ಐತಿಹಾಸಿಕ ದಸರಾ ಸಂಭ್ರಮಕ್ಕೆ ಸಜ್ಜು

dasara
Published on

ಮಡಿಕೇರಿ:

ಆಗಾಗ್ಗೆ ಸುರಿಯುವ ಮಳೆ, ಮಂಜು ಮುಸುಕಿದ ವಾತಾವರಣದ ಮಧ್ಯೆ ಐತಿಹಾಸಿಕ ದಸರಾ ಸಂಭ್ರಮಕ್ಕೆ ಮಡಿಕೇರಿ ಸಜ್ಜಾಗಿದೆ. ಸೋಮವಾರ (ಸೆ.22) ಕರಗಗಳ ನಗರ ಸಂಚಾರ ಶುರುವಾಗುವದರೊಂದಿಗೆ ನಾಡ ಹಬ್ಬ ದಸರಾಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ಅ.2ರ ತನಕವೂ ಮಂಜಿನ ನಗರಿಯಲ್ಲಿ ದಸರಾ ಕಾರ್ಯಕ್ರಮಗಳದ್ದೇ ಸಡಗರ ಕಂಡುಬರಲಿದ್ದು, ಕೊನೆಯ ದಿನದ ದಶಮಂಟಪಗಳ ಶೋಭಾಯಾತ್ರೆಗೆ ಸುಮಾರು. 1.5 ಲಕ್ಷ ಜನ ಸೇರುವ ಅಂದಾಜು ಮಾಡಲಾಗಿದೆ.

ಮೈಸೂರು ದಸರಾ ಎಂದರೆ ಅರಮನೆ, ಅಂಬಾರಿ, ಆನೆಗಳು, ರಾಜಮನೆತನ ಕಣ್ಮುಂದೆ ಬಂದರೆ, ಮಡಿಕೇರಿ ದಸರಾ ವಿಶೇಷ ಕಾರಣಕ್ಕೆ ಗಮನ ಸೆಳೆಯುತ್ತದೆ. ಇಲ್ಲಿ ಝಗಮಗಿಸುವ ಬೆಳಕು, ಅಬ್ಬರದ ಸಂಗೀತ, ಹುಚ್ಚೆದ್ದು ಕುಣಿಯುವ ಯುವ ಸಮೂಹ, ಪೌರಾಣಿಕ ಕತೆಗಳನ್ನು ಹೇಳುವ ಟ್ಯಾಬ್ಲೋಗಳು, ಆ ಟ್ಯಾಬ್ಲೋಗಳಲ್ಲಿ ಬೆಂಕಿಯುಗುಳುವ ರಾಕ್ಷಸರ ಪ್ರತಿಕೃತಿಗಳು ನೆನಪಾಗುತ್ತದೆ. ಮೈಸೂರು ದಸರಾದಂತೆ ಮಡಿಕೇರಿ ದಸರಾಕ್ಕೂ ಐತಿಹಾಸಿಕ ಹಿನ್ನೆಲೆ ಇದೆ. ಧಾರ್ಮಿಕತೆ ನಂಟು ಅಂಟಿಕೊAಡಿದೆ. ಸ್ಥಳೀಯರಿಗೆ ಭಾವನಾತ್ಮಕತೆಯ ಬಂಧವೂ ಇದೆ. ಹಾಗಾಗಿಯೇ ಮಡಿಕೇರಿ ದಸರಾ ಎಂದರೆ ಸಾಕು ಸ್ಥಳೀಯರು ಎಲ್ಲಾ ಮರೆತು ಹಬ್ಬದ ಯಶಸ್ಸಿಗಾಗಿ ಹಗಲಿರುಳು ದುಡಿಯಲು ಸಜ್ಜಾಗಿಬಿಡುತ್ತಾರೆ.

