

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಶುಕ್ರವಾರ ಮತ್ತು ಶನಿವಾರ ನವರಾತ್ರಿ, ದಸರಾ ಸಂಭ್ರಮ ಮನೆ ಮಾಡಿತ್ತು. ಒಂಭತ್ತು ದಿನಗಳವರೆಗೆ ನಡೆದ ದೇವಿ ಆರಾಧನೆ ನಂತರ ಶನಿವಾರ ಉತ್ಸವದ ಕೊನೇ ದಿನ ಎಲ್ಲೆಡೆ ಅದ್ಧೂರಿ ಆಚರಣೆ ಕಂಡು ಬಂತು.
ಒಂಭತ್ತು ದಿನಗಳ ಕಾಲ ಮನೆಯಲ್ಲಿ ಶ್ರೀದೇವಿ ಪ್ರತಿಷ್ಠಾಪನೆ ಮಾಡಿ ಆರಾಧನೆ ಮಾಡಿದ ಭಕ್ತರು ಕೊನೇ ದಿನ ವಿಶೇಷ ಪೂಜೆ ನೆರವೇರಿಸಿ ಘಟ್ಟವನ್ನು ನೀರಿನಲ್ಲಿ ವಿಸರ್ಜನೆ ಮಾಡಿದರು. ಇಲ್ಲಿಯ ಉಣಕಲ್ಲ ಕೆರೆ ಹಾಗೂ ಹೊಸೂರ, ಇಂದಿರಾ ಗಾಜಿನ ಮನೆ ಆವರಣದ ಭಾವಿಯಲ್ಲಿ ಘಟ್ಟ ವಿಸರ್ಜನೆ ನಡೆಯಿತು.
ಹುಬ್ಬಳ್ಳಿಯ ದಾಜಿಬಾನಪೇಟ ಶ್ರೀ ತುಳಜಾಭವಾನಿ ದೇವಸ್ಥಾನ, ಕನ್ನಿಕಾಪರಮೇಶ್ವರಿ ದೇವಸ್ಥಾನ, ಬನ್ನಿ ಮಹಾಂಕಾಳಿ ದೇವಸ್ಥಾನ ಸೇರಿ ವಿವಿಧೆಡೆ ದೇವಿ ಉತ್ಸವ ಸಂಭ್ರಮ, ಸಡಗರದಿಂದ ನಡೆಯಿತು.
ತುಳಜಾಭವಾನಿ ದೇವಸ್ಥಾನದಲ್ಲಿ ಶ್ರೀದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಬೆಳಗ್ಗೆಯಿಂದ ಸರದಿಯಲ್ಲಿ ನಿಂತು ದೇವಿ ದರ್ಶನ ಪಡೆದರು.
ದಸರಾ ನಿಮಿತ್ತ ನಗರದ ಎಲ್ಲ ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜೆಗಳು ನಡೆದವು. ಹೂ, ಹಣ್ಣುಗಳಿಂದ ವೈವಿದ್ಯಮಯ ಅಲಂಕಾರ ಮಾಡಲಾಗಿತ್ತು.
ದಸರಾ ಹಿನ್ನೆಲೆಯಲ್ಲಿ ಜನರು ಬೆಳಗ್ಗೆ ಸಮೀಪದ ಹೊಲಗಳಿಗೆ ಹೋಗಿ ಬನ್ನಿ ಗಿಡ ಪೂಜೆ ಮಾಡಿ ನಂತರ ಬನ್ನಿ ಪತ್ರಿಯನ್ನು ತೆಗೆದುಕೊಂಡು ಬಂದರು. ಮನೆಯಲ್ಲಿ ಆಯುಧ ಪೂಜೆ, ವಾಹನಗಳ ಪೂಜೆ ಅದ್ದೂರಿಯಾಗಿ ನಡೆಯಿತು.
ಮನೆಯಲ್ಲಿ ಮಕ್ಕಳು, ಮಹಿಳೆಯರು, ಹಿರಿಯರು ಎಲ್ಲ ಸೇರಿ ಶ್ರೀದೇವಿ ಆರಾಧನೆ ಮಾಡಿ ಕರಿಕಡಬು, ಹೋಳಿಗೆ, ಭಜ್ಜಿ, ಸಂಡಿಗೆ ಹೀಗೆ ತರಹೇವಾರಿ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿದರು. ನಂತರ ಸಹ ಭೋಜನ ಸವಿದರು.
ಎಲ್ಲ ದೇವಸ್ಥಾನಗಳಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆಗೆ ಪರಸ್ಪರ ಬನ್ನಿ ಮುಡಿಯುವ ಕಾರ್ಯಕ್ರಮ ನಡೆದವು. ಪರಸ್ಪರ ಸ್ನೇಹ, ಬಾಂಧವ್ಯ ಬೆಸೆಯುವ ಈ ಹಬ್ಬದ ಸಂದರ್ಭದಲ್ಲಿ ಬನ್ನಿ ಪತ್ರಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಬಾಂಧವ್ಯವನ್ನು ಗಟ್ಟಿಗೊಳಿಸಿಕೊಂಡು ದಸರಾ ಹಬ್ಬದ ಮೆರಗು ಹೆಚ್ಚಿಸಿದರು.