ಭಾರ ಹೊರುವ ತಾಲೀಮು ಪ್ರಾರಂಭಿಸಿದ ದಸರಾ ಗಜಪಡೆ

dasara elephants started weight bearing training
Published on

ಮೈಸೂರು: ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆ ಯಶಸ್ವಿಗೊಳಿಸಲು ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಭಾನುವಾರದಿಂದ ಭಾರ ಹೊರುವ ತಾಲೀಮು ಪ್ರಾರಂಭಿಸಿದೆ.

ಮೊದಲ ದಿನ ಅಭಿಮನ್ಯು ಆನೆಯು 600 ಕೆ.ಜಿ. ಭಾರ ಹೊತ್ತು ಅರಮನೆ ಆವರಣದಿಂದ ಬನ್ನಿಮಂಪದ ಕಡೆಗೆ ಯಶಸ್ವಿಯಾಗಿ ಹೆಜ್ಜೆ ಹಾಕಿತು. 5 ಕಿ.ಮೀ. ದೂರವನ್ನು ಅಭಿಮನ್ಯು ಆನೆಯು ಕೇವಲ 1.15 ಗಂಟೆಯಲ್ಲಿ ತಲುಪಿ ಗಮನ ಸೆಳೆಯಿತು. ಸೋಮವಾರ ದಿಂದ ಧನಂಜಯ, ಗೋಪಿ ಹಾಗೂ ಮಹೇಂದ್ರ ಆನೆಗಳು ಸರದಿ ಪ್ರಕಾರ ಭಾರ ಹೊರುವ ತಾಲೀಮು ನಡೆಸಲಿದೆ.

ಭಾರ ಹೊರುವ ತಾಲೀಮಿನ ಹಿನ್ನೆಲೆಯಲ್ಲಿ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಭಾನುವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಅರ್ಚಕ ಎಸ್.ವಿ.ಪ್ರಹ್ಲಾದರಾವ್ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಲಕ್ಷ್ಮೀ, ವರಲಕ್ಷ್ಮೀ ಆನೆಗಳ ಪಾದ ತೊಳೆದು ಹರಿಶಿನ, ಕುಂಕುಮ, ಶ್ರೀಗಂದ ಹಚ್ಚಿ ಪೂಜೆ ಮಾಡಿದರು. ಬಳಿಕ ಗಾದಿ, ನಮ್ದಾ ಹಾಗೂ ತೊಟ್ಟಿಲಿಗೆ ಪೂಜೆ ಸಲ್ಲಿಸಿದರು. ಆ ನಂತರ ಅಭಿಮನ್ಯುವಿನ ಮೇಲೆ ಗಾದಿ, ನಮ್ದಾ ಕಟ್ಟಿ ಅದರ ಮೇಲೆ ಕಬ್ಬಿಣದ ತೊಟ್ಟಿಲನ್ನು ಕಟ್ಟಿ ತೊಟ್ಟಿಲಿನಲ್ಲಿ 320 ಕೆ.ಜಿ. ತೂಕದ ಮರಳಿ ಮೂಟೆ ಹೊರಿಸಲಾಯಿತು. ಮರಳಿ ಮೂಟೆ, ಗಾದಿ, ನಮ್ದಾ, ಕಬ್ಬಿಣದ ತೊಟ್ಟಿಲು ಸೇರಿ ಒಟ್ಟು 600 ಕೆ.ಜಿ. ತೂಕವನ್ನು ಹೊಂದಿದೆ.

ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಿ ನಡೆಯಬೇಕಾದರೆ ಭಾರ ಹೊರುವ ತಾಲೀಮಿನ ಜತೆಗೆ ಆನೆಗಳಿಗೆ ಜಂಬುಸವಾರಿ ಸಾಗುವ ದಾರಿಯ ಪರಿಚಯವನ್ನು ಸಹ ಮಾಡಿಕೊಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಭಿಮನ್ಯುವಿಗೆ ಭಾರ ಹೊರಿಸಿ ಕೋಡಿ ಸೋಮೇಶ್ವರ ದೇವಾಲಯ ಆವರಣದಿಂದ ಜಂಬೂಸವಾರಿ ದಿನದಂದು ಅಂಬಾರಿಯನ್ನು ಕಟ್ಟುವ ಜಾಗಕ್ಕೆ (ಪ್ರಮೋದಾದೇವಿ ಒಡೆಯರ್ ನಿವಾಸ ಬಳಿ) ಆನೆಗಳನ್ನು ಕರೆ ತರಲಾಯಿತು. ಆ ನಂತರ ಜಂಬೂಸವಾರಿ ದಿನ ಪುಷ್ಪಾರ್ಚನೆ ಮಾಡುವ ಜಾಗಕ್ಕೆ ಆನೆಗಳನ್ನು ಕರೆ ತಂದು ಅಲ್ಲಿಂದ ಬಲರಾಮ ದ್ವಾರದ ಮೂಲಕ (ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣ) ಸಯ್ಯಜಿರಾವ್ ರಸ್ತೆ ಮೂಲಕ ಬನ್ನಿಮಂಟಪದ ಕಡೆಗೆ ಆನೆಗಳು ಹೆಜ್ಜೆ ಹಾಕಿದವು. ಅಭಿಮನ್ಯುವಿಗೆ ಏಕಲವ್ಯ,ಭೀಮ, ಲಕ್ಷ್ಮೀ, ವರಲಕ್ಷ್ಮೀ, ರೋಹಿತ್, ಕಂಜನ್, ಧನಂಜಯ, ಗೋಪಿ ಆನೆಗಳು ಸಾಥ್ ನೀಡಿದವು.

ಬನ್ನಿಮಂಟಪ ತಲುಪಿದ ನಂತರ ಅಭಿಮನ್ಯುವಿಗೆ ಹೊರಿಸಲಾಗಿದ್ದ ಭಾರವನ್ನು ಇಳಿಸಲಾಯಿತು. ಸ್ವಲ್ಪ ಸಮಯ ಆನೆಗಳು ಬನ್ನಿಮಂಟಪದಲ್ಲಿ ವಿಶ್ರಾಂತಿ ಪಡೆದು ನಂತರ ಅರಮನೆ ಆವರಣಕ್ಕೆ ಹಿಂತಿರುಗಿತು. ಈ ಸಂದರ್ಭ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಅರಮನೆ ಭದ್ರತಾ ವಿಭಾಗ ಎಸಿಪಿ ಚಂದ್ರಶೇಖರ್, ಆರ್‌ಎಫ್‌ಒ ಸಂತೋಷ್ ಹೂಗಾರ್, ಪಶುವೈದ್ಯ ಡಾ.ಮುಜೀಬ್, ಸಹಾಯಕರಾದ ರಂಗರಾಜು, ಅಕ್ರಂ, ಮೈಸೂರು ವಲಯದ ಅರಣ್ಯ ಇಲಾಖೆಯ ಕಚೇರಿ ಅಧೀಕ್ಷಕ ಸುದೀಪ್ ಹಾಗೂ ಇತರರು ಇದ್ದರು.

ಮಾರ್ಗದ ಉದ್ದಕ್ಕೂ ನೂರಾರು ಸಂಖ್ಯೆಯಲ್ಲಿ ಜನರು ಈ ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಂಡರು. ಶಾಲಾ-ಕಾಲೇಜುಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಮಕ್ಕಳೊಂದಿಗೆ ಆನೆಗಳನ್ನು ಆಗಮಿಸಿದ್ದರು. ಮಾರ್ಗದ ಉದ್ದಕ್ಕೂ ವರ್ತಕರು ಹಾಗೂ ಸಾರ್ವಜನಿಕರು ಆನೆಗಳಿಗೆ ಹೂವು, ಹಣ್ಣು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net