಚಿತ್ರೋತ್ಸವಕ್ಕೆ ಅತಿಥಿಗಳಾಗಿ ಯಾವ ಸೆಲೆಬ್ರಿಟಿಗಳನ್ನು ಆಹ್ವಾನಿಸಬೇಕು ಎಂಬುದು ಇನ್ನಷ್ಟೇ ಅಂತಿಮಗೊಳ್ಳಬೇಕಾಗಿದೆ.

ಶೇಷು, ಉಪ ವಿಶೇಷಾಧಿಕಾರಿ, ದಸರಾ ಚಲನಚಿತ್ರೋತ್ಸವ ಉಪ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net