ದಸರಾ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಸಮಿತಿ ಜತೆಗೆ ದಶಮಂಟಪ ಸಮಿತಿ ಹಾಗೂ ವಿವಿಧ ಉಪಸಮಿತಿಗಳು ತಮ್ಮದೇ ಆದ ರೀತಿಯಲ್ಲಿ ಸಿದ್ಧತೆಗಳನ್ನು ನಡೆಸಿವೆ. ಈ ಭಾರಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡಲು ಅಧ್ಯಕ್ಷ ಕುಡೆಕಲ್ಲು ಸಂತೋಷ್ ನೇತೃತ್ವದ ಸಾಂಸ್ಕೃತಿಕ ಸಮಿತಿ ವಿಶೇಷ ರೀತಿಯಲ್ಲಿ ಸಿದ್ಧತೆ ನಡೆಸಿದೆ. ಈ ವರ್ಷ 2ನೇ ವರ್ಷಕ್ಕೆ ಕಾಲಿಟ್ಟಿರುವ ಕಾಫಿ ದಸರಾವನ್ನೂ ಜನಾಕರ್ಷಕ ರೀತಿಯಲ್ಲಿ ನಡೆಸಲು ಸಂಚಾಲಕ ಹೆಚ್.ಟಿ. ಅನಿಲ್ ತಮ್ಮದೇ ಆದ ಪರಿಕಲ್ಪನೆಯಲ್ಲಿ ಮುಂದಡಿ ಇಟ್ಟಿದ್ದಾರೆ. ಪ್ರಮುಖ ಆಕರ್ಷಣೆಯಾದ ಬಹುಭಾಷಾ ಕವಿಗೋಷ್ಠಿಯ ಯಶಸ್ಸಿಗೂ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ತಮ್ಮ ತಂಡದ ಜತೆ ಶ್ರಮವಹಿಸಿ ದುಡಿಯುತ್ತಿದ್ದಾರೆ.

ಮಕ್ಕಳ ದಸರಾ, ಯುವ ದಸರಾ, ಮಹಿಳಾ ದಸರಾ, ಜಾನಪದ ದಸರಾ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳಿಗೂ ವೇದಿಕೆ ಸಜ್ಜಾಗುತ್ತಿದೆ. ಕ್ರೀಡಾ ಸಮಿತಿ ಮೂಲಕ ದಸರಾ ಕ್ರೀಡೆಗಳು ಆಯೋಜನೆಗೊಳ್ಳುತ್ತಿದೆ. ಅಲಂಕಾರ ಸಮಿತಿ ನಗರ ಅಲಂಕಾರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದು, ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಉತ್ತೇಜನ ಕೊಡಲಾಗುತ್ತಿದೆ. ನಾಲ್ಕು ಶಕ್ತಿ ದೇವತೆಗಳ ಕರಗಗಳ ನಗರ ಸಂಚಾರ ಸೋಮವಾರದಿಂದ (ಸೆ.22) ಆರಂಭವಾಗಲಿದ್ದು, ಈ ಸಂಬAಧ ಬಹುತೇಕ ಕಾರ್ಯಗಳು ಅಂತಿಮ ಘಟ್ಟ ತಲುಪಿದೆ.

ಮಡಿಕೇರಿ ದಸರಾದಲ್ಲಿ ದಶಮಂಟಪಗಳ ಶೋಭಾಯಾತ್ರೆಯೇ ಪ್ರಮುಖ ಆಕರ್ಷಣೆ ಸುಮಾರು 150 ವರ್ಷಗಳ ಇತಿಹಾಸ ಇರುವ ಪೇಟೆ ಶ್ರೀರಾಮಮಂದಿರ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿ ದೇವಾಲಯ, 107 ವರ್ಷಗಳ ಇತಿಹಾಸ ಇರುವ ದೇಚೂರು ಶ್ರೀ ರಾಮಮಂದಿರ, ಶ್ರೀ ಕೋದಂಡ ರಾಮ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ಶ್ರೀ ಕೋಟೆ ಗಣಪತಿ ದೇವಾಲಯ, ಶ್ರೀ ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ ಹೀಗೆ 10 ದೇವಾಲಯಗಳಿಗೆ ಸಂಬAಧಿಸಿದ ಮಂಟಪಗಳು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ.

ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮಂಟಪಗಳ ತಯಾರಿಗಾಗಿಯೇ ಆಯಾಯಾ ದೇವಾಲಯಗಳಿಗೆ ಸಂಬAಧಿಸಿದAತೆ ದಸರಾ ಮಂಟಪ ಸಮಿತಿಗಳನ್ನು ರಚಿಸಿಕೊಳ್ಳಲಾಗಿದೆ. ಈಗಾಗಲೇ ಆಯ್ಕೆ ಮಾಡಿಕೊಂಡಿರುವ ಪೌರಾಣಿಕ ಕತೆಗಳ ಆಧಾರದಲ್ಲಿ ಎಲ್ಲಾ ದೇವಾಲಯಗಳಲ್ಲೂ ಮಂಟಪಗಳ ತಯಾರಿಕಾ ಕಾರ್ಯ ಭರದಿಂದ ನಡೆದಿದೆ. ಅತ್ಯುತ್ತಮ ಮಂಟಪಗಳಿಗೆ ಬಹುಮಾನಗಳೂ ಇರುವುದರಿಂದ ಒಂದಕ್ಕಿAದ ಒಂದು ವಿಭಿನ್ನ ಮತ್ತು ಆಕರ್ಷಕವಾಗಿ ಮೂಡಿಬರಲು ಆಯಾಯ ದೇವಾಲಯಗಳ ಸಮಿತಿ ಸದಸ್ಯರು ಗರಿಷ್ಠ ಶ್ರಮ ಹಾಕುತ್ತಿದ್ದಾರೆ.

ಮಳೆಯಿಂದಾಗಿ ನಗರದ ರಸ್ತೆಗಳು ಗುಂಡಿ ಬಿದ್ದು ಬಹುತೇಕ ಕಡೆಗಳಲ್ಲಿ ಸಂಪೂರ್ಣ ಹಾಳಾಗಿವೆ. ಈ ಹಿನ್ನೆಲೆಯಲ್ಲಿ ರಸ್ತೆಗಳ ದುರಸ್ತಿಗೆ ನಗರಸಭೆ ವತಿಯಿಂದ ಆದ್ಯತೆ ನೀಡಲಾಗಿದೆ. ಕರಗಗಳು ಮತ್ತು ಮಂಟಪಗಳು ಸಂಚರಿಸುವ ರಸ್ತೆಗಳನ್ನು ಪ್ರಥಮ ಆದ್ಯತೆ ಮೇಲೆ ದುರಸ್ತಿ ಮಾಡಲಾಗುತ್ತಿದೆ. ಗುಣಮಟ್ಟದ ಕಾಮಗಾರಿಗೆ ಸಂಬAಧಿಸಿದ ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ರಸ್ತೆಗಳ ಎರಡೂ ಬದಿ ಕುರುಚಲು ಗಿಡಗಳನ್ನು ತೆರವು ಮಾಡಲಾಗಿದೆ. ನಗರದಲ್ಲಿ ಇರುವ ಎಲ್ಲಾ ಶೌಚಗೃಹಗಳನ್ನು ಸ್ವಚ್ಛಗೊಳಿಸಲಾಗಿದೆ. ನಿರಂತರ ನೀರು ಪೂರೈಕೆ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ಶೋಭಾಯಾತ್ರೆಯ ದಿನದಂದು ಎಲ್ಲಾ ಶೌಚಗೃಹಗಳಲ್ಲೂ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.

ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ. ನಗರದ ಪ್ರಮುಖ ಬೀದಿಗಳು ಝಗಮಗಿಸುವಂತೆ ನೋಡಿಕೊಳ್ಳಲಾಗುತ್ತದೆ. ಕಟ್ಟಡಗಳಿಗೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುತ್ತಿದೆ. ಮೊದಲೆಲ್ಲಾ ಕೇವಲ ಮೂರು ದಿನಗಳ ಕಾಲ ಮಾತ್ರ ನಗರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿತ್ತು. ಕಳೆದ 2 ವರ್ಷಗಳಿಂದ 10 ದಿನಗಳ ಕಾಲವೂ ದೀಪಾಲಂಕಾರ ಮಾಡಲಾಗುತ್ತಿದೆ. ನಗರದ ಅಲಂಕಾರಕ್ಕೆ ಕೈ ಜೋಡಿಸುವಂತೆ ವ್ಯಾಪಾರಿಗಳು, ಸಾರ್ವಜನಿಕರಲ್ಲೂ ಮನವಿ ಮಾಡಿಕೊಳ್ಳಲಾಗಿದೆ.

