

ಮಡಿಕೇರಿ:
ಮುಂದೆ ಸಾಲು ಸಾಲು ಹಬ್ಬಗಳು ಬರುತ್ತಿವೆ. ಜತೆಗೆ ಜನರಿಗೆ ಸಂಭ್ರಮವನ್ನೂ ಹೊತ್ತು ತರುತ್ತಿದೆ. ಮುಂದಿನ ವಾರದಿಂದ ಗಣೇಶೋತ್ಸವ ಆಚರಣೆ ಶುರುವಾದರೆ, ಮುಂದಿನ ತಿಂಗಳು ದಸರಾ ಕಾವೇರಿ ತುಲಾ ಸಂಕ್ರಮಣ ಜಾತ್ರೆ ಆರಂಭ ಆಗುತ್ತದೆ. ಕೊಡಗಿನಲ್ಲಿ ಈ ಮೂರು ಹಬ್ಬಗಳನ್ನೂ ವಿವಿಧ ಭಾಗಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ವಿರಾಜಪೇಟೆಯಲ್ಲಿ ಗಣೇಶೋತ್ಸವ ಆಚರಣೆಗೆ ಅದರದ್ದೇ ಆದ ಮಹತ್ವವಿದೆ. ವಿರಾಜಪೇಟೆ ಮತ್ತು ಸುತ್ತಲಿನ ಊರುಗಳ ಪಾಲಿಗೆ ಇದೊಂದು ದೊಡ್ಡ ಸಂಭ್ರಮ. ಗಣೇಶ ವಿಸರ್ಜನೆ ದಿನ ನಡೆಯುವ ಶೋಭಾ ಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಆದರೆ ಇಂಥ ಸಂಭ್ರಮಕ್ಕೆ ಪಟ್ಟಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ. ಹಾಳಾಗಿರುವ ರಸ್ತೆಗಳ ದುರಸ್ತಿ ಕಾರ್ಯವಾದರೂ ಪೂರ್ಣಗೊಳ್ಳಬೇಕಿತ್ತು. ಆದರೆ ಅದಿನ್ನೂ ಶುರುವಾಗಿಲ್ಲ.
ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ದಸರಾ ಆಚರಣೆ ವಿಶಿಷ್ಟವಾಗಿರುತ್ತದೆ. ಮಡಿಕೇರಿಯಲ್ಲಿ ರಾತ್ರಿ ವೇಳೆ ನಡೆಯುವ ದಶಮಂಟಪಗಳ ಶೋಭಾಯಾತ್ರೆ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಮೈಸೂರು ದಸರಾ ಮುಗಿಸಿ ಬಹುತೇಕರು ರಾತ್ರಿ ವೇಳೆ ಮಡಿಕೇರಿಗೆ ಆಗಮಿಸುತ್ತಾರೆ. ಬೆಳಗ್ಗೆ ತನಕವೂ ಇಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಗೋಣಿಕೊಪ್ಪ ದಸರಾವೂ ಜನಾಕರ್ಷಣೆ ಪಡೆದುಕೊಂಡಿದೆ. ಈ ಎರಡು ಕಡೆಯೂ ಸಿದ್ಧತೆ ಆಗಬೇಕಿದೆ.
ಈ ಬೆನ್ನಲ್ಲೇ ಭಾಗಮಂಡಲ, ತಲಕಾವೇರಿಯಲ್ಲಿ ತುಲಾಸಂಕ್ರಮಣ ಜಾತ್ರೆ ಶುರುವಾಗುತ್ತದೆ. ತೀರ್ಥೋದ್ಭವ ಮತ್ತು ನಂತರದ ದಿನಗಳಲ್ಲಿ ದೇಶಾದ್ಯಂತದಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಇಲ್ಲಿಯೂ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಆಗಬೇಕಿದೆ. ಕುಂಟುತ್ತಾ ಸಾಗಿರುವ ಮೇಲ್ಸೇತುವೆ ಕಾಮಗಾರಿಗೆ ಮುಕ್ತಿ ಸಿಕ್ಕಿದರೆ ಜಾತ್ರೆ ವೇಳೆಗೆ ಭಕ್ತರ ಓಡಾಟಕ್ಕೆ ಅನುಕೂಲ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಜಿಲ್ಲೆಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಮಳೆ ಕಾಮಗಾರಿಗಳನ್ನು ನಡೆಸಲು ಅಡ್ಡಿಯಾಗಿದೆ. ಮಡಿಕೇರಿ ನಗರಸಭೆ ವತಿಯಿಂದ ರಸ್ತೆಗಳ ದುರಸ್ತಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಶುರುವಾಗಲಿದೆ. ಇತರ ಕಡೆಗಳಲ್ಲೂ ತುರ್ತಾಗಿ ಕೆಲಸಗಳು ಶುರುವಾಗಬೇಕಿದೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.
