

ಸದೇಶ್ ಕಾರ್ಮಾಡ್ ಮೈಸೂರು
ಬರಗಾಲ ಹಿನ್ನೆಲೆಯಲ್ಲಿ ಈ ಬಾರಿ ನಾಡಹಬ್ಬ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಸರ್ಕಾರ ತೀರ್ಮಾನ ಕೈಗೊಂಡಿತ್ತು. ಆದರೆ, ಈ ಘೋಷಣೆ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ಬಾರಿ ಸರಳವೂ ಅಲ್ಲದ, ಅದ್ದೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು, ಸರ್ಕಾರ ನಿರ್ಧಾರ ಪ್ರವಾಸೋದ್ಯಮ ಕ್ಷೇತ್ರವನ್ನು ಅವಲಂಬಿಸಿ ರುವವರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ದಸರಾ ಸಂದರ್ಭದಲ್ಲಿಯೇ ಜಿಲ್ಲೆಯಲ್ಲಿ ಅತಿ ಹೆಚ್ಚಿನ ವಹಿವಾಟು ನಡೆಯುತ್ತದೆ. ದೇಶ-ವಿದೇಶದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾ ಸಿಗರು ಆಗಮಿಸುತ್ತಾರೆ. ದಸರಾವನ್ನು ಸರಳವಾಗಿ ಆಚರಿಸಿದರೆ ಪ್ರವಾಸಿಗರ ಸಂಖ್ಯೆ ಸಹಜವಾಗಿಯೇ ಕುಸಿತ ಕಾಣುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಉದ್ಯಮಗಳು, ವರ್ತಕರು ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಆದರೆ ಕೋವಿಡ್ ಆತಂಕ ದೂರವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದ ನಂತರ ಕಳೆದ ಬಾರಿ ಅದ್ದೂರಿಯಾಗಿ ದಸರಾ ಉತ್ಸವ ನಡೆಸಲಾಯಿತು. ಕಳೆದ ಬಾರಿ ಜಿಲ್ಲೆಗೆ ಪ್ರವಾಸಿಗರ ಪ್ರವಾಹವೇ ಹರಿದು ಬಂದಿತ್ತು. ಆದರೆ, ಈ ಬಾರಿ ವರುಣನ ಅವಕೃಪೆಯಿಂದ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
‘ಸಾಂಪ್ರದಾಯಿಕ ದಸರಾ’ ಘೋಷಣೆಯಾದರೂ ಅದ್ದೂರಿ ದಸರಾ ಉತ್ಸವ ಸಂದರ್ಭದಲ್ಲಿ ನಡೆಸುವ ಎಲ್ಲ ರೀತಿಯ ಚಟುವಟಿಕೆ ಗಳು ಈ ಬಾರಿಯೂ ನಡೆಯುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸಲಿದ್ದಾರೆ.
ಸರಳ ದಸರಾ ಘೋಷಣೆ ಮಾಡಿದರೆ ಪ್ರವಾಸಿಗರ ಸಂಖ್ಯೆ ಸಹಜವಾಗಿಯೇ ಇಳಿಮುಖವಾಗುತ್ತದೆ. ಆದರೆ, ಅದ್ದೂರಿ, ಸರಳ ಅಥವಾ ಸಾಂಪ್ರದಾಯಿಕ ಸೇರಿದಂತೆ ಯಾವುದೇ ರೀತಿಯ ದಸರಾ ನಡೆಸಿದರೂ ಸ್ಥಳೀಯರ ಸಂಖ್ಯೆಯಲ್ಲಿ ಮಾತ್ರ ಯಾವ ವರ್ಷವೂ ಇಳಿಮುಖವಾಗಿಲ್ಲ ಎಂಬುದು ವಿಶೇಷ. ಇದಕ್ಕೆ ಅಂಕಿ ಅಂಶ ಗಳೇ ಸಾಕ್ಷಿಯಾಗಿದೆ.
