ಜಂಬೂಸವಾರಿಯಲ್ಲಿ ಜಿಲ್ಲೆಯ ಇತಿಹಾಸ ಅನಾವರಣ

dasara
Stills for Dussehra festival
Published on

*ದಸರಾ ಉತ್ಸವಕ್ಕೆ ಸ್ತಬ್ಧಚಿತ್ರ

ಸತತ ಮೂರನೇ ಬಾರಿ ನೆಲಮಂಗಲಕ್ಕೆ ಹಿರಿಮೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಾಡಹಬ್ಬ ಮೈಸೂರು ದಸರಾದಲ್ಲಿನ ಜಂಬೂಸವಾರಿಯಲ್ಲಿ ಈ ಬಾರಿ ಗ್ರಾಮಾಂತರ ಜಿಲ್ಲೆಯ ಐತಿಹಾಸಿಕ ಮಹತ್ವ ಸಾರುವ ಸ್ತಬ್ದಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಸಿದ್ದವಾಗಿದೆ.
ದೇವನಹಳ್ಳಿ ಕೋಟೆ, ಮುಕ್ತಿನಾಥೇಶ್ವರ ದೇವಾಲಯ, ಕಪಿಲೇಶ್ವರ ಸ್ವಾಮಿ ದೇವಸ್ಥಾನ, ಮಣ್ಣೆ, ಶಿವಗಂಗೆ ಬೆಟ್ಟದ ಜತೆಗೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಒಳಗೊಂಡ ವಿಶೇಷ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ವೇದಿಕೆ ಸಿದ್ದವಾಗಿದ್ದು, ಈವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನಸಾಗರ ಕಾತುರದಿಂದ ಕಾಯುತ್ತಿದೆ. ರಾಜ್ಯದ ಪ್ರತೀ ಜಿಲ್ಲೆಗಳ ವಿಶೇಷತೆ ಸಾರುವ ಜಂಬೂ ಸವಾರಿಯಲ್ಲಿ ವಿಶೇಷ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ತಬ್ಧ ಚಿತ್ರದ ಅನಾವರಣವಾಗುತ್ತಿರುವುದು ಜಿಲ್ಲೆಯ ಐತಿಹಾಸಿಕ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ. ಕಳೆದ ಎರಡು ವರ್ಷ ನೆಲಮಂಗಲದ ಶಿವಗಂಗೆ ಬೆಟ್ಟ ಪ್ರದರ್ಶನ ಕಂಡಿತ್ತು ಈ ಬಾರಿಯೂ ದಕ್ಷಿಣ ಕಾಶಿಯ ಅನಾವರಣಕ್ಕೆ ವೇದಿಕೆ ಸಿದ್ದವಾಗಿದೆ.
ದೇವನಹಳ್ಳಿ ಕೋಟೆ: ಕ್ರಿ ಶ 1501 ರಲ್ಲಿ ದೇವನಹಳ್ಳಿ ಕೋಟೆಯನ್ನು ದೇವನ ದೊಡ್ಡಿಯಲ್ಲಿ ದೇವರಾಯನ ಒಪ್ಪಿಗೆಯೊಂದಿಗೆ ಮಣ್ಣಿನ ಕೋಟೆ ನಿರ್ಮಿಸಿದ್ದರು. ಈ ಕೋಟೆಯು 20 ಎಕರೆ ವಿಸ್ತೀರ್ಣದಲ್ಲಿ ಅಂಡಾಕಾರದಲ್ಲಿ ನಿರ್ಮಿಸಲಾಗಿದೆ. ಅಂಡಾಕಾರದ ಆಂತರಿಕ ಕೋಟೆಯು ಶುಷ್ಕ ವಾಗಿದ್ದು, ನಿಯಮಿತ, ಮಧ್ಯಂತರಗಳಲ್ಲಿ 12 ಅರೆ ವೃತ್ತಾಕಾರದ ಕೊತ್ತಲುಗಳನ್ನು ಹೊಂದಿದೆ.
ಶಿವಗಂಗೆ ಬೆಟ್ಟ: ಶಿವಗಂಗೆಯನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಬೆಟ್ಟದ ತುದಿಯಲ್ಲಿ ಒಂದು ದೈತ್ಯ ನಂದಿ ಪ್ರತಿಮೆಯನ್ನು ಬಂಡೆಗಳಿಂದ ಕೆತ್ತಲಾಗಿದೆ. ಇತಿಹಾಸ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವವನ್ನು ಸಾರುವ ಶಿವಗಂಗೆ ಬೆಟ್ಟವಾಗಿದೆ. ಗಂಗಾಧರೇಶ್ವರ, ಹೊನ್ನಾದೇವಿ ದೇವಾಲಯ ಹಾಗೂ ಒಳಕಲ್ಲು ತೀರ್ಥ, ನಂದಿ ಪ್ರತಿಮೆ, ಪಾತಾಳ ಗಂಗೆ ಇವುಗಳ ಸಂಗಮದ ವಿಶೇಷ ಸ್ಥಳವಾಗಿದೆ.
ಮುಕ್ತಿ ನಾಥೇಶ್ವರ ದೇವಾಲಯ: ಸುಮಾರು 910 ಕ್ಕೂ ಹೆಚ್ಚಿನ ವರ್ಷ ಪುರತನವಾದದ್ದು. ಇದು ದ್ರಾವಿಡ ಶೈಲಿಗೆ ಸೇರಿದೆ. ಇಲ್ಲಿ ದ್ವಾರ ಮಂಟಪ, ಸುಖನಾಸಿ, ನವರಂಗ, ಗರ್ಭ ಗೃಹ ಗಳಿರುವ ದೇವಾಲಯದ ಹೊರ ಬಿತ್ತಿಯ ಮೇಲೆ ಕೆತ್ತಿರುವ ಉಬ್ಬು ಶಿಲ್ಪಗಳು ಸುಂದರವಾಗಿವೆ. ಅವುಗಳಲ್ಲಿ ತಾಂಡೇಶ್ವರ, ಗಣಪತಿ, ಶಿವ ವೆಂಕಟೇಶ್ವರ, ಬ್ರಹ್ಮ, ಮಹಿಷಾಸುರ ಮರ್ದಿನಿ ಎಲ್ಲವೂ ಪ್ರಮಾಣ ಬದ್ಧ ಶಿಲ್ಪಗಳಾದರೆ ಗರ್ಭ ಗೃಹದ ಹಿಂಭಾಗದ ಬಿತ್ತಿಯಲ್ಲಿರುವ ಶಿಲ್ಪದಲ್ಲಿ ಶಿವ ವಿಷ್ಣುವಿನ ಲಕ್ಷಣಗಳೆಲ್ಲವೂ ಸೇರಿವೆ. ದೇವಾಲಯವನ್ನು ರಾಜ ರಾಜೇಂದ್ರ ಚೋಳದಿಂದ ನಿರ್ಮಿಸಲಾಗಿದೆ.
ಕಪಿಲೇಶ್ವರ ಸ್ವಾಮಿ ದೇವಸ್ಥಾನ: ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿನ ಮಣ್ಣಿಗೆ ಗಂಗರ ರಾಜಧಾನಿಯಾಗಿತ್ತು. ನಂತರ ರಾಷ್ಟ್ರಕೂಟರ ಆಡಳಿತಕ್ಕೆ ಸೇರಿದ ಮಾನ್ಯಖೇಟವಾಗಿ 7ನೇ ಶತಮಾನದ ವೇಳೆಗೆ ರಾಜಕೀಯವಾಗಿ ಮಾತ್ರವಲ್ಲದೆ. ಸಾಂಸ್ಕೃತಿಕವಾಗಿಯೂ ಪ್ರಸಿದ್ಧಿ ಪಡೆದಿತ್ತು ಎನ್ನಲಾಗಿದೆ. ಗಂಗರ ಕಾಲದಲ್ಲಿ ನಿರ್ಮಾಣವಾದ ಕಪಿಲೇಶ್ವರ ಸ್ವಾಮಿ ದೇವಸ್ಥಾನ ಪ್ರಮುಖ ಐತಿಹಾಸಿಕ ಕುರುಹಾಗಿದೆ.

ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಬಿಂಬಿಸುವ ಸ್ತಬ್ಧ ಚಿತ್ರಗಳು ಅನಾವರಣಗೊಳ್ಳಲಿವೆ. ದೇವನಹಳ್ಳಿ ಕೋಟೆ, ಮುಕ್ತಿನಾಥೇಶ್ವರ ದೇವಾಲಯ, ಕಪಿಲೇಶ್ವರ ಸ್ವಾಮಿ ದೇವಸ್ಥಾನ, ಮಣ್ಣೆ, ಶಿವಗಂಗೆ ಬೆಟ್ಟ ಸೇರಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಒಳಗೊಂಡ ಸ್ತಬ್ಧಚಿತ್ರ ಪ್ರದರ್ಶನವಾಗುತ್ತಿದೆ.

ಡಾ.ಕೆ.ಎನ್.ಅನುರಾಧಾ ಸಿಇಒ ಜಿಪಂ ಬೆಂಗಳೂರು ಗ್ರಾಮಾಂತರ ಜಿಲ್ಲೆ


ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೋಟೆ, ಮುಕ್ತಿನಾಥೇಶ್ವರ ದೇವಾಲಯ, ಕಪಿಲೇಶ್ವರ ಸ್ವಾಮಿ ದೇವಸ್ಥಾನ, ಮಣ್ಣೆ, ಶಿವಗಂಗೆ ಬೆಟ್ಟ ಒಳಗೊಂಡ ಮೈಸೂರು ದಸರಾ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಸಮಿತಿ ಅನುಮೋದನೆ ಕೊಟ್ಟಿದೆ. ಈಗಾಗಲೇ ಮೈಸೂರಿನಲ್ಲಿ ಸ್ತಬ್ಧ ಚಿತ್ರ ತಯಾರಿ ಮತ್ತು ಸಿದ್ಧತೆ ನಡೆಯುತ್ತಿದ್ದು ಜಂಬೂಸವಾರಿಯಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ.
ಉಮಾ ಸಹಾಯಕ ನಿರ್ದೇಶಕಿ ಖಾದಿ ಮತ್ತು ಗ್ರಾಮ ಉದ್ಯೋಗ ಇಲಾಖೆ ಬೆಂ. ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net