ದಸರಾ ಮತ್ತು ಗಣೇಶೋತ್ಸವ ಆಚರಣೆ ಅರ್ಥಪೂರ್ಣವಾಗಿ ಆಗಬೇಕು. ಅಶಾಂತಿಗೆ ಅವಕಾಶ ಮಾಡಿಕೊಡಬಾರದು. ಪೊಲೀಸ್ ಇಲಾಖೆಯ ನಿಯಮಗಳನ್ನು ಆಯೋಜಕರು ಪರಿಪಾಲಿಸಬೇಕು. ಉತ್ಸವ ರಾತ್ರಿ ನಡೆಯುವುದರಿಂದ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕು. ಉತ್ಸವ ನಡೆಯುವ ಸ್ಥಳ, ರಸ್ತೆಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು. ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.
ಸಮೃದ್ಧ್ ಪೊನ್ನಪ್ಪ, ವಿದ್ಯಾರ್ಥಿ, ಹಿರಿಕರ ಗ್ರಾಮ
ಹಬ್ಬಗಳು ಜತೆ ಜತೆಯಲ್ಲಿ ಬರುತ್ತಿರುವುದರಿಂದ ರಸ್ತೆಗಳನ್ನು ಉತ್ತಮ ಪಡಿಸಬೇಕು. ಶೌಚಗೃಹಗಳ ವ್ಯವಸ್ಥೆ ಆಗಬೇಕು. ವಾಹನ ದಟ್ಟಣೆ ಅಧಿಕವಾಗುವ ಸಂಭವ ಇರುವ ಜಾಗಗಳಲ್ಲಿ ಸ್ವಯಂ ಸೇವಕರನ್ನು ನಿಯೋಜಿಸಬೇಕು. ಪ್ರಥಮ ಚಿಕಿತ್ಸೆಗೂ ಆದ್ಯತೆ ಕೊಡಬೇಕು. ಬಟ್ಟೆ ಧರಿಸುವ ವೇಳೆ ಸಾರ್ವಜನಿಕರಿಗೆ ಮುಜುಗರ ಆಗುವ ರೀತಿಯಲ್ಲಿ ಇರಬಾರದು.
ಪೊಕ್ಕುಳಂಡ್ರ ಧನೋಜ್, ಕಾರ್ಯದರ್ಶಿ, ನರಿಯಂದಡ ಅಯ್ಯಪ್ಪ ಯುವಕ ಸಂಘ
ಸಿದ್ದಾಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಮಡಿಕೇರಿ, ಗೋಣಿಕೊಪ್ಪ, ದಸರಾಕ್ಕೆ ಇಲ್ಲಿಂದ ಸಾಕಷ್ಟು ಮಂದಿ ತೆರಳುತ್ತಾರೆ. ರಾತ್ರಿ ಹೋಗಿ ಬರಲು ಹಾಗೂ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೂ ಸರ್ಕಾರಿ ಬಸ್ಸಿನ ವ್ಯವಸ್ಥೆ ಮಾಡಿಕೊಟ್ಟಲ್ಲಿ ಅನುಕೂಲವಾಗಲಿದೆ.
