ಮುಚ್ಚುವ ಹಂತ ತಲುಪಿದ ದಾಸನಹುಂಡಿ ಸರ್ಕಾರಿ ಶಾಲೆ

17 yelandur 01
Published on

ಯಳಂದೂರು: ಶೂನ್ಯ ದಾಖಲಾತಿ ಹಿನ್ನೆಲೆಯಲ್ಲಿ ತಾಲೂಕಿನ ದಾಸನಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚುವ ಹಂತ ತಲುಪಿದೆ.

ಬಿಆರ್‌ಟಿ ಅರಣ್ಯ ಸಮೀಪದಲ್ಲಿರುವ ದಾಸನಹುಂಡಿ ಗ್ರಾಮದಲ್ಲಿ ಒಕ್ಕಲಿಗ ಗೌಡ್ರು 150, ಪರಿಶಿಷ್ಟ ಪಂಗಡಕ್ಕೆ ಸೇರಿದ 20 ಸೇರಿದಂತೆ 170ಕ್ಕೂ ಹೆಚ್ಚು ಕುಟುಂಬ ವಾಸವಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ತರಗತಿವರೆಗೂ ಒಟ್ಟು 18 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇದರಲ್ಲಿ 5ನೇ ತರಗತಿಯಲ್ಲಿ 5 ವಿದ್ಯಾರ್ಥಿಗಳು ತೇರ್ಗಡೆಯಾದ ಹಿನ್ನೆಲೆಯಲ್ಲಿ ಬೇರೆ ಶಾಲೆಗೆ ಹೋದರು.

ಇನ್ನು ಶಾಲೆಯಲ್ಲಿ ಸಮಪರ್ಕ ಶಿಕ್ಷಣ ಕೊರತೆ, ಒಬ್ಬ ಶಿಕ್ಷಕರಿಂದ ಪಾಠ, ಪ್ರವಚನ ನಡೆಯುತ್ತಿದ್ದರಿಂದ ಮಕ್ಕಳ ಕಲಿಕಾ ದೃಷ್ಟಿಯಿಂದ ಉಳಿದ 1 ರಿಂದ 5 ತರಗತಿಯ ಒಟ್ಟು 13 ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳನ್ನು ಪಟ್ಟಣದ ಲಯನ್ಸ್ ಶಾಲೆಗೆ ಸೇರಿಸಿದ್ದಾರೆ. ಪರಿಣಾಮ ಶಾಲೆಯಲ್ಲಿ ಶೂನ್ಯ ದಾಖಲಾತಿಯಾದ ಕಾರಣ ಸರ್ಕಾರಿ ಶಾಲೆ ಮುಚ್ಚುವ ಹಂತ ತಲುಪಿದೆ.

ಶಿಕ್ಷಣ ಇಲಾಖೆ ನಿರ್ಲಕ್ಷೃ:
ಶಾಲೆಯ ಬಹುತೇಕ ವಿದ್ಯಾರ್ಥಿಗಳು ಬೇರೆ ಶಾಲೆಗೆ ಸೇರ್ಪೆಡೆಯಾಗಿ ಹಲವು ದಿನಗಳ ಕಳೆದರೂ ಕ್ಷೇತ್ರಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸುವ ಕೆಲಸ ಮಾಡಿಲ್ಲ. ಪಾಲಕರನ್ನು ಮನವೊಲಿಸಿ ಮಕ್ಕಳನ್ನು ಮತ್ತೆ ಶಾಲೆಗೆ ಸೇರ್ಪಡೆಗೊಳಿಸುವ ಕೆಲಸಕ್ಕೂ ಮುಂದಾಗಿಲ್ಲ. ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ಕ್ರೀಡೆ, ಸಾಂಸ್ಕೃತಿ ಚಟುವಟಿಕೆಗಳು, ಮೂಲಸೌಲಭ್ಯ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆಹರಿಸುವಲ್ಲಿ ಯಾರೊಬ್ಬರೂ ಮುಂದಾಗದ ಪರಿಣಾಮ ಸರ್ಕಾರಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿರುವುದು ದೊಡ್ಡ ದುರಂತ.

ಸರ್ಕಾರಿ ಶಾಲೆ ಬಗ್ಗೆ ಅಸಡ್ಡೆ!
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಪಾಲಕರ ಮನಸ್ಥಿತಿ ಒಂದೆಡೆಯಾದರೆ ಗ್ರಾಮೀಣ ಮಕ್ಕಳ ಜನಸಂಖ್ಯೆ ಕಡಿಮೆ ಇರುವುದೂ ಮತ್ತೊಂದೆಡೆಯಾಗಿದೆ. ನುರಿತ ಶಿಕ್ಷಕರು, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ವಿದ್ಯಾರ್ಥಿ ವೇತನ, ಬೈಸಿಕಲ್, ನೀಡಲಾಗುತ್ತಿದೆಯಾದರೂ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯಿಲ್ಲ ಎಂಬ ಕಾರಣಕ್ಕೆ ಖಾಸಗಿ ಶಾಲೆಯತ್ತ ಮುಖ ಮಾಡಬೇಕಿದೆ ಎಂಬುದು ಪಾಲಕರ ವಾದ.

ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಸಮರ್ಪಕವಾಗಿ ಪಾಠ-ಪ್ರವಚನ ನಡೆಯದ ಕಾರಣ ಮಕ್ಕಳ ಉತ್ತಮ ಕಲಿಕಾ ದೃಷ್ಟಿಯಿಂದ ಪಾಲಕರು ಬೇರೆ ಶಾಲೆಗೆ ದಾಖಲು ಮಾಡುತ್ತಿದ್ದಾರೆ. ಇಷ್ಟಾದರೂ ಶಿಕ್ಷಣ ಇಲಾಖೆ ನಿರ್ಲಕ್ಷೃ ವಹಿಸಿದ ಕಾರಣ ಶಾಲೆ ಮುಚ್ಚುವ ಹಂತ ತಲುಪಿದೆ. ಈ ಬಗ್ಗೆ ಪಾಲಕರ ಸಭೆ ಕರೆದು ಮತ್ತೆ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮವಹಿಸಬೇಕಾಗಿದೆ.ಡಿ.ಸಿ.ಬಾಬು ಗ್ರಾ.ಪಂ. ಸದಸ್ಯರು, ದಾಸನಹುಂಡಿ ಗ್ರಾಮ

ದಾಸನಹುಂಡಿ ಸರ್ಕಾರಿ ಶಾಲೆಯಲ್ಲಿ ಸಮರ್ಪಕವಾಗಿ ಪಾಠ ಮಾಡದ ಪರಿಣಾಮ ಪಾಲಕರು ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಿದ್ದಾರೆ. ಶೀಘ್ರ ಪಾಲಕರ ಸಭೆ ಕರೆದು ಅವರ ಮನವೊಲಿಸಿ ಮತ್ತೆ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿ ಗಮಹರಿಸಲಾಗುವುದು. ಜತೆಗೆ ಅತಿಥಿ ಶಿಕ್ಷಕರನ್ನು ನೇಮಿಸುವ ನಿಟ್ಟಿನಲ್ಲೂ ಕ್ರಮವಹಿಸಲಾಗುವುದು.ಕೆ.ಕಾಂತರಾಜು ಕ್ಷೇತ್ರ ಶಿಕ್ಷಣಾಧಿಕಾರಿ, ಯಳಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net