ಮಾದಪ್ಪನ ಸನ್ನಿಧಿಯಲ್ಲಿ ಮಹಾನವಮಿ

24 HANUR 2 B
Published on

ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೈಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸೋಮವಾರ ಮಹಾನವಮಿಯ ಅಂಗವಾಗಿ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಜಯದಶಮಿ ಅಂಗವಾಗಿ ದೇಗುಲವನ್ನು ವಿವಿಧ ಪುಷ್ಪ, ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವ 3.30ರಿಂದ 6.30ರವರೆಗೆ ಮಾದಪ್ಪನ ಸನ್ನಿಧಿಯಲ್ಲಿ ಬೇಡಗಂಪಣ ಸಂಪ್ರದಾಯದಂತೆ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆಯ ಮೂಲಕ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಲಾಯಿತು.ರಾತ್ರಿ 8.30ರ ಬಳಿಕ ಉಪವಾಸವಿದ್ದ ಬೇಡಗಂಪಣ ಅರ್ಚಕರು ಮಡಿವಸ್ತ್ರ ಧರಿಸಿ ಸ್ವಾಮಿಯ ಪಟ್ಟದ ಕತ್ತಿ, ಬಂಗಾರದ ಆಯುಧಗಳನ್ನು ಹೊತ್ತು ಸತ್ತಿಗೆ, ಸೂರಿಪಾನಿ, ಛತ್ರಿ ಚಾಮರ, ನಂದಿ ಧ್ವಜಕಂಬ, ತಮಟೆ, ನಗಾರಿ, ಜಾಗಟೆ ಹಾಗೂ ಮಂಗಳ ವಾದ್ಯಮೇಳದೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿದರು. ಪಟ್ಟದ ಕತ್ತಿ, ಖಡ್ಗಗಳು, ಗಂಡುಗುಂಡಲಿ, ಎಡಮುರಿ, ಬಲಮರಿ ಹಾಗೂ ಇನ್ನಿತರೆ ಆಯುಧಗಳನ್ನಿಟ್ಟು ಬ್ರಹ್ಮಸ್ತೋತ್ರದ ಪೂಜೆಯ ಜತೆಗೆ ಸಂಪ್ರದಾಯಿಕವಾಗಿ ಪೂಜೆಯನ್ನು ಸಲ್ಲಿಸಿದರು. ಕಂಕಣ ಕಟ್ಟಿಸಿಕೊಂಡ ಬೇಡಗಂಪಣ ಅರ್ಚಕರು ವಿವಿಧ ಆರತಿ ಸೇವೆಗಳನ್ನು ನೆರವೇರಿಸಿದರು.
ಆಯುಧಗಳಿಗೆ ಪೂಜೆ: ಆಯುಧಗಳನ್ನು ಹೊತ್ತ ಅರ್ಚಕರು ಮೆರವಣಿಗೆಯ ಮೂಲಕ ದೇಗುಲಕ್ಕೆ ಆಗಮಿಸಿ 3 ಸುತ್ತು ಪ್ರದಕ್ಷಿಣೆ ಹಾಕಿದರು. ದಕ್ಷಿಣ ದ್ವಾರದ ಮಹಾಗಣಪತಿ ಸನ್ನಿಧಿಯಲ್ಲಿ ಮಂಗಳಾರತಿ ಬೆಳಗಿಸಿ ಬೂದುಕುಂಬಳಕಾಯಿ ಒಡೆದು ದೃಷ್ಠಿ ತೆಗೆಯಲಾಯಿತು. ಬಳಿಕ ಪಟ್ಟದ ಉಯ್ಯಲೆ ಮಂಟಪದಲ್ಲಿ ಆಯುಧಗಳನ್ನಿರಿಸಿ 3 ರೀತಿಯ ಗೋಪುರದ ಆರತಿ ಹಾಗೂ ನೈವೇದ್ಯ ನೇರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಶಿವಶಕ್ತಿ ಉತ್ಸವ, ವೀರಭದ್ರ ಸ್ವಾಮಿಗೆ, ಬಂಡಳ್ಳಿ ಬಸವ, ಗಾಳಿ ಬಸವೇಶ್ವರ ವಿಗ್ರಹಮೂರ್ತಿ, ಬೆಳ್ಳಿಸತ್ತಿಗೆ, ದೊಡ್ಡ ಸತ್ತಿಗೆ ಹಾಗೂ ನಂದಿ ಕಂಬಗಳಿಗೂ ಪೂಜೆ ಸಲ್ಲಿಸಲಾಯಿತು. ಶಿವಪಾರ್ವತಿ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಿಸಿ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net