ಕೇಂದ್ರ ಬಜೆಟ್ ವಿರುದ್ಧ ಆಕ್ರೋಶ: ನಗರದಲ್ಲಿ ದಸಂಸ ಪ್ರತಿಭಟನೆ

Dasamsa protest Mandya
Published on

ಮಂಡ್ಯ: ಕೇಂದ್ರ ಸರ್ಕಾರದ ಬಜೆಟ್ ಖಂಡಿಸಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುವ ರಾಷ್ಟ್ರೀಯ ಪರಿಶಿಷ್ಟ ಜಾತಿ, ಪಂಗಡಗಳ ಉಪ-ಯೋಜನೆ ಕಾಯ್ದೆ ಘೋಷಣೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಪ್ಪು ಬಾವುಟದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರ್‌ಎಂವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಮಿತಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ರವಾನಿಸಿದರು. ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಶೋಷಿತ ಸಮುದಾಯವನ್ನು ನಿರ್ಲಕ್ಷಿೃಸಿದೆ. ಶೋಷಿತರ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ಎಂಬುದನ್ನು ಅರಿಯಬೇಕಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದ ಬಹುಜನರನ್ನು ನಯವಾಗಿ ವಂಚಿಸುವ ಹುನ್ನಾರದ ಬಜೆಟ್ ನೀಡಿದ್ದಾರೆ. ಸಂವಿಧಾನದ ಅನುಚ್ಛೇದ(38)(39) ನಿರ್ಲಕ್ಷಿೃಸುವ ಮೂಲಕ ವಿದ್ಯೆ, ಅಧಿಕಾರ ಸಂಪತ್ತು, ಭೂಮಿ, ಉದ್ಯೋಗ, ಕೈಗಾರಿಕೆಯನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಾತ್ರವಲ್ಲದೆ ಕೇವಲ ಬಂಡವಾಳಶಾಹಿ ಜನರನ್ನು ಇನ್ನಷ್ಟು ಅನುಕೂಲವಾಗುವಂತೆ ಯೋಜನೆ ನೀಡಲಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ದೇಶದ ಜನತೆಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಘೋಷಣೆ ಮಾಡಬೇಕು. ಕೃಷಿ ಉತ್ಪನ್ನಕ್ಕೆ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಭಗವಾನ್ ಬುದ್ಧ ಅವರ ವಿಚಾರ ಕ್ರಾಂತಿ ಮತ್ತು ಬೌದ್ದ ಸ್ಮಾರಕ ಸಂರಕ್ಷಣೆಗಾಗಿ ರಾಷ್ಟ್ರೀಯ ಪ್ರಾಧಿಕಾರ ರಚಿಸಬೇಕು. ಇನ್ನು ರಾಜ್ಯಸರ್ಕಾರ ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಜನರ ಆರೋಗ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಬರಗಾಲ ನಿರ್ವಹಣೆಗೆ ಕೆರೆಗಳ ಹೂಳೆತ್ತಿಸಿ ನೀರು ತುಂಬಿಸಿ ಕೆರೆ ಸುತ್ತಲೂ ಆರಣ್ಯ ಗಿಡಗಳನ್ನು ನಾಟಿ ಮಾಡಿಸಿ ಸಂರಕ್ಷಿಸಲು ಅನುದಾನ ಘೋಷಿಸಬೇಕು. ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್‌ಕುಮಾರ್, ಬಿ.ಆನಂದ್, ನಾಗರಾಜ್, ಸುರೇಶ್‌ಕುಮಾರ್, ರಾಮಕೃಷ್ಣ, ಭಾಗ್ಯಮ್ಮ, ಗೀತಾ, ಸುಕನ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net