ಮೈಸೂರು ದಸರಾಕ್ಕೆ ಕೊಡಗಿನ 6 ಆನೆಗಳು

dasara
Published on

ಮಡಿಕೇರಿ:

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಶುರುವಾಗಿರುವಂತೆಯೇ ಪ್ರಮಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 9 ಆನೆೆಗಳ ಮೊದಲ ಪಟ್ಟಿ ತಯಾರಾಗಿದೆ. ಈ ಪೈಕಿ 6 ಆನೆಗಳು ಕೊಡಗಿನಿಂದ ಆಯ್ಕೆ ಆಗಿವೆ. ಆ.3ಕ್ಕೆ ಈ ಆನೆಗಳು ಹುಣಸೂರಿನ ವೀರನ ಹೊಸಳ್ಳಿಗೆ ತೆರಳಿ ಅಲ್ಲಿಂದ ಗಜಪಯಣಕ್ಕೆ ಜತೆಯಾಗಲಿವೆ. ಈ ಹಿನ್ನೆಲೆಯಲ್ಲಿ ಆನೆಗಳ ಮಾವುತರು, ಕಾವಾಡಿಗರು ಕೂಡ ಅರಮನೆ ನಗರಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.

ವಿಶಿಷ್ಟವಾದ ಪಾರಂಪರಿಕ ಆಚರಣೆ ಮೂಲಕ ಜಗತ್ತಿನಲ್ಲಿ ಹೆಸರು ಮಾಡಿರುವ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯೇ ಜಂಬೂ ಸವಾರಿ. ಅಂಬಾರಿಯನ್ನು ಹೆಗಲಿಗೇರಿಸಿಕೊಂಡ ಗಜರಾಜ ಮತ್ತು ಅದರ ಜತೆಯಲ್ಲಿ ಇತರ ಆನೆಗಳು ಗಜ ಗಾಂಭಿರ್ಯದಿAದ ಹೆಜ್ಜೆ ಹಾಕುತ್ತಿದ್ದರೆ ಅದನ್ನು ಕಣ್ಣು ತುಂಬಿಸಿಕೊಳ್ಳಲು ಎರಡು ಕಣ್ಣು ಕೂಡ ಸಾಲದು. ಮೈಸೂರು ದಸರಾದ ಈ ದೃಶ್ಯವನ್ನು ನೋಡುವುದಕ್ಕಾಗಿಯೇ ಇಲ್ಲಿಗೆ ಭೇಟಿ ಕೊಡುವವರಿದ್ದಾರೆ. ಈ ಜಂಬೂ ಸವಾರಿಯಲ್ಲಿ ಕೊಡಗಿನ ಆನೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ 14 ಆನೆಗಳ ಪೈಕಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಮೊದಲ ಹಂತದಲ್ಲಿ ತೆರಳಲಿರುವ 9 ಆನೆಗಳ ತಂಡವನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಈ ಆನೆಗಳನ್ನು ತಜ್ಞರ ತಂಡ ಕೂಲಂಕುಷ ಪರಿಶೀಲನೆ ನಡೆಸಿದ ನಂತರ ಆಯ್ಕೆ ಮಾಡಿದೆ. ಆನೆ ಶಿಬಿರಗಳಿಗೆ ಭೇಟಿ ನೀಡಿದ್ದ ತಜ್ಞರ ತಂಡ ಆನೆಯ ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥಿತಿಗತಿ, ಆರೋಗ್ಯ, ಆಹಾರ ಪದ್ಧತಿ, ಜತೆಗಾರ ಆನೆಯ ಜತೆಗಿನ ವರ್ತನೆ, ಮನುಷ್ಯರ ಜತೆಗಿನ ವರ್ತನೆ, ಹೊಂದಿಕೊಳ್ಳುವಿಕೆ, ಜನದಟ್ಟಣೆಯ ನಿರ್ವಹಣೆ, ಗದ್ದಲ ಸಹಿಷ್ಣುತೆ ಮತ್ತಿತರ ಅಂಶಗಳನ್ನು ಗಮನಿಸಿ ಮೊದಲ ತಂಡದಲ್ಲಿ ಇರಬೇಕಾದ ಆನೆಗಳನ್ನು ಅಂತಿಮಗೊಳಿಸಲಾಗಿದೆ.