2015ರಲ್ಲಿ ಸರಳ ದಸರಾ ಆಚರಿಸಿದ ಸಂದರ್ಭ ಮೈಸೂರು ಮೃಗಾಲಯಕ್ಕೆ 1.25 ಲಕ್ಷ ಜನರು ಭೇಟಿ ನೀಡಿದ್ದರು. ಮರುವರ್ಷ ಅಂದರೆ 2016ರಲ್ಲಿ ಅದ್ದೂರಿಯಾಗಿ ದಸರಾ ಆಚರಿಸಿದ ಸಂದರ್ಭ ಮೃಗಾಲಯಕ್ಕೆ 1.24 ಲಕ್ಷ ಜನರು ಭೇಟಿ ನೀಡಿದ್ದರು. ಕಳೆದ ಬಾರಿ ಅದ್ದೂರಿ ದಸರಾ ನಡೆದ ಸಂದರ್ಭ 1.55 ಲಕ್ಷ ಜನರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈ ಬಾರಿ ಸಾಂಪ್ರದಾಯಿಕ ದಸರಾ ಆಚರಣೆಯಿಂದ ಒಂದುವೇಳೆ ಪ್ರವಾಸಿಗರ ಸಂಖ್ಯೆ ಕ್ಷೀಣವಾಗಿ ಪ್ರವಾಸಿಗರನ್ನು ನೆಚ್ಚಿಕೊಂಡಿರುವ ಉದ್ಯಮಗಳು ನಿರೀಕ್ಷಿತ ಪ್ರಮಾಣದ ಆದಾಯ ಗಳಿಸಲು ಸಾಧ್ಯವಾಗದೆ ಇದ್ದರೂ ಸ್ಥಳೀಯ ಜನರಿಂದ ಹೆಚ್ಚಿನ ವಹಿವಾಟು ಎಂದಿನಂತೆ ನಡೆಯಲಿದೆ ಎಂಬುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ 2020 ಹಾಗೂ 2021ನೇ ದಸರಾ ಉತ್ಸವ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ಆ ಎರಡು ವರ್ಷಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ದಸರಾದಲ್ಲಿ ಜನಾಕರ್ಷಿಸುವ ಕಾರ್ಯಕ್ರಮಗಳು ಸಹ ಇರಲಿಲ್ಲ. ಹಾಗಾಗಿ ನಗರಕ್ಕೆ ಹಾಗೂ ನಗರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರು ಹಾಗೂ ಸ್ಥಳೀಯರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಕುಸಿತ ಕಂಡಿತ್ತು. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಮೈಸೂರು ದಸರಾ ವೈಭವವನ್ನು ಕಣ್ತುಂಬಿಕೊಳ್ಳುವ ಸಾಧ್ಯತೆ ಇದೆ.
ಮೃಗಾಲಯಕ್ಕೆ ಭೇಟಿ ನೀಡಿದವರ ವಿವರ
ವರ್ಷ ಸಂಖ್ಯೆ
2015 1.25 ಲಕ್ಷ
2016 1.24 ಲಕ್ಷ
2017 1.23 ಲಕ್ಷ
2018 1.53 ಲಕ್ಷ
2019 1.65 ಲಕ್ಷ
2020 20,217
2021 75,000
2022 1.55 ಲಕ್ಷ
ಪ್ರತಿ ಶನಿವಾರ, ಭಾನುವಾರ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಶನಿವಾರ, ಭಾನುವಾರ ಬಹುತೇಕ ಎಲ್ಲ ಹೋಟೆಲ್‌ಗಳು ಭರ್ತಿಯಾಗಿರುತ್ತವೆ. ಆದರೆ ಕಾವೇರಿ ವಿವಾದ ಹಿನ್ನೆಲೆಯಲ್ಲಿ ಈ ಶನಿವಾರ, ಭಾನುವಾರ (ಸೆ.23, 24) ಜಿಲ್ಲೆಯ ಹೋಟೆಲ್‌ಗಳು ಶೇ.50ರಷ್ಟು ಮಾತ್ರ ಭರ್ತಿಯಾಗಿವೆ.
ಸರಳ ದಸರಾ ಆಚರಿಸಿದರೆ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತದೆ. ಹಾಗಾಗಿ ಸರ್ಕಾರ ಸಾಂಪ್ರದಾಯಿಕ ದಸರಾ ಆಚರಿಸಲು ಮುಂದಾಗಿರುವುದು ಸ್ವಾಗತಾರ್ಹ. ದಸರಾ ಉತ್ಸವದಲ್ಲಿ ಜನಾಕರ್ಷಿಸುವ ಎಲ್ಲ ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಭೇಟಿ ನೀಡುವ ನಿರೀಕ್ಷೆಯನ್ನು ಹೊಂದಿದ್ದೇವೆ.
ನಾರಾಯಣಗೌಡ
ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