

ಮಂಡ್ಯ: ಮದ್ದೂರು ಪುರಸಭೆಯ ನೌಕರ ಮನಿಷ್ ಅರಿಯದೇ ಮಾಡಿದ ಸಣ್ಣ ತಪ್ಪಿಗೆ ಸೇವೆಯಿಂದ ವಜಾಗೊಳಿಸಿರುವುದನ್ನು ಖಂಡಿಸಿ ಫೆ.3ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ನೌಕರನ ವಜಾ ಆದೇಶ ತೆರವುಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ ಒತ್ತಾಯಿಸಿದರು.
ಮದ್ದೂರು ಶಾಸಕರ ಕಚೇರಿಯನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿರುವ ಸಂಬಂಧ ದೂರು ದಾಖಲಿಸಿರುವುದಕ್ಕೆ ಪುರಸಭೆ ಆಡಳಿತ ಮಂಡಳಿ ಗುತ್ತಿಗೆದಾರ ಸಂಸ್ಥೆಗೆ ಪತ್ರ ಬರೆದು ಸೇವೆಯಿಂದ ವಜಾ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸಾಮಾಜಿಕ ಹೋರಾಟಗಾರ ಲಕ್ಷ್ಮಣ್ ಚೀರನಹಳ್ಳಿ, ಎಂ.ವಿ.ಕೃಷ್ಣ, ಮೂರ್ತಿ ಚಿಕ್ಕರಸಿನಕೆರೆ, ಉಮೇಶ್, ಶಿವು ಇದ್ದರು.