ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯ: ಕಿವಿ ಮೇಲೆ ಹೂವಿಟ್ಟುಕೊಂಡು ದಸಂಸ ಕಾರ್ಯಕರ್ತರ ಪ್ರತಿಭಟನೆ

1 (1)
Published on

ಮಂಡ್ಯ: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯದೆ ದಲಿತರ ಕಿವಿಯಲ್ಲಿ ಹೂವು ಇಟ್ಟಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಿವಿಯಲ್ಲಿ ಹೂವು ಇಟ್ಟುಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜುಗೆ ಮನವಿ ಸಲ್ಲಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ ಕಾಯ್ದೆ-2013 ರ ಕಲಂ 7(ಡಿ) ತಿದ್ದುಪಡಿ ಮಾಡುವುದಾಗಿ ಅಧಿವೇಶನದಲ್ಲಿ ಮಂಡಿಸಿದ್ದರು. ಆದರೆ ತಿದ್ದುಪಡಿ ಮಾಡಲಿಲ್ಲ ಅಥವಾ ಸುಗ್ರೀವಾಜ್ಞೆ ಹೊರಡಿಸಲಿಲ್ಲ. ಆದರೂ ಎಸ್ಸಿ, ಎಸ್ಟಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಪರಿಶಿಷ್ಟರಿಗೆ ಮೀಸಲಿರಿಸಿದ ಅನುದಾನದಲ್ಲಿ 11 ಸಾವಿರ ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲು ತೀರ್ಮಾನಿಸುವ ಮೂಲಕ ದಲಿತರ ಕಿವಿಯಲ್ಲಿ ಹೂವು ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಣ ವರ್ಗಾವಣೆಗೆ ನಿರಾಕರಿಸದೆ ಮೌನ ವಹಿಸಿರುವುದು ದಲಿತ ಸಮುದಾಯಕ್ಕೆ ನೋವುಂಟು ಮಾಡಿದೆ. ವಿಧಾನ ಮಂಡಲದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳು ಅನ್ಯಾಯ ಖಂಡಿಸಬೇಕು. ಬಜೆಟ್ ಭಾಷಣದಲ್ಲಿ ನುಡಿದಂತೆ ಪರಿಶಿಷ್ಟ ಜಾತಿ/ಪಂಗಡ ಉಪ ಯುವಜನ ಕಾಯ್ದೆ 2013ರ ಕಲಂ7(ಡಿ) ತಿದ್ದುಪಡಿ ಮಾಡಬೇಕು, ಪರಿಶಿಷ್ಟರಿಗೆ ಮೀಸಲಾಗಿದ್ದ 11 ಸಾವಿರ ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಕೆ.ಎಂ.ಅನಿಲ್ಕುಮಾರ್, ಕೆ.ಎಂ.ಶ್ರೀನಿವಾಸ್, ಎಸ್.ಕುಮಾರ್, ಶಿವರಾಜ್ ಆತಗೂರು, ವೈ.ಸುರೇಶ್‌ಕುಮಾರ್, ರಾಮಕೃಷ್ಣ, ಹರಿಕುಮಾರ್, ಸೋಮಶೇಖರ್, ಬಿ.ಎಂ.ಸೋಮಶೇಖರ್, ಭಾಗ್ಯಮ್ಮ, ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net