

ಮೈಸೂರು: ಸರಳ, ಸಂಪ್ರದಾಯವಾಗಿದ್ದರೂ ಯಶಸ್ವಿಯಾಗಿ ದಸರಾ ಜಂಬೂಸವಾರಿ ಪೂರ್ಣಗೊಳಿಸಿದ ಕ್ಯಾಪ್ಟನ್ ‘ಅಭಿಮನ್ಯು’ ನೇತೃತ್ವದ ಗಜಪಡೆ ಮಂಗಳವಾರ ರಿಲ್ಯಾಕ್ಸ್ ಮೂಡ್ನಲ್ಲಿದ್ದವು. ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನ ಬಳಿ ಯಾವುದೇ ಗಡಿಬಿಡಿ, ಗದ್ದಲ, ಗೊಂದಲ ಇಲ್ಲದೆ ವಿಶ್ರಾಂತಿಯಲ್ಲಿದ್ದ ಆನೆಗಳು ತಮ್ಮ ಮಾವುತ, ಕಾವಾಡಿಗಳಿಂದ ದೊರೆಯುವ ಆರೈಕೆಯಲ್ಲಿ ಮಗ್ನವಾಗಿದ್ದವು. ದಸರಾಕ್ಕಾಗಿ ಮೈಮೇಲೆ ಮೂಡಿದ್ದ ಬಣ್ಣ ಬಣ್ಣದ ಚಿತ್ತಾರದಲ್ಲಿ ಕಂಗೊಳಿಸುತ್ತಿದ್ದ ಗಜಪಡೆ ನೋಡಲು ಬಂದ ಗಣ್ಯರು, ಅಧಿಕಾರಿಗಳು ಅವುಗಳ ಮುಂದೆ ನಿಂತು ಸೆಲ್ಪಿ, ಫೋಟೋಗೆ ಮುಗಿಬಿದ್ದರು.
ದಸರೆಯಲ್ಲಿ ಭಾಗವಹಿಸಿದ್ದ ಅಭಿಮನ್ಯು, ವಿಕ್ರಮ, ಗೋಪಿ, ವಿಜಯಾ, ಕಾವೇರಿ ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕಬ್ಬು, ಹಣ್ಣು ಬೆಲ್ಲ ನೀಡಿ ಉಪಚರಿಸಿದರು. ಯಶಸ್ವಿಯಾಗಿ ಜಂಬೂಸವಾರಿ ಮುಗಿಸಲು ಸಹಕಾರ ನೀಡಿದ ಗಜಪಡೆಯ ಮಾವುತ, ಕಾವಾಡಿಗಳಿಗೆ 10 ಸಾವಿರ ರೂ. ಗೌರವಧನ ನೀಡಿ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಸೋಮಶೇಖರ್, ಕಳೆದ ವರ್ಷ ಮಾವುತ, ಕಾವಾಡಿಗಳಿಗೆ 7 ಸಾವಿರ ರೂ. ನೀಡಲಾಗಿತ್ತು. ಈ ಬಾರಿ 10 ಸಾವಿರ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇವರ ಕೆಲ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಇಂದು ಸ್ವಸ್ಥಾನಕ್ಕೆ ಪಯಣ: ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆ ಅ.28ರಂದು ಸ್ವಸ್ಥಾನಗಳಿಗೆ ಮರಳಲಿದೆ. ಚಾಮುಂಡಿಬೆಟ್ಟದ ಪುರೋಹಿತರು ಬೆಳಗ್ಗೆ 10.30ಕ್ಕೆ ಪೂಜೆ ಸಲ್ಲಿಸಿದ ಬಳಿ ಗಜಪಡೆಗಳನ್ನು ಲಾರಿಗಳಲ್ಲಿ ಕಾಡಿಗೆ ಕಳುಹಿಸಿ ಕೊಡಲಾಗುತ್ತದೆ.
