ದಸರಾ ಉತ್ಸವಕ್ಕೆ ಸಜ್ಜಾದ ತುಮಕೂರು ; ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ದ್ವಜಾರೋಹಣಕ್ಕೆ ಚಾಲನೆ

10TMK_dasara
Published on

ತುಮಕೂರು : ಅಕ್ಟೋಬರ್ 15ರಂದು ನಡೆಯುವ ಜಿಲ್ಲಾ ದಸರಾ ಉತ್ಸವದ ಅಂಗವಾಗಿ ಭಾನುವಾರ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ದ್ವಜಾರೋಹಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್.ಪಿ.ಚಿದಾನಂದ್ ಮಾತನಾಡಿ, ಮೂವತ್ತು ವರ್ಷಗಳಿಂದ ನಿರಂತರವಾಗಿ ಜಿಲ್ಲಾ ದಸರಾ ಉತ್ಸವ ನಡೆಯುತ್ತಾ ಬಂದಿದ್ದು, ಪ್ರತಿ ವರ್ಷ ಒಂದೊಂದು ಸಮುದಾಯದ ಧರ್ಮಗುರು ನೇತೃತ್ವದಲ್ಲಿ ದಸರಾ ಉತ್ಸವದ ಮೆರವಣಿಗೆ ಮತ್ತು ಸಾಮೂಹಿಕ ಶಮಿ ಪೂಜೆ ನೆರವೇರಿಸುವ ವಾಡಿಕೆ ನಡೆದುಕೊಂಡು ಬಂದಿದೆ, ಈ ಬಾರಿ ಬೆಂಗಳೂರಿನ ವಾಸವಿ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸುವರು ಎಂದರು.

15ರ ಮಧ್ಯಾಹ್ನ 1.30ಕ್ಕೆ ನಡೆಯುವ ಉತ್ಸವದಲ್ಲಿ ಬೆಂಗಳೂರಿನ ವಾಸವಿ ಪೀಠದ ಶ್ರೀಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಧ್ವಜಪೂಜೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್, ವರದಾಯಿನಿ ಸೇವಾ ಟ್ರಸ್ಟ್ ಗಾಯತ್ರಿ ನಾರಾಯಣ್ ಪಾಲ್ಗೊಳ್ಳುವರು. ಮೇಯರ್ ಬಿ.ಜಿ.ಕೃಷ್ಣಪ್ಪ ಮೆರವಣಿಗೆಗೆ ಚಾಲನೆ ನೀಡುವರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

80ಕ್ಕೂ ಹೆಚ್ಚು ಮುಜರಾಯಿ ಮತ್ತು ಖಾಸಗಿ ದೇವಾಲಯಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ನಗರದ ಟೌನ್‌ಹಾಲ್‌ನಿಂದ ಹೊರಡುವ ಮೆರವಣಿಗೆ ಎಂ.ಜಿ.ರಸ್ತೆ, ಜನರಲ್ ಕಾರ್ಯಪ್ಪ ರಸ್ತೆಯ ಮೂಲಕ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸವಾವೇಶಗೊಳ್ಳಲಿದೆ ಎಂದರು.

ಸಂಜೆ 4 ಗಂಟೆಗೆ ತುಮಕೂರು ತಾಲೂಕು ತಹಸೀಲ್ದಾರ್ ಜಿ.ಬಿ.ಮೋಹನ್‌ಕುಮಾರ್ ಸಾಮೂಹಿಕ ಶಮಿ ಪೂಜೆ ನೆರವೇರಿಸಲಿದ್ದು, ಶ್ರೀವಾಸವಿ ಪೀಠದ ಶ್ರೀಶ್ರೀಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ದಸರಾ ಸಮಿತಿ ಗೌರವಾಧ್ಯಕ್ಷ ಬಿ.ಎಸ್.ಮಂಜುನಾಥ್, ಮಹಿಳಾ ಸಮನ್ವಯ ಸಮಿತಿ ನಗರ ವ್ಯವಸ್ಥಾ ಪ್ರಮುಖ್ ತೇಜಶ್ವಿನಿ ವಿನಾಯಕ್, ಓಂಕಾರೇಶ್ವರಿ ಮತ್ತಿತರರು ಭಾಗವಹಿಸುವರು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ನಗೆಹಬ್ಬ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.

ಸಂಯೋಜಕ ಕೆ.ಎನ್.ಗೋವಿಂದರಾವ್, ಖಜಾಂಚಿ ಜಿ.ಎಸ್.ಬಸವರಾಜು, ದಸರಾ ಉತ್ಸವ ಸಮಿತಿ ವಾಜಿ ಅಧ್ಯಕ್ಷ ವಿಶ್ವನಾಥ್, ಗುರುಕುಲ ಮಲ್ಲಿಕಾರ್ಜುನ್, ನಾಟಕ ಅಕಾಡೆಮಿ ಸದಸ್ಯ ಟಿ.ಎಸ್.ಸದಾಶಿವಯ್ಯ ಇದ್ದರು.

ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಕರೊನಾ ಮೂರನೇ ಅಲೆ ಇಲ್ಲದಂತಾಗಿದೆ. ಹಾಗೆಯೇ ಮುಂದೆಯೂ ಭಾರತದಂತೆ ದೇವಿಯಲ್ಲಿ ಪ್ರಾರ್ಥಿಸಿ ಶ್ರೀರಾಮ ಮಂದಿರದಲ್ಲಿ ದುರ್ಗಾ ಹೋಮ, ಗಣಪತಿ ಹೋಮ ಹಾಗೂ ಶಾಂತಿ ಹೋಮಗಳನ್ನು ದಸರಾ ಸಮಿತಿಯಿಂದ ನೆರವೇರಿಸಲಾಗಿದೆ. ಎಸ್.ಪಿ.ಚಿದಾನಂದ್ ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕಳೆದ ಮೂವತ್ತು ವರ್ಷಗಳಿಂದ ಸರ್ಕಾರದ ಯಾವುದೇ ಅನುದಾನ ಪಡೆಯದೆ ತುಮಕೂರು ನಗರ ಮತ್ತು ಜಿಲ್ಲೆಯ ನಾಗರಿಕರು ದಸರಾ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜಿ.ಬಿ.ಜೋತಿ ಗಣೇಶ್, ನಗರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net