ದಾಸನಪುರ ಬಸ್ ಡಿಪೋಗೆ ಬೀಗ?

dasanapura feb 23
Published on

ಬೆಂಗಳೂರು: ‘ಕೋಡಗನ ಕೋಳಿ ನುಂಗಿತ್ತಾ...’ ಎಂಬ ಸಂತ ಶಿಶುನಾಳ ಷರೀಫ ತತ್ವಪದವಿದೆ. ಅದನ್ನು ನೆನಪಿಸುವಂತೆ, ಜಲಾನಯನ ಪ್ರದೇಶದಲ್ಲಿ ಡಿಪೋ ನಿರ್ವಿುಸಿರುವ ಬಿಎಂಟಿಸಿ ಅಧಿಕಾರಿಗಳ ಬೇಜವಾಬ್ದಾರಿತನ 6 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗಿರುವ ಬಸ್ ಡಿಪೋವನ್ನೇ ಆಪೋಶನ ತೆಗೆದುಕೊಳ್ಳಲು ಮುಂದಾಗಿದೆ.

ಆದಾಯ ಕುಸಿತ, ವೆಚ್ಚ ಹೆಚ್ಚಳದಿಂದಾಗಿ ಬಿಎಂಟಿಸಿ ಭಾರಿ ನಷ್ಟದಲ್ಲಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ನಿಗಮ ಹಲವು ಕಸರತ್ತು ನಡೆಸುತ್ತಿದೆ. ಹೀಗಿರುವಾಗ, 6.64 ಕೋಟಿ ರೂ. ವೆಚ್ಚದಲ್ಲಿ ನಿರ್ವಣಗೊಂಡಿರುವ ದಾಸನಪುರ ಡಿಪೋಗೆ ಬಾಗಿಲು ಮುಚ್ಚಬೇಕಾದ ಅನಿವಾರ್ಯತೆಗೆ ಬಿಎಂಟಿಸಿ ಸಿಲುಕಿದೆ.

ಅಧಿನಿಯಮದ ಉಲ್ಲಂಘನೆ: ಜಲಾನಯನ ಪ್ರದೇಶದ ನಿಯಮ ಉಲ್ಲಂಘಿಸಿ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಬಿಎಂಟಿಸಿ ದಾಸನಪುರದಲ್ಲಿ ಡಿಪೋ ನಿರ್ವಿುಸಿದೆ. ಬಸ್​ಗಳನ್ನು ತೊಳೆಯುವ ಕೊಳಕುನೀರು, ತೈಲಯುಕ್ತ ನೀರನ್ನು ಚರಂಡಿಗೆ ಹರಿಸುತ್ತಿದೆ. ಕೊಳಕು ನೀರನ್ನು ಬಾವಿ ಅಥವಾ ನೆಲದ ಮೇಲೆ ಹರಿಸುವಂತಿಲ್ಲ ಎಂಬ ವಾಯು ಮತ್ತು ಜಲ ಅಧಿನಿಯಮದ ಉಲ್ಲಂಘನೆ ಇದಾಗಿದೆ.

ಸೂಚನೆ ಪಾಲಿಸಿದರೆ ಕದವಿಕ್ಕುವ ಸ್ಥಿತಿ!: ದಾಸನಪುರ ಡಿಪೋಗೆ 62.5 ಕೆವಿಎ ಸಾಮರ್ಥ್ಯದ ಜನರೇಟರ್ ಅಳವಡಿಸಲಾಗಿದೆ. ಇದನ್ನು ಅಳವಡಿಸಿದ ಬಳಿಕ ಜನರೇಟರ್ ಅಳವಡಿಕೆಗೆ ಅನುಮತಿ ಕೋರಿ ಬಿಎಂಟಿಸಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಆಗ ಸ್ಥಳ ಪರಿಶೀಲನೆ ಕೈಗೊಂಡಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಜನರೇಟರ್​ಗೆ ಶಬ್ದ ನಿಯಂತ್ರಕ ಜೋಡಣೆ ಮಾಡಬೇಕು. ಜನರೇಟರ್​ನ ಸಾಮರ್ಥ್ಯ ಆಧರಿಸಿ ನಿರ್ದಿಷ್ಟ ಎತ್ತರದ ಚಿಮಣಿ ನಿರ್ವಿುಸಬೇಕು ಎಂದು ಸೂಚಿಸಿತ್ತು. ಹಾಗೂ ಬಸ್​ಗಳನ್ನು ತೊಳೆದ ಕೊಳಕು ನೀರು ಚರಂಡಿಗೆ ಹರಿಯದಂತೆ ಎಚ್ಚರ ವಹಿಸುವಂತೆಯೂ ಸಲಹೆ ನೀಡಿತ್ತು.

