

ಮೈಸೂರು: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಯ ಎರಡನೇ ಸುತ್ತಿನ ತಾಲೀಮು ಮಂಗಳವಾರದಿಂದ ಪ್ರಾರಂಭಗೊಂಡಿದ್ದು, ಅಂಬಾರಿ ಆನೆ ಅಭಿಮನ್ಯು 510 ಕೆ.ಜಿ. ಮರಳಿನ ಮೂಟೆ ಸೇರಿದಂತೆ ಒಟ್ಟು 750 ಕೆ.ಜಿ. ಭಾರವನ್ನು ಹೊತ್ತು ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೆ (5 ಕಿ.ಮೀ) ಯಶಸ್ವಿಯಾಗಿ ಹೆಜ್ಜೆ ಹಾಕಿದ.
ಆನೆಗಳಿಗೆ ಆ.18 ರಿಂದ ಭಾರ ಹೊರಿಸುವ ತಾಲೀಮು ಪ್ರಾರಂಭಗೊಂಡಿತು. ಮೊದಲ ಸುತ್ತಿನಲ್ಲಿ ಬೆಳಗ್ಗಿನ ಜಾವ ತಾಲೀಮು ನಡೆಸ ಲಾಯಿತು. ಇದೀಗ ಎರಡನೇ ಸುತ್ತಿನಲ್ಲಿ ಸಂಜೆ ವೇಳೆ ತಾಲೀಮು ನಡೆಸಲಾಗುತ್ತದೆ. ಪ್ರತಿ ವರ್ಷ ಮಧ್ಯಾಹ್ನ ಅಥವಾ ಸಂಜೆ ಜಂಬೂ ಸವಾರಿ ಮೆರವಣಿಗೆ ನಡೆಯುತ್ತದೆ. ಈ ಬಾರಿ ಸಂಜೆ ಮೆರವಣಿಗೆ ನಡೆಯಲಿದ್ದು, ಸಂಜೆ ಬೆಳಗುವ ವಿದ್ಯುತ್ ದೀಪಗಳು ಹಾಗೂ ವಿದ್ಯುತ್ ದೀಪಾಲಂಕಾರಕ್ಕೆ ಆನೆಗಳು ಹೊಂದಿಕೊಳ್ಳಲಿ ಎಂಬ ಕಾರಣಕ್ಕೆ ಸಂಜೆ ವೇಳೆ ತಾಲೀಮು ನಡೆಸಲಾಗುತ್ತಿದೆ.
‘ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಆನೆ ಅಭಿಮನ್ಯು 750 ಕೆ.ಜಿ. ಚಿನ್ನದ ಅಂಬಾರಿ, ನಮ್ದಾ, ಗಾದಿ ಸೇರಿದಂತೆ ಒಟ್ಟು 1,000 ಕೆ.ಜಿ. ಭಾರ ಹೊತ್ತು ಸಾಗಬೇಕು. ಇಷ್ಟೊಂದು ಭಾರ ಹೊರಲು ಅಭಿಮನ್ಯು ಸೇರಿದಂತೆ 5 ಆನೆಗಳನ್ನು ತಯಾರಿ ಮಾಡಬೇ ಕಾಗಿದೆ. ಹಂತ ಹಂತವಾಗಿ ಆನೆಗಳಿಗೆ ಹೊರಿಸುವ ಭಾರದ ಪ್ರಮಾಣವನ್ನು ಏರಿಕೆ ಮಾಡಿ ಪ್ರತಿ ದಿನ 1,000 ಕೆ.ಜಿ. ಭಾರ ಹೊರುವ ತಾಲೀಮು ನಡೆಸಲಾಗುವುದು’ ಎಂದು ಡಿಸಿಎಫ್ ಕರಿಕಾಳನ್ ‘ವಿಜಯವಾಣಿ’ಗೆ ತಿಳಿಸಿದರು.