ಅಬ್ಬರದೊಂದಿಗೆ ಮರೆಯಾಗದಿರಲಿ ಸಂಪ್ರದಾಯ

dasara
Published on

ಮಡಿಕೇರಿ:

ಮೈಸೂರು ದಸರಾ ಎಂದರೆ ಅರಮನೆ, ಅಂಬಾರಿ, ಆನೆಗಳು, ರಾಜಮನೆತನ ಕಣ್ಮುಂದೆ ಬರುತ್ತದೆ. ಆದರೆ ಮಡಿಕೇರಿ ದಸರಾದಲ್ಲಿ ಝಗಮಗಿಸುವ ಬೆಳಕು, ಅಬ್ಬರದ ಸಂಗೀತ, ಹುಚ್ಚೆದ್ದು ಕುಣಿಯುವ ಯುವ ಸಮೂಹ, ಪೌರಾಣಿಕ ಕತೆಗಳನ್ನು ಹೇಳುವ ಟ್ಯಾಬ್ಲೋಗಳು, ಆ ಟ್ಯಾಬ್ಲೋಗಳಲ್ಲಿ ಬೆಂಕಿಯುಗುಳುವ ರಾಕ್ಷಸರ ಪ್ರತಿಕೃತಿಗಳು ನೆನಪಾಗುತ್ತದೆ. ಮೈಸೂರು ದಸರಾದಂತೆ ಮಡಿಕೇರಿ ದಸರಾಕ್ಕೂ ಐತಿಹಾಸಿಕ ಹಿನ್ನೆಲೆ ಇದೆ. ಧಾರ್ಮಿಕತೆ ನಂಟು ಅಂಟಿಕೊAಡಿದೆ.

ಗೋಣಿಕೊಪ್ಪಲುವಿನಲ್ಲೂ ಸಾಂಪ್ರದಾಯಿಕ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಎರಡೂ ಕಡೆಗಳಲ್ಲೂ ಆರಂಭದಲ್ಲಿ ಜನೋತ್ಸವವವಾಗಿ ದಸರಾ ಜನಮನ ಗೆದ್ದಿತ್ತು. ಜನರಿಂದಲೇ ಹಣ ಸಂಗ್ರಹಿಸಿ ದಸರಾ ಆಚರಿಸುವುದು ಇಲ್ಲಿಯ ವಿಶೇಷ ಆಗಿತ್ತು. ಆದರೆ ಸರ್ಕಾರದ ಅನುದಾನ ಬರಲು ಶುರುವಾದ ನಂತರ ದಸರಾಕ್ಕೆ ಅದ್ಧೂರಿತನ ಸೇರಿಕೊಳ್ಳಲಾರಂಭಿಸಿದೆ.

ಅದ್ಧೂರಿತನ ಮೆರೆದಂತೆ ಎಲ್ಲೋ ಒಂದು ಕಡೆ ಸಂಪ್ರದಾಯ ತೆರೆಮರೆಗೆ ಸರಿಯುತ್ತಿರುವ ಆತಂಕ ಪ್ರಜ್ಞಾವಂತರಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.

ದಸರಾ ಎಂದರೆ ಡಿಜೆ, ಅಬ್ಬರದ ಸಂಗೀತ, ಕಣ್ಣು ಕೋರೈಸುವ ಬೆಳಕು ಎನ್ನುವ ನಂಬಿಕೆ ಈಗಿನ ತಲೆಮಾರಿನವರು ನಂಬುವAಥ ವಾತಾವರಣ ನಿರ್ಮಾಣ ಆಗುತ್ತಿದೆ. ಹಾಗಾದರೆ ದಸರಾ ಆಚರಣೆ ಹೇಗಿರಬೇಕು ? ಈ ಬಗ್ಗೆ ವಿಜಯವಾಣಿ ಓದುಗರಿ ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಸಾಂಪ್ರಾದಾಯಿಕವಾಗಿ ಆರ್ಥಪೂರ್ಣವಾಗಿ ಆಚರಿಸಬೇಕು. ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಕಲಾವೈಭವಕ್ಕೆ ದಸರಾದಲ್ಲಿ ಅದ್ಯತೆ ನೀಡಬೇಕು. ಜಾನಪದ, ಗ್ರಾಮೀಣ ಕ್ರೀಡಾ ಸ್ಪರ್ಧೆಗಳಿಗೆ ಉತ್ತೇಜನ ನೀಡಬೇಕು. ಅಡಂಬರ ಆಚರಣೆಯ ದಸರಾವನ್ನು ಇಷ್ಟಪಡುವವರ ಸಂಖ್ಯೆ ಬಹಳ ಕಡಿಮೆಯಿದೆ. ಶಬ್ದಮಾಲಿನ್ಯಕ್ಕೆ ಅವಕಾಶ ಬೇಡ.

