

ಮೈಸೂರು : ದಸರಾ ಪುಸ್ತಕ ಮೇಳ ಅ.15ರಿಂದ 22ರವರೆಗೆ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಓವೆಲ್ ಮೈದಾನದಲ್ಲಿ ನಡೆಯಲಿದೆ.
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಇದು ಜರುಗಲಿದೆ. ಮೊದಲ ಬಾರಿಗೆ ಓವೆಲ್ ಮೈದಾನದಲ್ಲಿ ಪುಸ್ತಕ ಜಾತ್ರೆ ಆಯೋಜಿಸಲಾಗಿದೆ. ಈ ಮೊದಲು ಅರಮನೆ ಬಳಿ ಕಾಡಾ ಕಚೇರಿ ಆವರಣದಲ್ಲಿ ಈ ಮೇಳವನ್ನು ಆಯೋಜಿಸಲಾಗುತ್ತಿತ್ತು.
ಮಹಾರಾಜ ಕಾಲೇಜು ಮೈದಾನದಲ್ಲಿ ‘ಯುವ ದಸರಾ’, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ‘ಆಹಾರ ಮೇಳ’ ನಡೆಯುತ್ತಿದ್ದು, ಎರಡು ಜಾಗದ ಮಧ್ಯ ಭಾಗದಲ್ಲಿರುವ ಓವೆಲ್ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳ ಈ ಸಲ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಎರಡು ಕಡೆಗೆ ಬರುವ ಜನರು ಪುಸ್ತಕ ಮೇಳಕ್ಕೂ ಭೇಟಿ ನೀಡಲು ಅನುವು ಆಗಲಿದೆ. ಇದರಿಂದ ಪುಸ್ತಕಗಳ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಆಗಬಹುದು ಎಂಬ ಆಶಾಭಾವ ಮೂಡಿದೆ.
ಮೇಳದಲ್ಲಿ 60 ಮಳಿಗೆಗಳು ಇರಲಿವೆ. ಇವುಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುತ್ತಿದೆ. ಕನ್ನಡ ಪ್ರಕಾಶಕರು, ಮಾರಾಟಗಾರರು ಭಾಗವಹಿಸಬಹುದಾಗಿದೆ. ಮಳಿಗೆಯೊಂದಕ್ಕೆ 1 ಸಾವಿರ ರೂ. ಭದ್ರತಾ ಠೇವಣಿ ಇಡಬೇಕಿದ್ದು, ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಅವರ ಹೆಸರಿನಲ್ಲಿ ಡಿಡಿ ಸಲ್ಲಿಸಬೇಕು.
ನಿಗದಿತ ಅರ್ಜಿ ನಮೂನೆಯನ್ನು ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಕಚೇರಿ ಅಥವಾ ಆಯಾ ಜಿಲ್ಲೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಪಡೆಯಬಹುದು. ಪ್ರಾಧಿಕಾರದ ವೆಬ್‌ಸೈಟ್ https://kpp.karnataka.gov.in ನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಅ.12ರ ಒಳಗೆ ಕನ್ನಡ ಪುಸ್ತಕ ಪ್ರಾಧಿಕಾರ ಕಚೇರಿಗೆ ಅಂಚೆಯ ಮೂಲಕ ಹಾಗೂ ಇ-ಮೇಲ್ kannadappradhikara@gmail.com ಮೂಲಕ ಸಲ್ಲಿಸಬಹುದು. ಮಾಹಿತಿಗಾಗಿ ದೂ. 080-22484516, 22107704 ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.