ಎಂ.ಎ. ಯಮುನಾ, ಮಾಜಿ ಅಧ್ಯಕ್ಷೆ, ಗ್ರಾಮ ಪಂಚಾಯಿತಿ, ಸಿದ್ದಾಪುರ
ನಗರದ ಸ್ವಚ್ಛತೆಗೆ ಮೊದಲು ಗಮನಹರಿಸಬೇಕು. ರಸ್ತೆ ಬದಿಯಲ್ಲಿ ಸಂಗ್ರಹ ಆಗಿರುವ ಕಸವನ್ನೆಲ್ಲಾ ತೆಗೆಸಬೇಕು. ಗುಂಡಿ ಬಿದ್ದಿರುವ ರಸ್ತೆಗೆ ಗುಂಡಿ ಮುಚ್ಚುವ ಕೆಲಸ ಮಾಡದೆ ರಸ್ತೆಯನ್ನು ಹೊಸದಾಗಿ ಮಾಡುವುದೇ ಒಳ್ಳೆಯದು. ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದರೆ ಚೆನ್ನಾಗಿರುತ್ತದೆ.
ಶಂಕರ್, ವ್ಯಾಪಾರಿ, ವೀರಾಜಪೇಟೆ
ದಸರಾ ಮತ್ತು ಗಣೇಶೋತ್ಸವದಲ್ಲಿ ಕೊಡಗಿನಲ್ಲಿ ಮಂಟಪ ಮೆರವಣಿಗೆ, ಶೋಭಯಾತ್ರೆಗೆ ಹೆಚ್ಚಿನ ಪ್ರಾಶಸ್ತ್ಯ ಇದೆ. ಈ ಸಂದರ್ಭದಲ್ಲಿ ಬರುವ ಜನರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ನೀಡಬೇಕಾಗಿದೆ. ಶೋಭಯಾತ್ರೆ ಬರುವಾಗ ವಾಹನಗಳು ಅಡ್ಡ ಬಂದರೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈಗಿಂದಲೇ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಸ್ಥಳ ನಿಗದಿಪಡಿಸಬೇಕಾಗಿದೆ. ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಸೂಕ್ತ.
ಹೆಚ್.ಆರ್. ಮಧು, ಗೋಣಿಕೊಪ್ಪ ನಿವಾಸಿ
ಸಾಮಾನ್ಯವಾಗಿ ಗೌರಿ ಹಬ್ಬ, ಗಣೇಶ ಚತುರ್ಥಿ, ತುಲಾಸಂಕ್ರಮಣ ಮತ್ತು ದಸರಾ ಹಬ್ಬ ಪ್ರತಿವ?ರ್ ನಿಗದಿತ ಸಮಯದಲ್ಲಿ ಬರುವುದು ಎಲ್ಲಗೂ ತಿಳಿದಿದೆ. ಅದರ ಜತೆಗೆ ಪ್ರತಿ ವಾರಂತ್ಯವೂ ಜಿಲ್ಲೆಯಲ್ಲಿ ದಸರಾ ರೀತಿಯ ಜನಸಂದಣಿ ವಾಹನ ದಟ್ಟಣೆ ಕಂಡು ಬರುತ್ತಿದೆ ಈ ಬಗ್ಗೆ ಸೂಕ್ತ ನೀಲಿ ನಕ್ಷೆಯೊಂದಿಗೆ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ, ಕುಡಿಯುವ ನೀರು ಮತ್ತು ಉತ್ತಮ ರಸ್ತೆಗಳನ್ನು ಸರ್ವ ಋತು ಮಾದರಿಯಲ್ಲಿ ನಿರ್ಮಿಸಿಕೊಡಬೇಕು.
ಪಿ.ಆರ್. ಸುನಿಲ್ ಕುಮಾರ್, ಅಧ್ಯಕ್ಷ, ಸುಂಟಿಕೊಪ್ಪ ಗ್ರಾ.ಪಂ
ದಸರಾ ಹತ್ತಿರ ಬರುತ್ತಿರುವುದರಿಂದ ನಗರದ ರಸ್ತೆಗಳ ದುರಸ್ತಿ ಕಡೆಗೆ ಗಮನ ಹರಿಸಲಾಗಿದೆ. ಹಾಳಾದ ರಸ್ತೆಗಳನ್ನು ಸರಿಪಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಕೆಲಸ ಶುರುವಾಗುತ್ತದೆ. ಮಳೆ ಹೆಚ್ಚು ಇದ್ದರೆ ಬೇರೆಯದ್ದೇ ರೀತಿಯಲ್ಲಿ ಕಾಮಗಾರಿ ನಡೆಸಿ ರಸ್ತೆಯನ್ನು ಸರಿಪಡಿಸಲು ಗಮನ ಹರಿಸಲಾಗುವುದು. ಮಳೆ ಕಡಿಮೆಯಾದರೆ ಡಾಂಬರೀಕರಣ ಮಾಡಲಾಗುವುದು.