ಪಿ.ಕೆ. ವಸಂತ್ ಕುಮಾರ್, ಕಾರ್ಮಿಕ ಮುಖಂಡ, ಬಿಳಿಗೇರಿ ಗ್ರಾಮ

ದಸರಾ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ. ಸರ್ಕಾರ ಅನುದಾನ ನೀಡಿ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಷಯ. ಕಾಲ ಎಷ್ಟೇ ಬದಲಾದರೂ ದಸರಾದ ಮೂಲ ಆಚರಣೆಗಳನ್ನು ತೊರೆದು ತೀರ ಆಧುನಿಕತೆಗೆ ಹೊಗಬಾರದು. ಹಿಂದಿನ ಕಾಲದಿಂದ ಬಂದ ಆಚರಣೆ, ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಾದರಿ ದಸರಾ ಆಚರಿಸಬೇಕು.

ಕೆ.ಸಿ. ಹೇಮಂತ್, ವಿರಾಜಪೇಟೆ

ರಾಜ್ಯಾದ್ಯಂತ ದಸರಾ ಸಂಭ್ರಮ ಮನೆ ಮಾಡಿದೆ. ನಾಡಹಬ್ಬ ಮೈಸೂರು ದಸರಾದಂತೆ ಕೊಡಗಿನಲ್ಲೂ ದಸರಾಗೆ ವಿಶೇಷ ಪ್ರಾಮುಖ್ಯತೆ ಇದ್ದು, ಮಡಿಕೇರಿ ಮತ್ತು ಗೋಣಿಕೊಪ್ಪಲುವಿನಲ್ಲಿ ದಸರಾಗೆ ಐತಿಹಾಸಿಕ ಹಿನ್ನೆಲೆ ಇದೆ. ದಸರಾ ಜನೋತ್ಸವ ವೇಳೆ ಹೆಚ್ಚು ಜನ ಸೇರಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಳ್ಳಬೇಕು

ವಿನಿಲ್, ಚೆನ್ನಯ್ಯನಕೋಟೆ ಗ್ರಾಮ

ದಸರಾ ಎಂಬುದು ನಮ್ಮ ಐತಿಹಾಸಿಕ ಆಚರಣೆ. ಅದಕ್ಕೆ ಅದರದ್ದೇ ಆದ ಮಹತ್ವವಿದೆ. ಆದರೆ ಇತ್ತೀಚೆನ ದಿನಗಳಲ್ಲಿ ದಸರಾ ಆಧುನೀಕರಣದ ಕಡೆ ವಾಲುತ್ತಿದೆ. ಅಬ್ಬರದ ಡಿಜೆ, ಮತ್ತು ದುಂದು ವೆಚ್ಚವೂ ಹೆಚ್ಚಾಗುತ್ತಿದೆ. ದಸರಾ ಹಬ್ಬದ ಮಹತ್ವ, ಮೂಲ ಆಚರಣೆಗೆ ಒತ್ತು ನೀಡಿ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿದರೆ ಒಳ್ಳೆಯದು.

ಮಧು, ಗೋಣಿಕೊಪ್ಪಲು ವಾಸಿ

ದಸರಾ ನಮ್ಮ ನಾಡ ಹಬ್ಬ. ಅದನ್ನು ಎಲ್ಲರೂ ಸೇರಿ ಸಂಭ್ರಮದಿAದ ಆಚರಿಸಬೇಕು. ಆದರೆ ಇಂದು ಕೆಲವು ಸಂದರ್ಭದಲ್ಲಿ ರಾಜಕೀಯ ಮೇಲಾಟಗಳು ಸರಿಯಲ್ಲ. ಎಲ್ಲರೂ ಕೂಡಿ ಒಂದಾಗಿ ಹಬ್ಬವನ್ನು ಆಚರಿಸಿದರೆ ಅದಕ್ಕೆ ಒಂದು ಅರ್ಥ ಬರುತ್ತದೆ. ನಿಜವಾದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು.

ನವ್ಯ ರಾಘವೇಂದ್ರ, ಗೃಹಿಣಿ, ಗೋಣಿಕೊಪ್ಪಲು

ಕೊಡಗಿನ ದಸರಾ ಹೆಸರುವಾಸಿಯಾಗಿದ್ದು ಕಾಲ ಬದಲಾದಂತೆ ಆದುನಿಕತೆಗೆ ಬದಲಾಗಿದೆ. ಇದು ಆಗಲೇ ಬೇಕು. ಆದರೂ ಹಿಂದಿನ ಸಂಪ್ರದಾಯಗಳನ್ನು ಬಿಡಬಾರದು. ಆಡಂಬರದ ಉತ್ಸವ ಆಗಬಾರದು. ನಮ್ಮ ಸಂಪ್ರದಾಯ, ಸಂಸ್ಕೃತಿ ಉಳಿಯವ ನಿಟ್ಟಿನಲ್ಲಿ ದಸರಾ ಉತ್ಸವ ನಡೆಯಬೇಕು.