ದಸರಾಕ್ಕೆ ಆಗಮಿಸುವವರಿಗೆ ಕಿರಿ ಕಿರಿಯ ಅನುಭವ ನೀಡುತ್ತಿದ್ದ ಕರ್ಕಶ ಶಬ್ದ ಮಾಡುವ ಪೀಪಿಗಳನ್ನು ಈ ಬಾರಿಯ ದಸಾರದಲ್ಲೂ ನಿಷೇದಿಸಲಾಗಿದೆ. ಇದರ ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಮುಖವಾಡಗಳನ್ನು ಬಳಸುವುದಕ್ಕೂ ನಿರ್ಬಂಧ ಹೇರಲಾಗಿದೆ. ಈ ಸಂಬAಧ ಬೀದಿ ಬದಿಯ ಅಂಗಡಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಪೀಪಿ ಮತ್ತು ಮುಖವಾಡ ಮಾರಾಟ ಮಾಡುವವರು ಹಾಗೂ ಬಳಸುವವರಿಗೆ ದಂಡ ವಿಧಿಸುವುದಲ್ಲದೆ, ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ. ಈ ಬಾರಿ ದಸರಾ ದಿನ ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಾ ಸೀಟ್ ತನಕ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಇಡಲು ಅವಕಾಶ ಕೊಡುತ್ತಿಲ್ಲ. ಅಬ್ಬರದ ಡಿಜೆ ಬಳಕೆ, ಲೇಸರ್ ಲೈಟ್‌ಗಳ ಬಳಕೆ, ಅವೈಜ್ಞಾನಿಕವಾಗಿ ಪಟಾಕಿ ಸಿಡಿಸುವುದು, ಬಣ್ಣದ ಕಾಗದಗಳ ಚೂರುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.

1781ರಿಂದ 1809ರ ತನಕ ಕೊಡಗನ್ನು ಆಳಿದ್ದ ದೊಡ್ಡ ವೀರ ರಾಜೇಂದ್ರ ಮೈಸೂರು ಮಾದರಿಯಲ್ಲಿ ದಸರಾ ಆಚರಿಸುತ್ತಿದ್ದರು ಎನ್ನುತ್ತದೆ ಇತಿಹಾಸ. 1969ರಿಂದ ಈಚೆಗೆ ಮಡಿಕೇರಿ ದಸರಾ ಜನೋತ್ಸವವಾಗಿ ಬದಲಾಗುತ್ತ ಬಂದಿದೆ. ಬಿದಿರಿನ ಮಂಟಪ, ದೀವಟಿಗೆ ಬೆಳಕಿನಲ್ಲಿ ನಡೆಯುತ್ತಿದ್ದ ಶೋಭಾಯಾತ್ರೆಗೆ ಈಗ ಅದ್ಧೂರಿತನದ ಮೆರುಗು ಬಂದಿದೆ. ಮೊದಲು ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಿಸಿ ಅಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಈಗ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಗೆ ಸ್ಥಳಾಂತರವಾಗಿದೆ. ಮಹದೇವಪೇಟೆಯ ಪಂಪಿನ ಕೆರೆಯ ಬಳಿ ಶಕ್ತಿದೇವತೆಗಳ ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾ ಆರಂಭವಾಗಿ 10 ದಿನಗಳ ನಂತರ ಮಹದೇವಪೇÀಟೆಯಲ್ಲಿ ಬನ್ನಿ ಕಡಿಯುವುದರೊಂದಿಗೆ ಹಬ್ಬಾಚರಣೆ ಮುಗಿಯುತ್ತದೆ. ಮೊದಲೆಲ್ಲಾ ಜನರಿಂದಲೇ ವಂತಿಗೆ ಸಂಗ್ರಹಿಸಿ ಜನೋತ್ಸವವಾಗಿ ಮಡಿಕೇರಿ ದಸರಾ ಆಚರಿಸಲಾಗುತ್ತಿತ್ತು. ಈಗ ಕೆಲವು ವರ್ಷಗಳಿಂದ ಸರ್ಕಾರ ಅನುದಾನ ಕೊಡುತ್ತಿದೆ. ಈ ವರ್ಷವೂ 1.50 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.

