ಸುರಕ್ಷಿತ ಮಂಗಳೂರು ದಸರಾ ಆಚರಣೆ ನಿರ್ಧಾರ

kudroli new
Published on

ಮಂಗಳೂರು: ಪ್ರಸಿದ್ಧ ಮಂಗಳೂರು ದಸರಾ ಉತ್ಸವವನ್ನು ಕರೊನಾ ಎಂಬ ನೆಪವೊಡ್ಡಿ ನಿಲ್ಲಿಸುವ ಬದಲು ಸುರಕ್ಷತೆಯೊಂದಿಗೆ ಸಂಪ್ರದಾಯಬದ್ಧವಾಗಿ ನಡೆಸಬೇಕು ಎಂಬ ಭಕ್ತರ ಆಕಾಂಕ್ಷೆಯಂತೆ ಮುಂದುವರಿಯಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ವರ್ಗ ನಿರ್ಧರಿಸಿದೆ.

ಕುದ್ರೋಳಿ ಕ್ಷೇತ್ರದ ಸಭಾಭವನದಲ್ಲಿ ಭಾನುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಮಂಗಳೂರು ದಸರಾ ಕರೊನಾದಿಂದಾಗಿ ಹಿಂದಿನಂತೆ ವೈಭವದಿಂದ ನಡೆಸಲು ಸಾಧ್ಯವಿಲ್ಲ. ‘ನಮ್ಮ ದಸರಾ-ನಮ್ಮ ಸುರಕ್ಷೆ’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ಉತ್ಸವ ಆಚರಿಸಲಾಗುವುದು. ಸರ್ಕಾರದ ಮಾರ್ಗಸೂಚಿ ಪಾಲಿಸಲಾಗುವುದು. ಭಕ್ತರು ಭೇಟಿ ನೀಡುವ ಸಂದರ್ಭ ಮಾಸ್ಕ್ ಕಡ್ಡಾಯಗೊಳಿಸಿ, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್‌ಗೆ ಸೂಚನೆ ನೀಡಲಾಗುವುದು. ಇದಕ್ಕಾಗಿಯೇ ಪ್ರತಿನಿತ್ಯ 150ರಿಂದ 200 ಜನರ ಸ್ವಯಂಸೇವಕರ ತಂಡ ರಚಿಸಲಾಗುತ್ತದೆ ಎಂದರು.

ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಮಾತನಾಡಿ, ಮಂಗಳೂರು ದಸರಾ ಸಂದರ್ಭ ಪೂಜೆ, ಪುರಸ್ಕಾರ, ಪ್ರಸಾದ ವಿತರಣೆ, ಮಕ್ಕಳು, ಹಿರಿಯರ ಸುರಕ್ಷತೆ ಸೇರಿದಂತೆ ಪ್ರತಿಯೊಂದು ವಿಚಾರ ಗಮನದಲ್ಲಿಟ್ಟು ಕ್ಷೇತ್ರದ ಆಡಳಿತ ಮಂಡಳಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳಲಿದೆ. ಹೀಗಾಗಿ ಸರ್ವರೂ ಸಹಕರಿಸಬೇಕು. ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಅಭಿಲಾಷೆ, ಮಾರ್ಗದರ್ಶನದಂತೆ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಸರ್ಕಾರದ ಮಾರ್ಗಸೂಚಿ ಅನುಸರಿಸಿ, ಧಾರ್ಮಿಕ ನಂಬಿಕೆ, ಸಂಪ್ರದಾಯ ಪ್ರಕಾರ ನಡೆಯಲಿದೆ. ಆದರೆ ಈ ಬಾರಿ ಮಂಗಳೂರು ದಸರಾ ಮೆರವಣಿಗೆ ಇರುವುದಿಲ್ಲ ಎಂದರು.

ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ರವಿಶಂಕರ್ ಮಿಜಾರು ಮಾತನಾಡಿ, ಕರೊನಾ ಸಂಕಷ್ಟ ಮಧ್ಯೆಯೂ ಸಂಪ್ರದಾಯ ಪ್ರಕಾರ ದೇವರ ಸೇವೆ ನಡೆಸುವುದು ಅನಿವಾರ್ಯ. ದೇವಸ್ಥಾನಕ್ಕೆ ಬರುವ ಭಕ್ತರ ಸುರಕ್ಷತೆ ದೃಷ್ಟಿಯಿಂದ ಆಗಮನ-ನಿರ್ಗಮನ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದರು.

ಉದ್ಯಮಿ ಶೈಲೇಂದ್ರ ಸುವರ್ಣ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ರಮಾನಾಥ್ ಕಾರಂದೂರು, ರಾಧಾಕೃಷ್ಣ ಅಶೋಕನಗರ, ದೇವೇಂದ್ರ ಪೂಜಾರಿ, ಶೇಖರ್ ಪೂಜಾರಿ, ಲೀಲಾಕ್ಷ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net