‘ಒಂದು ದೇಶ, ಒಂದು ಚುನಾವಣೆ’ಗೆ ದಸಂಸ ವಿರೋಧ

mysore
Published on

ಮೈಸೂರು: ‘ಒಂದು ದೇಶ, ಒಂದು ಚುನಾವಣೆ’ ಪದ್ಧತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ನರಗದ ಗಾಂಧಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.


‘ಒಂದು ದೇಶ; ಒಂದು ಚುನಾವಣೆ’ ಪದ್ಧತಿಗೆ ಕೇಂದ್ರ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದರೆ, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಜತೆಗೆ, ಇದರ ಅನುಷ್ಠಾನವೂ ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.


ಇದು ಬಿಜೆಪಿ ರಹಸ್ಯ ಕಾರ್ಯಸೂಚಿ. ಈ ವ್ಯವಸ್ಥೆಗೆ ಜನಾಭಿಪ್ರಾಯವೂ ವಿರುದ್ಧವಾಗಿದೆ. ಪ್ರಜಾಪ್ರಭುತ್ವಕ್ಕೂ ಮಾರಕವಾಗಿದೆ. ಲೋಕಸಭೆ, ವಿಧಾನಸಭೆಯಲ್ಲಿ ಆಡಳಿತರೂಢ ಪಕ್ಷ ವಿಶ್ವಾಸ ಮತ ಗಳಿಸಲು ಸೋತರೆ ಎದುರಾಗುವ ಬಿಕ್ಕಟ್ಟಿಗೆ ಇದರಲ್ಲಿ ಪರಿಹಾರ ಇಲ್ಲ. ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಯೇ ಯೋಗ್ಯ ಪರಿಹಾರವಾಗಿದೆ. ವಿಶ್ವಾಸ ಮತ ಗಳಿಸಲು ವಿಫಲವಾದ ಪಕ್ಷಕ್ಕೆ ಅಧಿಕಾರದಲ್ಲಿ ಮುಂದುವರಿಸಲು ಅವಕಾಶ ನೀಡಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಲೋಕಸಭೆ, ವಿಧಾನಸಭಾಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಶಕ್ತಿ, ಸಾಮರ್ಥ್ಯ ಚುನಾವಣಾ ಆಯೋಗಕ್ಕೆ ಇಲ್ಲ. ಈಗಿರುವ ಚುನಾವಣಾ ವ್ಯವಸ್ಥೆಯನ್ನು ದುಪ್ಟಟ್ಟು ಪ್ರಮಾಣದಲ್ಲಿ ವಿಸ್ತರಿಸಬೇಕಾಗುತ್ತದೆ. ಜತೆಗೆ, ಸಂವಿಧಾನಕ್ಕೆ, ಪ್ರಜಾಪ್ರತಿನಿಧಿ ಕಾಯ್ದೆಗೂ ತಿದ್ದುಪಡಿ ಮಾಡಬೇಕಿದೆ. ಇದು ಕಷ್ಟಕರ. ಇದು ಗೊತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಗೊಂದಲ ಸೃಷ್ಟಿಸಿ ತಮ್ಮ ವೈಫಲ್ಯವನ್ನು ಮುಚ್ಚಿ ಹಾಕುವ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದೂ ದೂರಿದರು.


ಜಾತಿ ನಿಂದನೆ, ಮಹಿಳೆ ಮೇಲಿನ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದೂ ಆಗ್ರಹಿಸಿದರು


ಸಂಘಟನೆಯ ಮುಖಂಡರಾದ ರಾಜಯ್ಯ ಇಟ್ನ, ಮಲ್ಲೇಶ್ ಚುಂಚನಹಳ್ಳಿ, ಸುರೇಶ್ ಯರಗನಹಳ್ಳಿ, ಗೋವಿಂದರಾಜು ಅಶೋಕಪುರಂ, ರಾಜು, ನೀಲವಾಡಿ, ಕೃಷ್ಣ ಗೊಳಗಟ್ಟ, ಪುಟ್ಟಸ್ವಾಮಿ ದೇವರಸನಹಳ್ಳಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net