ನೆರವಂಡ ಅನಿತಾ ಪೂವಯ್ಯ, ಅಧ್ಯಕ್ಷೆ, ಮಡಿಕೇರಿ ನಗರಸಭೆ
ಭಾಗಮಂಡಲ ಶ್ರೀ ಕಾವೇರಿ ತುಲಾ ಸಂಕ್ರಮಣ ಜಾತ್ರೆ ಮುಂದಿನ ತಿಂಗಳು ನಡೆಯಲಿದೆ. ಈ ವ್ಯಾಪ್ತಿಯಲ್ಲಿ ಮಳೆ ಹೆಚ್ಚು ಇರುವುದರಿಂದ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದೆ. ಮಳೆಯ ಮಧ್ಯೆಯೇ ಮೇಲ್ಸೇತುವೆ ಕೆಲಸ ಮಾಡಲಾಗುತ್ತಿದೆ. ಮೂರು ಕಡೆಯಲ್ಲಿ ರ‌್ಯಾಂಪ್‌ಗಳ ನಿರ್ಮಾಣ ಕಾರ್ಯ ಜಾತ್ರೆ ಆರಂಭವಾಗುವುದರೊಳಗೆ ಮುಗಿದರೆ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಓಡಾಟಕ್ಕೆ ಅನುಕೂಲ ಆಗಲಿದೆ. ಮಳೆ ಕಡಿಮೆ ಆದ ಕೂಡಲೇ ರಸ್ತೆ ಸರಿಪಡಿಸಲು ಕ್ರಮವಹಿಸಬೇಕಿದೆ.
ಪಾಣತ್ತಲೆ ಜೀವನ್ ಕುಮಾರ್, ಭಾಗಮಂಡಲ
ಇತ್ತೀಚೆಗಿನ ದಿನಗಳಲ್ಲಿ ಮೂಲಭೂತ ಸೌಕರ್ಯಗಳು ಕೇವಲ ಹಬ್ಬ ಹರಿದಿನದ ಸಂದರ್ಭಕ್ಕೆ ಮಾತ್ರ ಸೀಮಿತವಾಗುತ್ತಿದೆ. ಹಬ್ಬಗಳು ಬಂದಾಗ ರಸ್ತೆ ದುರಸ್ತಿ ಕಾರ್ಯ, ಗುಂಡಿ ಮುಚ್ಚುವುದು ಭರದಿಂದ ಸಾಗುತ್ತದೆ. ಅದು ಗುಣಮಟ್ಟದ ಕಾಮಗಾರಿ ಆಗಿರುವುದಿಲ್ಲ. ಮತ್ತೆ ರಸ್ತೆ ಹದಗೆಡುತ್ತದೆ. ಈ ರೀತಿ ಮಾಡದೆ ಪ್ರತಿನಿತ್ಯವೂ ಸಾರ್ವಜನಿಕರಿಗೆ ಯೋಗ್ಯ ರೀತಿಯಲ್ಲಿ ಉಪಯೋಗ ಆಗುವಂತಹ ರಸ್ತೆಗಳು ಇದ್ದರೆ ಒಳ್ಳೆಯದು.
ಕಲ್ಲುಮುಟ್ಲು ಜಶ್ಮಿ, ಪ್ರಾಂಶುಪಾಲರು, ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆ, ಅರ್ವತೊಕ್ಲು
ದಶಮಂಟಪ ಸಮಿತಿಯಿಂದ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಆದರೆ, ನಗರೋತ್ಥಾನದ ಒಂದು ಹಂತದ ಬಿಲ್ ನಗರಸಭೆಗೆ ಸರ್ಕಾರದಿಂದ ಬರಬೇಕಾಗಿದೆ. ಪರಿಣಾಮ ಶಾಸಕಧ್ವಯರ ಗಮನಕ್ಕೆ ತರಲಾಗುವುದು.
ಪ್ರಕಾಶ್ ಆಚಾರ್ಯ, ಕಾರ್ಯಧ್ಯಕ್ಷರು, ದಸರಾ ಜನೋತ್ಸವ ಸಮಿತಿ