ದಸರೆ ಸಂದರ್ಭ ಹೆದ್ದಾರಿ ಬಂದ್ : ಬಡಗಲಪುರ ನಾಗೇಂದ್ರ ಎಚ್ಚರಿಕೆ

Badagalapura Nagendra
Published on

ಮೈಸೂರು: ಕಬ್ಬಿಗೆ ನ್ಯಾಯಯುತ ದರ ನಿಗದಿ ಮಾಡಬೇಕು, ಕೆಆರ್‌ಎಸ್ ಸುತ್ತ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಲು ಸರ್ಕಾರ ತಕ್ಷಣ ಕ್ರಮ ವಹಿಸಬೇಕು ಹಾಗೂ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಇಲ್ಲವಾದಲ್ಲಿ ದಸರೆ ಸಂದರ್ಭ ನಗರದ ನಾಲ್ಕು ದಿಕ್ಕುಗಳಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.

ಸರ್ಕಾರ ರೈತರ ಬೇಡಿಕೆಗಳನ್ನು ಕಡೆಗಣಿಸಿದರೆ ಹಸು, ಎಮ್ಮೆ, ಕುರಿ, ಕೋಳಿ, ಕೃಷಿ ಯಂತ್ರೋಪಕರಣಗಳೊಂದಿಗೆ ನಗರದ ನಾಲ್ಕು ದಿಕ್ಕುಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ನಮಗೆ ಈಗ ಬೇಕಾಗಿರುವುದು ಅದ್ಧೂರಿಯ ದಸರಾ ಅಲ್ಲ. ಭಾರಿ ಮಳೆ, ಪ್ರವಾಹದಿಂದ ಜನರು ತತ್ತರಿಸಿ ಹೋಗಿರುವ ಜನರಿಗೆ ಸ್ಪಂದಿಸುವ ಕಾರ್ಯ ಆಗಬೇಕು. ಹಾಗಾಗಿ ಈ ಬಾರಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸಿ ಆ ಹಣವನ್ನು ಜಿಲ್ಲೆಯ ರಸ್ತೆಯ ಅಭಿವೃದ್ಧಿಗೆ ವಿನಿಯೋಗಿಸಲಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ದಶಪಥ ನಿರ್ಮಾಣದ ಹೆಸರಿನಲ್ಲಿ ರೈತರ ಭೂಮಿಯನ್ನು ಕಸಿದ ಸರ್ಕಾರ ಇದೀಗ ಬುಲೆಟ್ ಟ್ರೈನ್ ನಿರ್ಮಾಣಕ್ಕೆ ಲಕ್ಷಾಂತರ ಎಕರೆ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗುತ್ತಿದೆ. ದಶಪಥ ರಸ್ತೆಯಲ್ಲಿ ಜನಸಾಮಾನ್ಯರು ದುಬಾರಿ ಟೋಲ್ ನೀಡಿ ಸಂಚರಿ ಸಲು ಸಾಧ್ಯವಿಲ್ಲ. ದಶಪಥ, ಬುಲೆಟ್ ಟ್ರೈನ್ ಏನಿದ್ದರೂ ಶ್ರೀಮಂತರಿಗೆ, ಉದ್ಯಮಿಗಳಿಗೆ ಸೇರಿದ್ದು. ಅವರ ಅನುಕೂಲಕೋಸ್ಕರ ರೈತಾಪಿ ವರ್ಗದವರ ಭೂಮಿ ಕಸಿಯಬೇಡಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net