ದಿವ್ಯಾ ರಮೇಶ್, ಗೃಹಿಣಿ, ಶನಿವಾರಸಂತೆ

ಇತ್ತೀಚಿಗೆ ಅನೇಕರು ದಸರಾ ಉತ್ಸವವನ್ನು ಆಡಂಬರದ ಉತ್ಸವ ಎಂಬAತೆ ನಡೆದುಕೊಳ್ಳುತ್ತಿದ್ದಾರೆ. ಒಂದು ದಿನ ಡಿಜೆ ಅಬ್ಬರಕ್ಕೆ ಕುಣಿದು ಕುಪ್ಪಳಿಸಿ ದಸರಾ ಮುಗಿಯಿತು ಎಂದು ಹಿಂದಿರುಗುತ್ತಿದ್ದಾರೆ. ಯುವ ಜನಾಂಗ ಬದಲಾಗಬೇಕು. ಇದು ಆಡಂಬರದ ಉತ್ಸವ ಅಲ್ಲ. ನಮ್ಮ ಸಂಸ್ಕೃತಿ ಸಂಪ್ರದಾಯದ ಉಳಿವಿಗೆ ಹಾಗೂ ಹಿಂದಿನಿAದ ನಡೆದುಕೊಂಡು ಬಂದ ನಂಬಿಕೆ ಹಾಗೂ ಭಕ್ತಿಯನ್ನು ಹೆಚ್ಚು ಬಿಂಬಿಸುವ ಕಾರ್ಯಕ್ರಮ ನಡೆಯಬೇಕು.

ಗೀತಾ ರಮಾನಂದ್, ವ್ಯವಸ್ಥಾಪಕಿ, ಮೈಸ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ, ಶನಿವಾರಸಂತೆ

ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಜಿಲ್ಲಾ ಮಟ್ಟದಾಗಿದ್ದು ಇದರಲ್ಲಿ ಸ್ಥಳೀಯ ಕಲಾವಿದರಿಗೆ ವೇದಿಕೆ ನೀಡಬೇಕು. ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳಿಗೆ ಇಂತಹ ವೇದಿಕೆಗಳನ್ನು ದೊರಕಿಸಿದಲ್ಲಿ ಮುಂದಿನ ದಿನಗಳಲ್ಲಿ ಅವರು ರಾಜ್ಯಮಟ್ಟ ಮತ್ತು ಮಾಧ್ಯಮಗಳ ಮುಂದೆ ಬರಲು ಅನುಕೂಲವಾಗುತ್ತದೆ. ಸರ್ಕಾರದ ಅನುದಾನ ಬಳಸಿಕೊಂಡು ಗ್ರಾಮೀಣ ಪ್ರತಿಭೆಗಳಿಗೆ ಸಂಭಾವನೆ ನೀಡಿ ಜನೋತ್ಸವ ನಡೆಸಿದರೆ ದಸರಾ ಅರ್ಥಪೂರ್ಣವಾಗುವುದು. ದಸರಾ ಶಕ್ತಿ ದೇವತೆಗಳ ಆರಾಧನಾ ಹಬ್ಬ. ಇದು ಸಾಂಪ್ರದಾಯಿಕ ಆಚರಣೆಯಾಗಬೇಕೇ ಹೊರತು ಅಬ್ಬರದ ಅರ್ಥವಿಲ್ಲದ ಆಡಂಬರದ ಆಚರಣೆಯಾಗಬಾರದು.

ಕಡ್ಲೇರ ವೃಂದಾ ಲೋಕೇಶ್, ಶುಶ್ರೂಷಕಿ, ಬಕ್ಕ ಬೆಟಗೇರಿ ಗ್ರಾಮ, ಮಡಿಕೇರಿ

ಮಡಿಕೇರಿ ದಸರಾಕ್ಕೆ ಹೆಚ್ಚಿನ ಜನ ಬರಬೇಕು, ಇದನ್ನು ಇಷ್ಟಪಡಬೇಕು ಎಂದರೆ ಇಲ್ಲಿ ಏನಾದರೂ ವಿಶೇಷತೆ ಇರಬೇಕು. ಇಂಥ ವಿಭಿನ್ನತೆ ಇರುವುದರಿಂದಲೇ ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದುಕೊಂಡಿದೆ. ಕೊಡಗು ಸಾಂಸ್ಕೃತಿಕ ಶ್ರೀಮಂತಿಕೆಯ ಜಿಲ್ಲೆ. ಇಲ್ಲಿ ವಿಭಿನ್ನ ಸಂಸ್ಕೃತಿಯನ್ನು ಪ್ರದರ್ಶಿಸುವುದಕ್ಕೆ ಇಲ್ಲಿಯ ದಸರಾ ಬಳಸಿಕೊಂಡರೆ ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಕೂಡ ಜನಾಕರ್ಷಣೆ ಪಡೆಯುವುದರಲ್ಲಿ ಸಂಶಯವಿಲ್ಲ.

ಕೆ. ರಾಮರಾಜನ್, ಕೊಡಗು ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net