ಮೈಸೂರಿಗೆ ತೆರಳಲಿರುವ 9 ಅನೆಗಳ ತಂಡದಲ್ಲಿ ಚಿನ್ನದ ಅಂಬಾರಿ ಹೊರಲಿರುವ ಮತ್ತಿಗೋಡು ಆನೆ ಶಿಬಿರದ 59 ವರ್ಷದ ಅಭಿಮನ್ಯು ಸೇರಿದಂತೆ ಕೊಡಗಿನಿಂದ 6 ಆನೆಗಳು ಆಯ್ಕೆ ಆಗಿವೆ. ಅಭಿಮನ್ಯುವಿಗೆ ಮೈಸೂರು ದಸರಾದಲ್ಲಿ 20 ವರ್ಷಗಳಿಂದ ಪಾಲ್ಗೊಂಡ ಅನುಭವ ಇದೆ. ಉಳಿದಂತೆ ದಸರಾದಲ್ಲಿ 7 ವರ್ಷ ಪಾಲ್ಗೊಂಡ ಅನುಭವ ಇರುವ ದುಬಾರೆಯ 45 ವರ್ಷದ ಧನಂಜಯ, 13 ವರ್ಷ ದಸರಾ ಅನುಭವದ ದುಬಾರೆಯ 45 ವರ್ಷದ ಕಾವೇರಿ, 2 ದಸರಾದಲ್ಲಿ ಭಾಗವಹಿಸಿರುವ ದುಬಾರೆಯ 26 ವರ್ಷದ ಕಂಜನ್, ದಸರಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಾಲ್ಗೊಳ್ಳುತ್ತಿರುವ ಮತ್ತಿಗೋಡು ಆನೆ ಶಿಬಿರದ 25 ವರ್ಷದ ಭೀಮ ಹಾಗೂ 2 ವರ್ಷದ ದಸರಾದಲ್ಲಿ ಭಾಗವಹಿಸಿರುವ ಮತ್ತಿಗೋಡು ಆನೆ ಶಿಬಿರದ 40 ವರ್ಷದ ಏಕಲವ್ಯ ಕೊಡಗಿನಿಂದ ಮೊದಲ ತಂಡದಲ್ಲಿ ಮೈಸೂರಿಗೆ ತೆರಳುತ್ತಿವೆ.

ಪ್ರತಿ ವರ್ಷ ದಸರಾಕ್ಕೆ ತೆರಳುವ ಆನೆಗಳಿಗೆ ಶಿಬಿರದಲ್ಲಿ ಇರುವ ಸಂದರ್ಭದಲ್ಲಿ ವಿಶೇಷ ಆರೈಕೆ ಏನೂ ಇರುವುದಿಲ್ಲ. ಇತರ ಆನೆಗಳಂತೆಯೇ ಇವುಗಳನ್ನೂ ನೋಡಿಕೊಳ್ಳಲಾಗುತ್ತದೆ. ಪ್ರತಿದಿನವೂ ಇವುಗಳಿಗೆ ಮಾವುತರು ಸಿದ್ಧಪಡಿಸಿದ ಆಹಾರ ಕೊಡಲಾಗುತ್ತದೆ. ಆನೆಗಳಿಗೆ ಅವುಗಳ ವಯಸ್ಸು ಮತ್ತು ತೂಕಕ್ಕೆ ಅನುಗುಣವಾಗಿ ಸರಾಸರಿ 50 ಕೆಜಿಯಷ್ಟು ಆಹಾರ ಬೇಕಾಗುತ್ತದೆ. ಭತ್ತ, ಭತ್ತದ ಹುಲ್ಲು, ಬೆಲ್ಲ, ಹುರುಳಿ, ಉಪ್ಪು ಸೇರಿಸಿ ತಯಾರಿಸಿದ