ದಸರಾ ಉತ್ಸವಕ್ಕೆ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿದೆ. ಮೂಡಾ ಘೋಷಿಸಿದ 5 ಕೋಟಿ ರೂ. ಪಡೆದುಕೊಂಡಿಲ್ಲ. ಸರ್ಕಾರ ನೀಡಿದ ಅನುದಾನದಲ್ಲಿ ಎಷ್ಟು ಖರ್ಚಾಗಿದೆ ಎಂಬ ಕುರಿತು ಲೆಕ್ಕಪರಿಶೋಧನೆ ನಡೆಸಿ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದ್ದು, ಕನ್ನಡ ರಾಜ್ಯೋತ್ಸವ ಆಚರಣೆಗೆ ಮೈಸೂರಿಗೆ ಆಗಮಿಸುವ ಸಂದರ್ಭದಲ್ಲೇ ದಸರಾ ಲೆಕ್ಕ ನೀಡಲಾಗುವುದು. | ಎಸ್.ಟಿ. ಸೋಮಶೇಖರ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ
ಮರುದಿನವೇ ಕಾರ್ಯಾಚರಣೆ
750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ನಡೆದು ದಣಿದಿದ್ದರೂ ಅಭಿಮನ್ಯು ವಿಶ್ರಾಂತಿ ಪಡೆಯದೆ ಮಂಗಳವಾರ ಮುಂಜಾನೆಯೇ ನಗರದ ಮೃಗಾಲಯದಲ್ಲಿ ಇದ್ದ ತಾಯಿ, ಮರಿ ಆನೆಯನ್ನು ಕೇರ್ಗಳ್ಳಿ ಬಳಿ ಇರುವ ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ಸಾಗಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ. ಅಭಿಮನ್ಯುವಿಗೆ ಗೋಪಿ ಆನೆ ಸಾಥ್ ನೀಡಿತ್ತು.
2 ದಿನ ಪ್ರವೇಶವಿಲ್ಲ
ಚಾಮುಂಡೇಶ್ವರಿ ರಥೋತ್ಸವ ಅಂಗವಾಗಿ ಅ.28ರಂದು ಸಂಜೆ 6ರಿಂದ ಅ.29ರಂದು ಮಧ್ಯಾಹ್ನ 1 ಗಂಟೆವರೆಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಕೋವಿಡ್ ಪರೀಕ್ಷೆ ಕಡ್ಡಾಯ: ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಣೆಗೆ ಇನ್ಮುಂದೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ.
ರಥ ಎಳೆದು ಹರಕೆ ತೀರಿಸಿದ ರೋಹಿಣಿ
ಮೈಸೂರು ಡಿಸಿ ರೋಹಿಣಿ ಸಿಂಧೂರಿ ಚಾಮುಂಡೇಶ್ವರಿ ರಥ ಎಳೆದು ಹರಕೆ ತೀರಿಸಿದ್ದಾರೆ. ದಸರಾಕ್ಕೂ ಮುನ್ನ ಡಿಸಿ ಆಗಿ ರೋಹಿಣಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಈ ಕ್ರಮ ಪ್ರಶ್ನಿಸಿ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಸಿಎಟಿ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ‘ಸಿಎಟಿ ನನ್ನ ವರ್ಗಾ ವಣೆಯನ್ನು ವಜಾ ಮಾಡಲಿ ಅಥವಾ ಪುರಸ್ಕರಿಸಲಿ. ನನ್ನ ಅಧಿಕಾರಾವಧಿಯಲ್ಲೇ ದಸರಾ ಮಹೋತ್ಸವ ಸುಸೂತ್ರವಾಗಿ ನೆರವೇರಲಿ’ ಎಂದು ರೋಹಿಣಿ ದೇವಿಗೆ ಹರಕೆ ಹೊತ್ತುಕೊಂಡಿದ್ದರು ಎನ್ನಲಾಗಿದೆ.