ಅದರಂತೆ ಬಿಎಂಟಿಸಿ 28 ಲಕ್ಷ ರೂ. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಿತ್ತು. ಜನರೇಟರ್​ನ ಚಿಮಣಿಯ ಎತ್ತರವನ್ನೂ ಹೆಚ್ಚಿಸಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿಯನ್ನೂ ಒದಗಿಸಿತ್ತು. ಆದರೀಗ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಡಿಪೋ ನಿರ್ವಿುಸಲಾಗಿದೆ. ಇದು ಜಲಾನಯನ ಪ್ರದೇಶದ ಅಧಿಸೂಚನೆಯ ಉಲ್ಲಂಘನೆಯಾಗಿದೆ. ಆದ್ದರಿಂದ, ಡಿಪೋವನ್ನು ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಬಿಎಂಟಿಸಿಗೆ ಸೂಚಿಸಿದೆ.

ತಲೆಕೆಡಿಸಿಕೊಳ್ಳದ ಬಿಎಂಟಿಸಿ

ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ನಂತರ ಬಿಎಂಟಿಸಿಗೆ ನಷ್ಟವಾಗುತ್ತದೆ ಎಂಬ ಕಾರಣ ನೀಡಿ ಡಿಪೋ ಮುಚ್ಚದೆ ಬಿಎಂಟಿಸಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ರಾಜ್ಯ ಸರ್ಕಾರದ ಲೆಕ್ಕಪರಿಶೋಧನಾ ವರದಿಯಲ್ಲೂ ಈ ಅಂಶ ಉಲ್ಲೇಖವಾಗಿದೆ. ಬಿಎಂಟಿಸಿ ಜಲಾನಯನ ಪ್ರದೇಶ ನಿಯಮ ಉಲ್ಲಂಘಿಸಿರುವುದಾಗಿ ಆರೋಪಿಸಿದೆ. ಆದರೂ ಬಿಎಂಟಿಸಿ ಅಧಿಕಾರಿಗಳು ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.

2 ಕೋಟಿ ರೂ. ವ್ಯರ್ಥ?

ದಾಸನಪುರ ಡಿಪೋ ನಿರ್ವಣಕ್ಕಾಗಿ ರಾಜ್ಯ ಸರ್ಕಾರದಿಂದ ಬಿಎಂಟಿಸಿ 5.27 ಕೋಟಿ ರೂ. ಕೊಟ್ಟು 13.4 ಎಕರೆ ಭೂಮಿ ಖರೀದಿಸಿದೆ. ಬಳಿಕ 6.64 ಕೋಟಿ ರೂ. ವೆಚ್ಚ ಮಾಡಿ ಡಿಪೋ ನಿರ್ವಿುಸಿದೆ. ಅದರಂತೆ ಈ ಡಿಪೋ ನಿರ್ವಣಕ್ಕೆ ಒಟ್ಟು 11.91 ಕೋಟಿ ರೂ. ವೆಚ್ಚವಾದಂತಾಗಿದೆ. ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಮತ್ತು ಲೆಕ್ಕಪರಿಶೋಧನಾ ವರದಿಯಲ್ಲಿನ ಆಕ್ಷೇಪಣೆಯಿಂದಾಗಿ ಡಿಪೋ ಮುಚ್ಚುವ ಪರಿಸ್ಥಿತಿ ನಿರ್ವಣವಾಗಿದ್ದು, ಅಷ್ಟು ಮೊತ್ತದ ಸಾರ್ವಜನಿಕ ಹಣ ನಿರುಪಯುಕ್ತವಾಗಲಿದೆ.

ಗಿರೀಶ್ ಗರಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net