ಆಹಾರವನ್ನು ತಯಾರಿಸಿ ಕೊಡಲಾಗುತ್ತದೆ. ಆನೆಗಳಿಗೆ ಇವು ಕೇವಲ ಸ್ನಾö್ಯಕ್ಸ್ ಇದ್ದಂತೆ. ಹೆಚ್ಚಿನ ಊಟ ಬೇಕೆಂದರೆ ಕಾಡಿನೊಳಗೆ ತಿರುಗಾಡಿ ಅಲ್ಲಿಯ ಹಸಿರು ಸೊಪ್ಪು, ಹುಲ್ಲು, ಬಿದಿರು ತಿನ್ನಬೇಕಾಗುತ್ತದೆ. ಹಾಗಾಗಿ ಸಿದ್ಧಪಡಿಸಿದ ಆಹಾರ ಕೊಟ್ಟ ನಂತರ ಹೆಚ್ಚಿನ ಆಹಾರಕ್ಕಾಗಿ ಕಾಡಿಗೆ ಕಳುಹಿಸಲಾಗುತ್ತದೆ.

ದಸರಾದಲ್ಲಿ ಪಾಲ್ಗೊಳ್ಳಲು ಆಯ್ಕೆ ಆದ ಆನೆಗಳನ್ನು ಆಯ್ಕೆ ಆದ ನಂತರ ಮೈಸೂರಿಗೆ ಕಳುಹಿಸಿಕೊಡುವ ತನಕ ಶಿಬಿರಗಳಲ್ಲಿ ಸ್ವಲ್ಪ ಹೆಚ್ಚಿನ ಕಾಳಜಿ ತೋರಿಸಲಾಗುತ್ತದೆ. ಹಾಗಾಗಿ ಈಗ ಶಿಬಿರದಲ್ಲಿ ಇರುವ ದಸರಾ ಆನೆಗಳನ್ನು ಆಹಾರಕ್ಕಾಗಿ ಕಾಡಿಗೆ ಕಳುಹಿಸಿಸುವ ಸಂದರ್ಭ ಅವುಗಳ ಮೇಲೆ ವಿಶೇಷ ನಿಗಾ ಇರಿಸಲಾಗಿರುತ್ತದೆ. ಒಮ್ಮೆ ಗಜಪಯಣದ ಮೂಲಕ ಮೈಸೂರಿಗೆ ದಸರಾ ಆನೆಗಳು ತಲುಪಿದವೆಂದರೆ ನಂತರದ ದಿನಗಳಲ್ಲಿ ಅಲ್ಲಿ ಆ ಆನೆಗಳಿಗೆ ರಾಜಾತಿಥ್ಯ ಕೊಡಲಾಗುತ್ತದೆ. ವಿಶೇಷ ಆಹಾರಗಳ ಜತೆಗೆ ಹೆಚ್ಚಿನ ಪೌಷ್ಠಿಕಾಂಶ ಹೊಂದಿದ ಆಹಾರಗಳಿಗೆ ಆದ್ಯತೆ ನೀಡಲಾಗುತ್ತದೆ ಎನ್ನುತ್ತಾರೆ ಪಶುವೈದ್ಯರು.

ಮೈಸೂರು ದಸರಾ ಸಂದರ್ಭದಲ್ಲಿ ಆನೆಗಳ ಜತೆ ಅವುಗಳನ್ನು ಮುನ್ನಡೆಸುವ ಮಾವುತ, ಕಾವಾಡಿಗಳೂ ಎಲ್ಲರ ಕೇಂದ್ರ ಬಿಂದು ಆಗಿರುತ್ತಾರೆ. ಜಂಬೂಸವಾರಿ ಮುಗಿಯುತ್ತಿದ್ದಂತೆಯೇ ತಮ್ಮ ಆನೆಗಳ ಜತೆ ಕಾಡು ಸೇರಿಕೊಳ್ಳುವ ಇವರು ಕೂಡ ಈಗ ಮೈಸೂರು ದಸರಾಕ್ಕೆ ತೆರಳಲು ಸಜ್ಜಾಗಿದ್ದಾರೆ. ಸುಮಾರು 2 ತಿಂಗಳು ಮೈಸೂರಿನಲ್ಲಿ ಇರಬೇಕಾಗಿರುವುದರಿಂದ ಆನೆಗಳ ಜತೆಗೆ ಕುಟುಂಬ ಸಮೇತ ಇವರೆಲ್ಲರೂ ಮೈಸೂರಿಗೆ ಹೋಗುತ್ತಾರೆ. ಹಾಗಾಗಿ ದೀರ್ಘಾವಧಿಗೆ ಪರ ಊರಿನಲ್ಲಿ ತೆರಳಲು ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಗಜಪಡೆಯಂತೆ ಈ ಗಜ ಪರಿಚಾರಕರೂ ಅಲ್ಲಿರುವಷ್ಟು ದಿನಗಳ ಕಾಲ ರಾಜೋಪಾಚಾರ ಪಡೆಯಲಿದ್ದಾರೆ.

ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥಿತಿಗತಿ, ಆರೋಗ್ಯ, ಆಹಾರ ಪದ್ಧತಿ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ದಸರಾದಲ್ಲಿ ಪಾಲ್ಗೊಳ್ಳುವ 14 ಆನೆಗಳ ಪೈಕಿ 9 ಆನೆಗಳ ಮೊದಲ ತಂಡವನ್ನು ಸಿದ್ಧಪಡಿಸಲಾಗಿದೆ. ಈ ತಂಡದಲ್ಲಿ ಕೊಡಗಿನಿಂದ 6 ಆನೆಗಳು ಪಾಲ್ಗೊಳ್ಳುತ್ತಿವೆ. ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಈ ಬಾರಿ ಅಂಬಾರಿ ಹೊರಲಿದ್ದಾನೆ. ಎಲ್ಲಾ ಆನೆಗಳನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಉತ್ತಮ ರೀತಿಯಲ್ಲಿ ಆರೈಕೆ ಮಾಡಲಾಗುತ್ತದೆ. ಪೌಷ್ಠಿಕಾಂಶಯುಕ್ತ ಆಹಾರ ಕೊಡಲಾಗುತ್ತೆ. ದಸರಾದಲ್ಲಿ ಪಾಲ್ಗೊಳ್ಳುವ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತದೆ.

ಡಾ. ಮುಜೀಬ್, ಮುಖ್ಯ ಪಶುವೈದ್ಯಾಧಿಕಾರಿ, ಮಡಿಕೇರಿ ವೃತ್ತ, ಮಡಿಕೇರಿ

ಮೈಸೂರಿಗೆ ತೆರಳಲು ನಾವು ಕೂಡ ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡಿದ್ದೇವೆ. ಈಗ ಆನೆಗಳು ಮೇವಿಗಾಗ ಕಾಡಿಗೆ ಹೋಗಿವೆ. ಮಳೆಗಾಲದಲ್ಲಿ ಹೆಚ್ಚು ಕಟ್ಟಿ ಹಾಕುವುದು ಸರಿಯಲ್ಲ. ಇಲ್ಲಿಂದ ನಾವು ಆನೆಗಳ ಜತೆ ಮೈಸೂರಿಗೆ ಹೊರಡುವ ಮೊದಲು ಎಲ್ಲ ಕೆಲಸವೂ ಚೆನ್ನಾಗಿ ಆಗಲಿ ಎಂದು ದೇವರನ್ನು ನೆನೆಯುತ್ತೇವೆ. ಆ.3ಕ್ಕೆ ಹೋಗುವಾಗ ನಮ್ಮ ಜತೆ ಇಲ್ಲಿಂದ ಸಹಾಯಕ ಹುಡುಗರು ಬರುತ್ತಾರೆ. ಆನೆಗಳ 2ನೇ ತಂಡ ಬರುವಾಗ ಕುಟುಂಬದವರು ಮತ್ತು ಮಕ್ಕಳು ಬಂದು ಸೇರಿಕೊಳ್ಳುತ್ತಾರೆ.

ಜೆ.ಡಿ. ಡೋಬಿ, ಕಾವೇರಿ ಆನೆಯ ಮಾವುತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net