ಮಡಿಕೇರಿ ದಸರಾಕ್ಕೆ ನಗರಸಭೆ ಕಡೆಯಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಶಕ್ತಿದೇವತೆಗಳ ಕರಗ ಪೂಜೆಯೊಂದಿಗೆ ದಸರಾಕ್ಕೆ ಚಾಲನೆ ಸಿಗುವ ಮಹದೇವಪೇಟೆಯ ಪಂಪಿನ ಕೆರೆಯ ಬಳಿ ಈ ವರ್ಷ ಕಮಾನು ನಿರ್ಮಿಸಲಾಗಿದೆ. ಗ್ರಾನೈಟ್‌ಗಳನ್ನು ಅಳವಡಿಸಲಾಗಿದೆ. ಮೇ ತಿಂಗಳಿನಿAದಲೇ ಮಳೆ ಸುರಿಯುತ್ತಿದ್ದ ಕಾರಣ ಹಾಳಾಗಿದ್ದ ರಸ್ತೆಗಳ ದುರಸ್ತಿಗೆ ಅವಕಾಶ ಸಿಕ್ಕಿರಲಿಲ್ಲ. ಈಗ ಮಳೆ ಸ್ವಲ್ಪ ಕಡಿಮೆ ಆಗಿದ್ದು, ರಸ್ತೆಗಳ ದುರಸ್ತಿ ಕೆಲಸ ನಡೆಸಲಾಗುತ್ತಿದೆ. ಸಂಭ್ರಮದ ಮಡಿಕೇರಿ ದಸರಾದ ಯಶಸ್ಸಿಗೆ ನಗರಸಭೆ ಕಡೆಯಿಂದ ಎಲ್ಲಾ ಸಹಕಾರ ನೀಡಲಾಗುವುದು.

ಮಹೇಶ್ ಜೈನಿ, ಉಪಾಧ್ಯಕ್ಷ, ಮಡಿಕೇರಿ ನಗರಸಭೆ

ಮಡಿಕೇರಿ ದಸರಾ ಜನೋತ್ಸವಕ್ಕೆ ವಿಶೇಷ ಮೆರುಗು ನೀಡುವ ಉದ್ದೇಶದಿಂದ ದಸರಾ ದಶಮಮಂಟಪ ಸಮಿತಿ ವತಿಯಿಂದ ದೀಪಾಲಂಕಾರ, ರಂಗೋಲಿ ಹಾಗೂ ಸೆಲ್ಫಿ ಸ್ಪರ್ಧೆ ಆಯೋಜಿಸಲಾಗಿದೆ. ಸೋಮವಾರ (ಸೆ.22) ಕರಗೋತ್ಸವ ಆರಂಭಗೊಳ್ಳುವ ಸಂಜೆ ಮನೆ ಮತ್ತು ಅಂಗಡಿಗಳನ್ನು ಹಣತೆ, ಕಾಲುದೀಪ, ತೂಗುದೀಪಗಳಿಂದ ಅಲಂಕರಿಸಬೇಕು. ಮನೆಗಳ ಮುಂದೆ ಸುಂದರವಾದ ವರ್ಣರಂಜಿತ ಚುಕ್ಕಿ ರಂಗೋಲಿಯನ್ನು ಬಿಡಿಸಬೇಕು. ಈ ಎರಡೂ ಸ್ಪರ್ಧೆಗಳ ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು.

ಬಿ.ಎಂ. ಹರೀಶ್ ಅಣ್ವೇಕರ್, ಅಧ್ಯಕ್ಷ, ದಸರಾ ದಶಮಮಂಟಪ ಸಮಿತಿ

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪರಿಕಲ್ಪನೆಯಲ್ಲಿ ಕಳೆದ ವರ್ಷದಿಂದ ಮಡಿಕೇರಿ ದಸರಾಕ್ಕೆ ಪರಿಚಯಿಸಲ್ಪಟ್ಟ ಕಾಫಿ ದಸರಾಕ್ಕೆ ಉತ್ತಮ ಸ್ಪಂದನ ದೊರಕಿದ್ದ ಹಿನ್ನಲೆಯಲ್ಲಿ ಈ ವರ್ಷವೂ ಕಾಫಿ ದಸರಾ ಆಯೋಜಿಸಲಾಗಿದೆ. ಕಾಫಿ ದಸರಾ ಅಂಗವಾಗಿ ಕಾಫಿ ಕೃಷಿಕರಿಗ ಸಾಕಷ್ಟು ಮಾಹಿತಿ ನೀಡುವ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ 10 ಸಾಧಕ ಕೃಷಿಕರಿಗೆ ಸನ್ಮಾನದ ಗೌರವವೂ ನೆರವೇರಲಿದೆ. ಕಾಫಿಯಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.

ಹೆಚ್.ಟಿ. ಅನಿಲ್, ಸಂಚಾಲಕ, ಕಾಫಿ ದಸರಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net