ಸೀಮೆಎಣ್ಣೆ ವಿತರಿಸಲು ದಸಂಸ ಆಗ್ರಹ

HUN-JULY-26-1(DSS STRIKE)
Published on

ಹುಣಸೂರು: ಮೂಲ ನಿವಾಸಿ ಗಿರಿಜನ, ಅಲೆಮಾರಿ ನಿರ್ಗತಿಕ ಕುಟುಂಬಗಳಿಗೆ ಸೀಮೆಎಣ್ಣೆ ವಿತರಣೆ ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ನಗರದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈ ಹಿಂದೆ ತಾಲೂಕಿನ ಬಿಪಿಎಲ್ ಕಾರ್ಡ್‌ದಾರರಿಗೆ 1ಲೀಟರ್ ಸೀಮೆಎಣ್ಣೆಯನ್ನು ಪ್ರತಿ ತಿಂಗಳು ವಿತರಣೆ ಮಾಡಲಾಗುತ್ತಿತ್ತು. ಆದರೆ ಕಳೆದ 4 ತಿಂಗಳಿಂದ ಸೀಮೆಎಣ್ಣೆ ವಿತರಣೆ ನಿಲ್ಲಿಸಲಾಗಿದೆ. ಇದರಿಂದ ಬಡ ಕುಟುಂಬಗಳಿಗೆ ತುಂಬಾ ತೊಂದರೆಯಾಗುತ್ತಿದೆ.


ಹುಣಸೂರು ತಾಲೂಕಿನಲ್ಲಿ ಸುಮಾರು 54 ಮೂಲನಿವಾಸಿ ಗಿರಿಜನ ಹಾಡಿಗಳಿವೆ ಮತ್ತು ಸುಮಾರು 25 ಗ್ರಾಮಗಳಲ್ಲಿ ಅಲೆಮಾರಿ ಕುಟುಂಬಗಳು ವಾಸ ಮಾಡುತ್ತಿವೆ. ಅನೇಕ ನಿರ್ಗತಿಕ ಕುಟುಂಬಗಳು ಇಂದಿಗೂ ಅವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲಾಗದೆ ಸೀಮೆಎಣ್ಣೆಯಿಂದಲೇ ತಮ್ಮ ಮನೆಗಳಲ್ಲಿ ದೀಪ ಹಚ್ಚುವ ಪರಿಸ್ಥಿತಿ ಇದೆ. ಕಾಡಂಚಿನಲ್ಲಿ ವಾಸ ಮಾಡುವ ಗಿರಿಜನರ ಹಾಡಿಗಳಲ್ಲಿ ತುಂಬಾ ಅಗತ್ಯವಾಗಿ ಆ ಕುಟುಂಬಗಳ ಮನೆಗಳಿಗೆ ಸೀಮೆಎಣ್ಣೆಯ ಅವಶ್ಯಕತೆ ಇದೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಮತ್ತು ಅರಣ್ಯದಂಚಿನಲ್ಲಿ ವಾಸ ಮಾಡುತ್ತಿರುವುದರಿಂದ ಸಮರ್ಪಕವಾಗಿ ವಿದ್ಯುತ್ ಸಂಪರ್ಕವಿಲ್ಲದೆ ಗುಡ್ಡಗಾಡಿನ ಗಿರಿಜನ ವಾಸಿಗಳು ರಾತ್ರಿಯ ವೇಳೆಯಲ್ಲಿ ಕತ್ತಲೆಯಲ್ಲಿ ಬದುಕುವ ಸ್ಥಿತಿ ಇದೆ.


ತಾಲೂಕಿನ ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅತೀ ಹಿಂದುಳಿದ ಕುಟುಂಬಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಂಡಿಲ್ಲ. ಈ ಕುಟುಂಬಗಳಿಗೂ ಸಹ ರಾತ್ರಿಯ ವೇಳೆಯಲ್ಲಿ ತಮ್ಮ ಮನೆಗಳಲ್ಲಿ ದೀಪ ಹಚ್ಚಿಕೊಳ್ಳಲು ಸೀಮೆಎಣ್ಣೆಯ ಅಗತ್ಯ ತುಂಬಾ ಇತ್ತು. ಆದರೆ ಕಳೆದ 4 ತಿಂಗಳಿನಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸೀಮೆಣ್ಣೆಯ ವಿತರಣೆಯನ್ನು ಸ್ಥಗಿತಮಾಡಿರುವುದು ಇಂತಹ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಹಿಂದಿನಂತೆ ಬಿಪಿಎಲ್ ಕುಟುಂಬಗಳಿಗೆ 1 ಲೀಟರ್ ಸೀಮೆಎಣ್ಣೆಯನ್ನು ವಿತರಣೆ ಮಾಡಬೇಕೆಂದು ಅವರು ಒತ್ತಾಯಿಸಿದರು.


ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್ ಶ್ರೀಪಾದ ಅವರು, ಗಿರಿಜನರಿಗೆ, ಅಲೆಮಾರಿ ಸಮುದಾಯಗಳಿಗೆ ಸೀಮೆಎಣ್ಣೆ ತುಂಬಾ ಅಗತ್ಯವಾಗಿ ಬೇಕಾಗಿರುವುದರಿಂದ ಕೂಡಲೇ ಈ ಕುಟುಂಬಗಳಿಗೆ ಪ್ರತಿ ತಿಂಗಳು ಸೀಮೆಎಣ್ಣೆಯನ್ನು ವಿತರಣೆ ಮಾಡುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.


ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ದೇವೇಂದ್ರ ಕುಳುವಾಡಿ, ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಚಿಲ್ಕುಂದ ವೇಣುಗೋಪಾಲ, ಮಲ್ಲಿಕ್ ಯಶೋಧರಪುರ ಮಹಿಳಾ ಸಂಘಟನೆಯ ಬನ್ನಿಬೀದಿ ರೇಣುಕಾ, ನಾಸಿರಾ ಬಾನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net