ದಸರಾ ಉದ್ಘಾಟನೆಗೆ ಎಚ್‌ಡಿಡಿ ಹೆಸರು ಕೈ ಬಿಟ್ಟಿದ್ದೇಕೆ: ಸಚಿವರೇ ಜಿಲ್ಲೆಯ ಜನರಿಗೆ ಉತ್ತರ ಕೊಡಲಿ ಎಂದ ಶಾಸಕ ರವೀಂದ್ರ ಶ್ರೀಕಂಠಯ್ಯ

SRP_26-01..jpg
Published on

ಶ್ರೀರಂಗಪಟ್ಟಣ: ಪಾರಂಪರಿಕ ದಸರಾ ಉದ್ಘಾಟನೆಗೆ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸಲು ಒಪ್ಪಿ ಕೊನೆಗೆ ಅವರ ಹೆಸರನ್ನೇಕೆ ಕೈ ಬಿಟ್ಟಿದ್ದಾರೆನ್ನುವ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಕೆ.ಸಿ.ನಾರಾಯಣಗೌಡ ಜಿಲ್ಲೆಯ ಜನರಿಗೆ ಉತ್ತರಿಸಬೇಕು ಎಂದು ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ನಿರ್ಮಿಸುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಬೃಹತ್ ವೇದಿಕೆ ಹಾಗೂ ಕಿರಂಗೂರು ವೃತ್ತದ ಬನ್ನಿಮಂಟಪವನ್ನು ಸೋಮವಾರ ಪರಿಶೀಲಿಸಿ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾದಿಯಾಗಿ ಜಿಲ್ಲಾಡಳಿತ, ದಸರಾ ಸಮಿತಿ ಸರ್ವ ಸದಸ್ಯರು ಹಾಗೂ ಹಲವು ಮಂತ್ರಿಗಳು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಆಹ್ವಾನಿಸಲು ಒಪ್ಪಿ, ಅವರ ಆರೋಗ್ಯ ಸ್ಥಿತಿಯನ್ನು ಸಹ ವಿಚಾರಿಸಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಎಚ್.ಡಿ.ದೇವೇಗೌಡರ ಬದಲಿಗೆ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿಗೆ ಆಹ್ವಾನ ನೀಡಿದ್ದಾರೆ. ಇದು ಯಾಕೆ ಹೀಗಾಯಿತು ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಎಸ್.ಅಶ್ವಥಿ ಮಾತನಾಡಿ, ವಿಶ್ವವಿಖ್ಯಾತ ಶ್ರೀರಂಗಪಟ್ಟಣ ಪಾರಂಪರಿಕ ದಸರಾವನ್ನು ಅದ್ದೂರಿಯಾಗಿ ಆಚರಿಸಲು ಪ್ರಥಮ ಹಂತವಾಗಿ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸರ್ವ ಕಾರ್ಯಕ್ರಮಗಳ ರೂಪುರೇಷೆ ಸಿದ್ಧವಾಗಿದೆ. ದಸರೆ ಆಚರಣೆಯಲ್ಲಿ ಯಾವುದೇ ಲೋಪ ಹಾಗೂ ಕುಂದುಕೊರತೆ ಉಂಟಾಗದಂತೆ ಕ್ರಮ ವಹಿಸಲಾಗಿದೆ. ಬನ್ನಿಮಂಟಪದಲ್ಲಿ ನಾಡದೇವತೆ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಲಾಗುತ್ತಿದ್ದು, ಗಣ್ಯರು ದೇವಿಗೆ ಪೂಜೆ ನೆರವೇರಿಸಿ ಗಜಪಡೆಗೆ ಚಾಲನೆ ನೀಡಲು ಎತ್ತರದ ಬೃಹತ್ ವೇದಿಕೆ, ಸಾರ್ವಜನಿಕರು ಕುಳಿತು ನೋಡಲು ಗ್ಯಾಲರಿ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಮಳೆ ನಿಯಂತ್ರಿತ ಪೆಂಡಾಲ್ ಹಾಕಲಾಗುತ್ತಿದೆ. 10 ಸಾವಿರ ಜನರು ಕುಳಿತುಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿಸಿಎಫ್ ವೃತ್ರನ್, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ, ಡಿವೈಎಸ್ಪಿ ಸಂದೇಶ್‌ಕುಮಾರ್, ಪುರಸಭಾ ಮುಖ್ಯಾಧಿಕಾರಿ ರಾಣಿ, ಪುರಸಭಾ ಉಪಾಧ್ಯಕ್ಷ ಗಂಜಾಂ ಕೃಷ್ಣಪ್ಪ , ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net